ತಲೆಯ ಗಾತ್ರದ ಹೆಲ್ಮೆಟ್ ಸಿಗದೆ ವ್ಯಕ್ತಿಯ ಪರದಾಟ- ದಂಡ ವಿಧಿಸದೆ ಬಿಟ್ಟು ಕಳುಹಿಸಿದ ಪೊಲೀಸ್

Public TV
2 Min Read
helmet

ಗಾಂಧಿನಗರ: ಹೊಸ ಟ್ರಾಫಿಕ್ ನಿಯಮಗಳ ಅನ್ವಯವಾದ ಬಳಿಕ ಸೂಕ್ತ ದಾಖಲೆ ಹೊಂದಿರದ ವಾಹನ ಸವಾರರು ಭಾರೀ ದಂಡ ಪಾವತಿಸಲು ಸಮಸ್ಯೆ ಎದುರಿಸುತ್ತಿದ್ದಾರೆ. ಆದರೆ ಗುಜರಾತ್‍ನ ವ್ಯಕ್ತಿ ಮಾತ್ರ ಹೆಲ್ಮೆಟ್ ಧರಿಸದಿದ್ದರೂ ದಂಡ ಪಾವತಿ ಮಾಡದೆ ಇರುವ ಅವಕಾಶವನ್ನು ಪಡೆದಿದ್ದಾರೆ.

ಗುಜರಾತ್‍ನ ಚೋಟಾ ಉದಯ್‍ಪುರ್ ಜಿಲ್ಲೆಯ ಬೊಡೆಲಿ ಪಟ್ಟಣದ ಹಣ್ಣಿನ ಅಂಗಡಿಯ ಮಾಲೀಕ ಜಾಕೀರ್ ಮಾಮನ್ ದಂಡ ಪಾವತಿ ಮಾಡುವುದರಿಂದ ಪಾರಾಗಿದ್ದಾರೆ. ಅಂದಹಾಗೇ ಜಾಕೀರ್ ತಮ್ಮ ತಲೆಗೆ ಸರಿ ಹೊಂದುವ ಹೆಲ್ಮೆಟ್ ಸಿಗದೆ ಸಮಸ್ಯೆ ಎದುರಿಸುತ್ತಿದ್ದರು. ಇದನ್ನು ಗಮನಿಸಿದ ಪೊಲೀಸರು ಜಾಕೀರ್ ರನ್ನು ವಿಚಾರಣೆ ನಡೆಸಿ ಕೊನೆಗೆ ದಂಡ ಹಾಕದೆ ಬಿಟ್ಟು ಕಳುಹಿಸಿದ್ದಾರೆ. ಇದನ್ನು ಓದಿ: ಸ್ಕೂಟಿ ಓಡಿಸುತ್ತಾ ಫೋನಿನಲ್ಲಿ ಮಾತು- ಪೊಲೀಸರು ದಂಡ ವಿಧಿಸಲು ಮುಂದಾಗುತ್ತಿದ್ದಂತೆ ಆತ್ಮಹತ್ಯೆ ಬೆದರಿಕೆ

traffic police

ಈ ಕುರಿತು ಮಾತನಾಡಿರುವ ಜಾಕೀರ್, ನನಗೆ ಕಾನೂನಿನ ಮೇಲೆ ಅಪಾರ ಗೌರವ ಹಾಗೂ ನಂಬಿಕೆ ಇದೆ. ಆದರೆ ನಾನು ಮಾರುಕಟ್ಟೆಯ ಎಲ್ಲ ಹೆಲ್ಮೆಟ್ ಅಂಗಡಿಗಳಲ್ಲಿ ಹುಡುಕಾಟ ನಡೆಸಿದರೂ ನನಗೆ ಸರಿ ಹೊಂದುವ ಹೆಲ್ಮೆಟ್ ಲಭ್ಯವಾಗಲಿಲ್ಲ. ನನ್ನ ಬಳಿ ಎಲ್ಲಾ ದಾಖಲೆಗಳು ಇದ್ದು, ಆದರೆ ಹೆಲ್ಮೆಟ್ ಸಿಗದ ಕಾರಣ ಅಸಹಾಯಕನಾಗಿದ್ದೇನೆ ಎಂದು ತಿಳಿಸಿದ್ದಾರೆ.

ಜಾಕೀರ್ ಅವರ ಸಮಸ್ಯೆಯಿಂದ ಆತನ ಕುಟುಂಬಸ್ಥರು ಕೂಡ ಭಯ ಪಟ್ಟಿದ್ದರು. ಪ್ರತಿ ಬಾರಿ ಜಕೀರ್ ಮನೆಯಿಂದ ಬೈಕ್‍ನಲ್ಲಿ ಹೊರ ನಡೆದರೆ ದಂಡ ಪಾವತಿ ಮಾಡಬೇಕೆಂಬ ಚಿಂತೆ ಕುಟುಂಬಸ್ಥರನ್ನು ಕಾಡಿತ್ತು. ಆದರೆ ಜಾಕೀರ್ ಅವರ ಸಮಸ್ಯೆಯನ್ನು ತಿಳಿದ ಪೊಲೀಸರು ಅಪರೂಪದ ಪ್ರಕರಣ ಎಂದು ಪರಿಗಣಿಸಿ ದಂಡ ಹಾಕದಿರಲು ನಿರ್ಧರಿಸಿದ್ದಾರೆ. ಇದನ್ನು ಓದಿ: ಬೆಂಗ್ಳೂರಿನಲ್ಲಿ 8 ದಿನಕ್ಕೆ ಬರೋಬ್ಬರಿ 2.40 ಕೋಟಿ ರೂ. ಟ್ರಾಫಿಕ್ ಫೈನ್
Traffic fine

ಇತ್ತ ಗುಜರಾತ್‍ನ ವಡೋದರ ವ್ಯಕ್ತಿಯೊಬ್ಬ ತನ್ನ ಬೈಕ್ ಹೆಲ್ಮೆಟ್ ಮೇಲೆ ಡ್ರೈವಿಂಗ್ ಲೈಸೆನ್ಸ್, ಬೈಕ್ ನೋಂದಣಿ ಪತ್ರ, ವಿಮಾ ಪತ್ರಗಳನ್ನು ಮುದ್ರಿಸಿದ್ದ. ಪ್ರತಿ ಬಾರಿ ಪರಿಶೀಲನೆ ನಡೆಸುವ ವೇಳೆ ಪೊಲೀಸರ ಕೈಗೆ ಹೆಲ್ಮೆಟ್ ನೀಡುತ್ತಿದ್ದ ಸಂಗತಿ ಸಖತ್ ಸುದ್ದಿಯಾಗಿತ್ತು. ಜನರ ಸಮಸ್ಯೆಯನ್ನು ಆಲಿಸಿದ ಗುಜರಾತ್ ಸರ್ಕಾರ ಕಳೆದ ವಾರವಷ್ಟೇ ಹೊಸ ನಿಯಮಗಳ ಅನ್ವಯ ಹೆಚ್ಚಳವಾಗಿದ್ದ ದಂಡದ ಮೊತ್ತವನ್ನು ಕಡಿಮೆ ಮಾಡಿತ್ತು. ಆ ಮೂಲಕ ಹೆಲ್ಮೆಟ್ ಇಲ್ಲದೆ ಪ್ರಯಾಣಿಸುವ ಬೈಕ್ ಸವಾರರಿಗೆ 1 ಸಾವಿರ ರೂ. ಬದಲಾಗಿ 500 ರೂ.ಗಳನ್ನು ನಿಗದಿ ಮಾಡಿತ್ತು.

Share This Article