ಗುಜರಾತಿ ಭಾಷೆಯಲ್ಲಿ ಮೂಡಿ ಬಂದಿರುವ ‘ಚೆಲ್ಲೋ ಶೋ’ ಸಿನಿಮಾ 2023ರ ಆಸ್ಕರ್ ಪ್ರಶಸ್ತಿಗಾಗಿ ಭಾರತದಿಂದ ಅಧಿಕೃತವಾಗಿ ಸ್ಪರ್ಧಿಸುತ್ತಿದೆ. ಈಗಾಗಲೇ ಮೂವತ್ತು ಹೆಚ್ಚು ದೇಶಗಳಲ್ಲಿ ಈ ಸಿನಿಮಾ ರಿಲೀಸ್ ಆಗಿದ್ದು, ಭಾರತದಲ್ಲಿ ಇನ್ನೂ ಬಿಡುಗಡೆ ಆಗಬೇಕಿದೆ. ಅದಕ್ಕೂ ಮೊದಲು ಆಸ್ಕರ್ ಪ್ರಶಸ್ತಿಯ ರೇಸ್ ನಲ್ಲಿ ಈ ಚಿತ್ರ ಕಾಣಿಸಿಕೊಂಡು ಅಚ್ಚರಿ ಮೂಡಿಸಿದೆ. ಪಾನ್ ನಲಿನ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಸಿನಿಮಾ, ಚಿತ್ರರಂಗದ ಬೆಳವಣಿಗೆ ಕುರಿತಾದ ಕಥಾ ಹಂದರವನ್ನೂ ಹೊಂದಿದೆ. ಈ ಚಿತ್ರಕ್ಕೆ ಕನ್ನಡದ ಪವನ್ ಭಟ್ ಎನ್ನುವವರು ಸಂಕಲನದ ಕೆಲಸ ಮಾಡಿದ್ದಾರೆ.
Advertisement
ಸದ್ಯ ಬೆಂಗಳೂರಿನಲ್ಲಿ ವಾಸವಾಗಿರುವ ಪವನ್ ಭಟ್ ಮೂಲತಃ ಉಪ್ಪಿನಂಗಡಿಯ ಹುಡುಗ. ಓದಿದ್ದು ಇಂಜಿನಿಯರಿಂಗ್. ಆದರೆ, ಆಸಕ್ತಿ ಬೆಳೆದದ್ದು ಸಿನಿಮಾ ಎಡಿಟಿಂಗ್ ನತ್ತ. ಹಾಗಾಗಿ ಮೊದಲು ಎಂಟು ವರ್ಷಗಳ ಕಾಲ ಮುಂಬೈನಲ್ಲಿ ಕೆಲಸ ಮಾಡಿದ್ದಾರೆ. ಈಗಾಗಲೇ ಇಪ್ಪತ್ತಕ್ಕೂ ಹೆಚ್ಚು ಸಿನಿಮಾಗಳಿಗೆ ಎಡಿಟಿಂಗ್ ಮಾಡಿದ ಹೆಗ್ಗಳಿಕೆ ಇವರದ್ದು. ಸೀನಿಯರ್ ಎಡಿಟರ್ ಜೊತೆ ಸೇರಿಕೊಂಡು ಚೆಲ್ಲೋ ಶೋ ಸಿನಿಮಾಗಾಗಿ ಭಟ್ ಕೆಲಸ ಮಾಡಿದ್ದಾರೆ. ಈಗ ಅವರು ಸಂಕಲಿಸಿದ ಸಿನಿಮಾಗೆ ಆಸ್ಕರ್ ಗೆ ಹೋಗುವಂತಹ ಅವಕಾಶ ಸಿಕ್ಕಿದೆ. ಇದನ್ನೂ ಓದಿ:‘ಸೈಮಾ ಅವಾರ್ಡ್’ ಐಷಾರಾಮಿ ಹೋಟೆಲ್‌ನಲ್ಲಿ ಸೆಲೆಬ್ರಿಟಿಗಳ ತಡರಾತ್ರಿ ಪಾರ್ಟಿ : FIR ದಾಖಲು
Advertisement
Advertisement
ತಮ್ಮ ಸಿನಿಮಾ ಆಯ್ಕೆಗೆ ನಿರ್ದೇಶಕರು ಕೃತಜ್ಞತೆ ತಿಳಿಸಿದ್ದಾರೆ. ಒಂಬತ್ತು ವರ್ಷದ ಹುಡುಗನೊಬ್ಬ ಡಿಜಿಟಲ್ ಕ್ರಾಂತಿಯ ಮಾಂತ್ರಿಕತೆ ಬೆನ್ನು ಬೀಳುವಂತಹ ಕಥೆಯು ಸಿನಿಮಾದಲ್ಲಿ ಇದೆಯಂತೆ. ನಿರ್ದೇಶಕರ ಜೀವನದಲ್ಲಿ ನಡೆದ ಹಲವು ಘಟನೆಗಳನ್ನೂ ಸಿನಿಮಾದಲ್ಲಿ ಬಳಸಿದ್ದಾರಂತೆ. ಈ ಸಿನಿಮಾ ಈಗಾಗಲೇ ವಿವಿಧ ದೇಶಗಳಲ್ಲಿ ನಡೆದ ಚಲನಚಿತ್ರೋತ್ಸವದಲ್ಲಿ ಭಾಗಿಯಾಗಿ ಹತ್ತಾರು ಪ್ರಶಸ್ತಿಗಳನ್ನು ಕೂಡ ಪಡೆದುಕೊಂಡಿದೆ ಎನ್ನುವುದು ವಿಶೇಷ.