ಹಾಸನ: ಅಪಘಾತದಲ್ಲಿ ಮೃತಪಟ್ಟಿದ್ದ ಯುವತಿ ಪ್ರಕರಣಕ್ಕೆ ದೊಡ್ಡ ಟ್ವಿಸ್ಟ್ ಸಿಕ್ಕಿದೆ. ಪ್ರೀತಿ ನಿರಾಕರಿಸಿದ್ದಕ್ಕೆ ಪಾಗಲ್ ಪ್ರೇಮಿಯೊಬ್ಬ ಕಾರಿನಿಂದ ಯುವತಿಗೆ ಡಿಕ್ಕಿ ಹೊಡೆದು ಕೊಲೆ ಮಾಡಿರುವುದು ಪೊಲೀಸ್ ತನಿಖೆ ವೇಳೆ ಬೆಳಕಿಗೆ ಬಂದಿದೆ.
ಆಗಸ್ಟ್ 3 ರಂದು ಹಾಸನ ಹೊರವಲಯದ ಬೂವನಹಳ್ಳಿ ಕ್ರಾಸ್ ಬಳಿ ಸರಣಿ ಅಪಘಾತ ನಡೆದಿತ್ತು. ಆಲ್ಟೋ ಕಾರೊಂದು ಕೆಲಸಕ್ಕೆ ನಡೆದುಕೊಂಡು ಹೋಗುತ್ತಿದ್ದ ಯುವತಿ ಶರಣ್ಯಳಿಗೆ ಡಿಕ್ಕಿ ಹೊಡೆದು ಬಳಿಕ ಹಾಲಿನ ಗೂಡ್ಸ್ ಆಟೋ, 2 ಬೈಕ್ ಹಾಗೂ ಸಾರಿಗೆ ಬಸ್‌ಗೆ ಡಿಕ್ಕಿ ಹೊಡೆದು ಚಾಲಕ ಎಸ್ಕೇಪ್ ಆಗಿದ್ದ.
ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಶರಣ್ಯ ಆಗಸ್ಟ್ 4 ರಂದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಳು. ಅಂದೇ ಶರಣ್ಯಳ ಅಣ್ಣ ಸಚಿನ್ ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರು ಆಗಸ್ಟ್ 12ರಂದು ಸಕಲೇಶಪುರದಲ್ಲಿ ಆರೋಪಿ ಭರತ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆತ ಸತ್ಯಾಂಶ ಬಾಯ್ಬಿಟ್ಟಿದ್ದಾನೆ. ಇದನ್ನೂ ಓದಿ: ಪ್ರೀತಿಸಿದವಳ ಕೊಂದು ದೇಹವನ್ನು ಪೀಸ್, ಪೀಸ್ ಮಾಡ್ದ – ಪತ್ರಕರ್ತ ಅರೆಸ್ಟ್
ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಹೆಂಜುಗೊಂಡನಹಳ್ಳಿ ಗ್ರಾಮದ ಶರಣ್ಯ ಭಾರತಿ ಅಸೋಸಿಯೇಟ್ಸ್ ಕಂಪನಿಯಲ್ಲಿ ಸೂಪರ್ ವೈಸರ್ ಆಗಿ ಕೆಲಸ ಮಾಡುತ್ತಿದ್ದಳು. ಹಾಸನ ತಾಲೂಕಿನ, ಬೊಮ್ಮನಾಯಕನಹಳ್ಳಿ ಗ್ರಾಮದ ಭರತ್ ಜಿ.ಆರ್ ಶರಣ್ಯಳ ಹಿಂದೆ ಬಿದ್ದಿದ್ದ. ನನ್ನ ಪ್ರೀತಿಯನ್ನು ಒಪ್ಪಿಕೋ ಎಂದು ಪದೇ ಪದೇ ಪೀಡಿಸುತ್ತಿದ್ದು, ಶರಣ್ಯ ನಿರಾಕರಿಸಿದ್ದಳು. ಇದರಿಂದ ಕೋಪಗೊಂಡ ಭರತ್, ಮೈಸೂರಿನಿಂದ ಕಾರು ಬಾಡಿಗೆಗೆ ತಂದು ಆಗಸ್ಟ್ 3 ರಂದು ಕೆಲಸಕ್ಕೆ ನಡೆದುಕೊಂಡು ಹೋಗುತ್ತಿದ್ದ ಶರಣ್ಯಳಿಗೆ ಡಿಕ್ಕಿ ಹೊಡೆದು ಕೊಲೆ ಮಾಡಿರುವುದಾಗಿ ತನಿಖೆ ವೇಳೆ ಒಪ್ಪಿಕೊಂಡಿದ್ದಾನೆ. ಭರತ್‌ನನ್ನು ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಇದನ್ನೂ ಓದಿ: ಮಹಿಳೆಯರು ಬಾಯ್‍ಫ್ರೆಂಡ್‍ನ ಯಾವಾಗ ಬೇಕಾದ್ರೂ ಚೇಂಜ್ ಮಾಡ್ತಾರೆ – ನಿತೀಶ್ ಕುಮಾರ್‌ಗೆ ಬಿಜೆಪಿ ನಾಯಕನ ಟಾಂಗ್