ತಿರುವನಂತಪುರಂ: ಸರ್ಕಾರಿ ಉದ್ಯೋಗಕ್ಕಾಗಿ 2005ರಲ್ಲಿ ಅರ್ಜಿ ಸಲ್ಲಿಸಿದ್ದ ವ್ಯಕ್ತಿಯೊಬ್ಬರಿಗೆ ಬರೋಬ್ಬರಿ 18 ವರ್ಷಗಳ ಬಳಿಕ ನೇಮಕಾತಿ ಪತ್ರ ಬಂದಿರುವ ಅಪರೂಪದ ಘಟನೆ ಕೇರಳದಲ್ಲಿ ನಡೆದಿದೆ.
ಮಲಪ್ಪುರಂ ಜಿಲ್ಲೆಯ ಕಾಲಿಕಾವು ನಿವಾಸಿ ಅಬ್ದುಲ್ ಮಜೀದ್ ಅವರಿಗೆ ಕೇರಳ ಪಬ್ಲಿಕ್ ಸರ್ವಿಸ್ ಕಮಿಷನ್ (PSC) ವತಿಯಿಂದ ನೇಮಕಾತಿ ಪತ್ರ ಬಂದಿದೆ. ಆದರೆ ಅವರು ಆಯ್ಕೆಯಾಗಿದ್ದ ರ‍್ಯಾಂಕ್ ಪಟ್ಟಿ 2008ರಲ್ಲೇ ಅವಧಿ ಮುಗಿದಿತ್ತು.
ಅಬ್ದುಲ್ ಮಜೀದ್ 2005ರಲ್ಲಿ ಪಾರ್ಟ್‌ಟೈಮ್ ಜೂನಿಯರ್ ಅರೇಬಿಕ್ ಶಿಕ್ಷಕರ ಹುದ್ದೆಗೆ ಪರೀಕ್ಷೆ ಬರೆದಿದ್ದರು. ಬಳಿಕ ರ‍್ಯಾಂಕ್‌ಪಟ್ಟಿಯಲ್ಲಿ ಸ್ಥಾನ ಪಡೆದಿದ್ದರು. ಸರ್ಕಾರಿ ಉದ್ಯೋಗ ಸಿಗುವ ನಿರೀಕ್ಷೆಯಲ್ಲಿ ಹಲವು ವರ್ಷ ಕಾದಿದ್ದರು. ಆದರೆ ವರ್ಷಗಳು ಕಳೆದರೂ ಯಾವುದೇ ಮಾಹಿತಿ ಅಥವಾ ನೇಮಕಾತಿ ಪತ್ರ ಬರಲಿಲ್ಲ. ಹೀಗಾಗಿ ಉದ್ಯೋಗ ಸಿಗುವ ನಿರೀಕ್ಷೆಯನ್ನೇ ಕೈಬಿಟ್ಟಿದ್ದರು. ಈಗ 61ನೇ ವಯಸ್ಸಿನಲ್ಲಿ ಅವರಿಗೆ ಪಿಎಸ್‌ಸಿ ಸಲಹೆ ಪತ್ರ (Advice Memo) ಬಂದಿದೆ. ಆದರೆ ವಯೋಮಿತಿ ಮೀರಿರುವ ಕಾರಣ ಉದ್ಯೋಗ ಪಡೆಯಲು ಸಾಧ್ಯವಿಲ್ಲ ಎಂಬ ಬೇಸರವನ್ನು ಅವರು ವ್ಯಕ್ತಪಡಿಸಿದ್ದಾರೆ.ಇದನ್ನೂ ಓದಿ:ಕೇರಳದ ಪಾಲಕ್ಕಾಡ್‌ನಲ್ಲಿ `ಇಸ್ಲಾಮಿಕ್ ಫ್ರೆಂಡ್ಲಿ ಜಿಮ್’ – ಜಿಮ್‌ನಲ್ಲಿ ಸಂಗೀತ ನಿಷೇಧ
18 ವರ್ಷಗಳ ಕಾಲ ಹುದ್ದೆ ಖಾಲಿಯೇ ಉಳಿಯಿತು. ಈ ವಿಳಂಬದಿಂದ ನನಗೆ ಉದ್ಯೋಗದ ಅವಕಾಶ ಕಳೆದುಹೋಯಿತು. ಈಗ ವಯಸ್ಸು ಮೀರಿರುವುದರಿಂದ ಕೆಲಸ ಪಡೆಯಲು ಸಾಧ್ಯವಿಲ್ಲ ಎಂದು ಅಬ್ದುಲ್ ಮಜೀದ್ ಹೇಳಿದ್ದಾರೆ. ಹಲವು ಬಾರಿ ನೇಮಕಾತಿ ಪ್ರಕ್ರಿಯೆ ನಡೆಸಿದರೂ ಸೂಕ್ತ ಅಭ್ಯರ್ಥಿಗಳು ಸಿಗದ ಕಾರಣ ಈ ಹುದ್ದೆ ಖಾಲಿಯಾಗಿಯೇ ಉಳಿದಿತ್ತು ಎಂದು ವರದಿಯಾಗಿದೆ. ಈ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅನೇಕರು ಸರ್ಕಾರ ವ್ಯವಸ್ಥೆಯ ಬಗ್ಗೆ ವ್ಯಂಗ್ಯವಾಡಿದ್ದಾರೆ. ಅರ್ಜಿ ಹಾಕಿದ್ದೇ ಅನ್ನೋದನ್ನೆ ಮರೆತುಹೋಗಿರಬಹುದು, ಈಗ ನೇಮಕಾತಿ ಪತ್ರ ಬಂದಿದೆ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಉದ್ಯೋಗ ಪತ್ರ ಬರುವಷ್ಟರಲ್ಲಿ ನಿವೃತ್ತಿ ವಯಸ್ಸೇ ಬಂದಿದೆ ಎಂದು ತಮಾಷೆ ಮಾಡಿದ್ದಾರೆ.
