ತುಮಕೂರು: ಒಡಿಸ್ಸಾದಲ್ಲಿ ವ್ಯಕ್ತಿಯೊಬ್ಬರು ತನ್ನ ಪತ್ನಿಯ ಶವವನ್ನು ಹೆಗಲ ಮೇಲೆ ಸಾಗಿಸಿದ್ದಂತೆ ನಮ್ಮ ರಾಜ್ಯದಲ್ಲಿಯೂ ಅಂತದ್ದೇ ದುರಂತವೊಂದು ನಡೆದಿದೆ. ಅದೂ ಇಬ್ಬರು ಪ್ರಭಾವಿ ಸಚಿವರ ತವರು ಜಿಲ್ಲೆ, ದಕ್ಷ ಹಾಗೂ ಅಭಿವೃದ್ಧಿ ಪರ ಶಾಸಕ ಎಂಬ ಹೆಸರು ಪಡೆದಿರುವ ಕೆ.ಎನ್ ರಾಜಣ್ಣ ಅವರ ಕ್ಷೇತ್ರದಲ್ಲಿಯೇ ಈ ಘಟನೆ ನಡೆದಿರುವುದು ವಿಪರ್ಯಾಸ.
ಜಿಲ್ಲೆಯ ಮಧುಗಿರಿ ತಾಲೂಕಿನ ಕೊಡಿಗೇನಹಳ್ಳಿಯಲ್ಲಿ ಭಾನುವಾರದಂದು ಈ ಘಟನೆ ನಡೆದಿದೆ. ತಿಮ್ಮಪ್ಪ ಎಂಬ ಬಡ ಕೂಲಿ ಕಾರ್ಮಿಕರ ಮಗಳು 20 ವರ್ಷದ ರತ್ನಮ್ಮ ತೀವ್ರ ಜ್ವರದಿಂದ ಬಳಲುತ್ತಿದ್ದರು. ಈ ಮಧ್ಯೆ ಅವರಿಗೆ ಉಸಿರಾಟದ ಸಮಸ್ಯೆ ಕೂಡ ಇತ್ತು. ಹೀಗಾಗಿ ಆಕೆಯನ್ನು ಮಧುಗಿರಿ ತಾಲೂಕಿನ ಕೊಡುಗೇನಹಳ್ಳಿ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ನಂತರ ರತ್ನಮ್ಮ ಪೋಷಕರು ಸರ್ಕಾರಿ ಆಸ್ಪತ್ರೆಗೆ ದೌಡಾಯಿಸಿದ್ರು. ಆದ್ರೆ ಅಷ್ಟರಲ್ಲಾಗಲೇ ರತ್ನಮ್ಮ ಸಾವನ್ನಪ್ಪಿದ್ದರು. ಮಗಳ ಶವವನ್ನು ತನ್ನ ಗ್ರಾಮ ವೀರಾಪುರಕ್ಕೆ ಸಾಗಿಸಲು ಹೋಬಳಿ ಕೇಂದ್ರದ ಈ ಸರ್ಕಾರಿ ಆಸ್ಪತ್ರೆಯಲ್ಲಿ ಆಂಬುಲೆನ್ಸ್ ಕೂಡ ಇರಲಿಲ್ಲ.
Advertisement
Advertisement
ಇದರಿಂದ ತಿಮ್ಮಪ್ಪ ಪರಿಚಯಸ್ಥರೊಬ್ಬರ ಸಹಾಯ ಪಡೆದು ಟಿವಿಎಸ್ ಬೈಕ್‍ನಲ್ಲಿಯೇ ಶವವನ್ನು ಸಾಗಿಸಿದ್ದಾರೆ. ಖಾಸಗಿ ಕಾರ್ ಬಾಡಿಗೆಗೆ ಪಡೆದು ಶವವನ್ನು ತೆಗೆದುಕೊಂಡು ಹೋಗುವಂತೆ ಸ್ಥಳೀಯರು ಸಲಹೆ ನೀಡಿದರಾದ್ರೂ ರತ್ನಮ್ಮ ಪೋಷಕರ ಬಳಿ ಹಣವಿಲ್ಲದ ಕಾರಣ ಟಿವಿಎಸ್ ಹಿಂಭಾಗ ಶವವನ್ನು ಕೂರಿಸಿ ಅದನ್ನು ಮತ್ತೊಬ್ಬರು ಹಿಡಿದುಕೊಂಡು ಸಾಗಿಸಿದ್ದಾರೆ. ಈ ಹೃದಯವಿದ್ರಾವಕ ದೃಶ್ಯವನ್ನ ಪ್ರತ್ಯಕ್ಷದರ್ಶಿಯೊಬ್ಬರು ಮೊಬೈಲ್‍ನಲ್ಲಿ ಸೆರೆಹಿಡಿದಿದ್ದಾರೆ.