ಉಡುಪಿ: ರಾಷ್ಟ್ರೀಯ ಹೆದ್ದಾರಿ-66ರ ಅರಾಟೆ ಸೇತುವೆ (Arate Bridge) ಸಮೀಪ ಗುರುವಾರ ಸಂಜೆ ಸಿಡಿಲು ಬಡಿದು ಕಾರ್ಮಿಕನೊಬ್ಬ ಮೃತಪಟ್ಟ ದಾರುಣ ಘಟನೆ ನಡೆದಿದೆ.
ಪಂಜಾಬ್ ಮೂಲದ ಕಾರ್ಮಿಕ ಅಶುತೋಷ್ (35) ಮೃತ ವ್ಯಕ್ತಿ. ಮತ್ತೋರ್ವ ಕಾರ್ಮಿಕ ಲವಜೋತ್ ಸಿಂಗ್ (28) ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದನ್ನೂ ಓದಿ: ಹಾರ್ಟ್ ಅಟ್ಯಾಕ್ ಅಲ್ಲ, ಪತ್ನಿಯಿಂದ ಕೊಲೆ ಎಂದ ಸಹೋದರ- ಹೂತಿಟ್ಟ ಶವ ಹೊರತೆಗೆದು ಮರು ತನಿಖೆ
ಅರಾಟೆ ಹಳೆ ಸೇತುವೆಯ ದುರಸ್ತಿ ಕಾಮಗಾರಿ ಕಳೆದ ಕೆಲವು ದಿನಗಳಿಂದ ನಡೆಯುತ್ತಿದ್ದು, ಗುರುವಾರ ಸಂಜೆ ಪಂಜಾಬ್ ಮೂಲದ ಕಾರ್ಮಿಕರು ಕಾಮಗಾರಿಯಲ್ಲಿ ತೊಡಗಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಸಂಜೆ ವೇಳೆಗೆ ತಾಲೂಕಿನಲ್ಲಿ ಗುಡುಗು-ಮಿಂಚು ಸಹಿತ ಭಾರೀ ಮಳೆಯಾಗಿದ್ದು, ಸಿಡಿಲು ಬಡಿದ ಪರಿಣಾಮ ಇಬ್ಬರು ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ನಡೆಸಲಾಯಿತಾದರೂ, ಅಶುತೋಷ್ ಮಾರ್ಗ ಮಧ್ಯೆಯೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಗಾಯಾಳು ಲವಜೋತ್ ಸಿಂಗ್ ಅವರನ್ನು ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ.
ಇದೇ ವೇಳೆ, ಗುರುವಾರ ಸಂಜೆ ಕುಂದಾಪುರ ತಾಲೂಕಿನಾದ್ಯಂತ ಉತ್ತಮ ಮಳೆಯಾಗಿದ್ದು, ಹಲವು ದಿನಗಳಿಂದ ಕಾಡುತ್ತಿದ್ದ ಉರಿಬಿಸಿಲಿಗೆ ತಾತ್ಕಾಲಿಕ ತಂಪು ದೊರಕಿದೆ. ಆದರೆ, ಗುಡುಗು-ಮಿಂಚಿನ ಅಬ್ಬರದಿಂದ ಕೆಲಕಾಲ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಹಲವು ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕ ವ್ಯತ್ಯಯ ಉಂಟಾಗಿದೆ.

