ಕೊಡಗು: ವಿರಾಜಪೇಟೆ ತಾಲ್ಲೂಕಿನ ಮಾಲ್ದಾರೆ ಗ್ರಾಮದ ಬಳಿ ಹಾಡಹಗಲೇ ರೈತ ಮಹಿಳೆ ಮೇಲೆ ಚಿರತೆ ದಾಳಿ ಮಾಡಿರುವ ಘಟನೆ ನಡೆದಿದೆ.
ಗ್ರಾಮದ ಲೀಲಾ (60) ಗಂಭೀರ ಗಾಯಗೊಂಡಿದ್ದಾರೆ. ಕಾಫಿ ತೋಟದಲ್ಲಿ ಕಾರ್ಮಿಕರ ಕೆಲಸ ನೋಡುತ್ತಿದ್ದ ವೇಳೆ ಹಠಾತ್ತನೆ ಬಂದ ಚಿರತೆ ಏಕಾಏಕಿ ದಾಳಿ ಮಾಡಿದೆ. ಮಹಿಳೆಯ ಎಡ ಕಿವಿ ಹಾಗೂ ದವಡೆ ಭಾಗಕ್ಕೆ ಗಂಭೀರ ಗಾಯಗಳಾಗಿವೆ. ಮಹಿಳೆಯ ಕಿರುಚಾಟ ಕೇಳಿ ಕಾರ್ಮಿಕರು ರಕ್ಷಣೆ ಮಾಡಿದ್ದು, ಗಾಯಾಳುವನ್ನು ಗೋಣಿಕೊಪ್ಪ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದೆ. ಇದನ್ನೂ ಓದಿ: 114 ರಫೇಲ್ ಜೆಟ್ ಖರೀದಿಗೆ ಭಾರತ ವಿನಂತಿ – 3.25 ಲಕ್ಷ ಕೋಟಿ ಪ್ರಸ್ತಾವನೆ ಸಲ್ಲಿಸಿದ ಫ್ರಾನ್ಸ್
ಚಿಕಿತ್ಸೆಯಲ್ಲಿರುವ ಲೀಲಾ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆಯಿಂದ ಗ್ರಾಮಸ್ಥರಲ್ಲಿ ಭೀತಿ, ಆತಂಕದ ವಾತಾವರಣ ಸೃಷ್ಟಿಯಾಗಿದೆ. ತಿತಿಮತಿ ವಲಯ ಅರಣ್ಯಾಧಿಕಾರಿ ಗಂಗಾಧರ್ ನೇತೃತ್ವದ ತಂಡ ಸ್ಥಳ ಪರಿಶೀಲನೆ ನಡೆಸಿದೆ. ಉಪವಲಯ ಅರಣ್ಯಾಧಿಕಾರಿ ಶಶಿ ಪಿ.ಟಿ. ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುವಿನ ಆರೋಗ್ಯ ವಿಚಾರಿಸಿದ್ದಾರೆ.
ಕಾಡಾನೆ, ಹುಲಿ, ಚಿರತೆ ಹಾವಳಿಯಿಂದ ಕಾರ್ಮಿಕರಲ್ಲಿ ಆತಂಕ ಹೆಚ್ಚಾಗಿದೆ. ಕಾಡುಪ್ರಾಣಿಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಉಪವಲಯ ಅರಣ್ಯಾಧಿಕಾರಿ ಶಶಿ ನೇತೃತ್ವದಲ್ಲಿ ಸಿಬ್ಬಂದಿ ಕಾಫಿ ತೋಟದಲ್ಲಿ ಶೋಧ ಕಾರ್ಯ ನಡೆಸಿದ್ದಾರೆ. ಚಿರತೆಯ ಚಲನವಲನ ಪತ್ತೆಗೆ ಕಾಫಿ ತೋಟದಲ್ಲಿ ಬೋನ್ ಮತ್ತು ಕ್ಯಾಮೆರಾ ಅಳವಡಿಕೆ ಮಾಡಲಾಗಿದೆ. ಇದನ್ನೂ ಓದಿ: ಮಾಡೆಲಿಂಗ್‌ನಲ್ಲಿ ಹೆಸರು ಮಾಡಿದ್ದ ಯುವತಿ ನೇಣಿಗೆ ಶರಣು
ದಾಳಿ ನಡೆಸಿದ ಚಿರತೆಗೆ ಗಾಯವಾಗಿರುವ ಶಂಕೆ ಇದೆ. ಗಾಯಗೊಂಡ ಚಿರತೆಯನ್ನು ಕಂಡಿರುವುದಾಗಿ ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ. ಗ್ರಾಮಸ್ಥರ ಒತ್ತಾಯದ ಮೇರೆಗೆ ಚಿರತೆ ಸೆರೆಗೆ ಅರಣ್ಯ ಇಲಾಖೆ ಸಜ್ಜಾಗಿದೆ. ಸಾಕಾನೆಗಳ ನೆರವಿನಿಂದ ಇಂದು ವಿಶೇಷ ಕಾರ್ಯಾಚರಣೆ ನಡೆಯಲಿದೆ. ಸ್ಥಳಕ್ಕೆ ವನ್ಯಜೀವಿ ವೈದ್ಯಾಧಿಕಾರಿ ಡಾ. ರಮೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಿರತೆಯನ್ನು ಶೀಘ್ರ ಸೆರೆ ಹಿಡಿಯಲು ಅರಣ್ಯ ಇಲಾಖೆ ಸಿದ್ಧತೆ ಮಾಡಿಕೊಂಡಿದೆ.



