ಭಾನುವಾರ ಬಂದರೆ ಸಾಕು ಊಟಕ್ಕೆ ಏನಾದರೂ ಸ್ಪೆಷಲ್ ಮಾಡಬೇಕು ಅಂದುಕೊಳ್ಳುತ್ತೇವೆ. ಆದರೆ ಬಿರಿಯಾನಿ ಅಥವಾ ಕಬಾಬ್ ಮಾಡೋಕೆ ಬೇಸರ. ಹೀಗಿರುವಾಗ ಒಮ್ಮೆ ಈ ಚಿಕನ್ ಲಿವರ್ ಫ್ರೈ (Chicken Liver Fry) ಪ್ರಯತ್ನಿಸಿ ನೋಡಿ. ಮಾಡುವ ಬಗೆಯೂ ಸುಲಭ, ರುಚಿಯೂ ಅದ್ಭುತ.

ಬೇಕಾಗುವ ಸಾಮಾಗ್ರಿಗಳು
ಚಿಕನ್ ಲಿವರ್: ಕಾಲು ಕೆಜಿ
ಈರುಳ್ಳಿ
ಶುಂಠಿ-ಬೆಳ್ಳುಳ್ಳಿ ಪೇಸ್ಟ್
ಅರಿಶಿನ ಪುಡಿ
ಅಚ್ಚ ಖಾರದ ಪುಡಿ
ಕಾಳುಮೆಣಸಿನ ಪುಡಿ
ನಿಂಬೆ ರಸ
ಅಡುಗೆ ಎಣ್ಣೆ ಮತ್ತು ಉಪ್ಪು
ಕೊತ್ತಂಬರಿ ಸೊಪ್ಪು

ಮಾಡುವ ವಿಧಾನ
ಮೊದಲು ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ಕಾಯಿಸಿ, ಕತ್ತರಿಸಿದ ಈರುಳ್ಳಿ ಸೇರಿಸಿ ಅದು ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಚೆನ್ನಾಗಿ ಬಾಡಿಸಿಕೊಳ್ಳಿ. ಇದರ ಬಳಿಕ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ, ಅದರ ಹಸಿವಾಸನೆ ಸಂಪೂರ್ಣವಾಗಿ ಹೋಗುವ ತನಕ ಹುರಿಯಿರಿ. ಈಗ ಚೆನ್ನಾಗಿ ತೊಳೆದುಟ್ಟುಕೊಂಡ ಚಿಕನ್ ಲಿವರ್ ಅನ್ನು ಬಾಣಲೆಗೆ ಹಾಕಿ, ಅದರ ಬಣ್ಣ ಬದಲಾಗುವವರೆಗೆ ಮಧ್ಯಮ ಉರಿಯಲ್ಲಿ ಫ್ರೈ ಮಾಡಿ.
ಲಿವರ್ ಬಣ್ಣ ಬದಲಾದ ನಂತರ ಅರಿಶಿನ ಪುಡಿ, ಉಪ್ಪು, ಖಾರದ ಪುಡಿ ಹಾಗೂ ಕಾಳುಮೆಣಸಿನ ಪುಡಿಯನ್ನು ಸೇರಿಸಿ ಎಲ್ಲವನ್ನೂ ಒಟ್ಟಿಗೆ ಚೆನ್ನಾಗಿ ಮಸಾಲೆ ಹಿಡಿಯುವಂತೆ ತಿರುಗಿಸಿ. ಬಳಿಕ ಪಾತ್ರೆಗೆ ಮುಚ್ಚಳ ಮುಚ್ಚಿ, ಸಣ್ಣ ಉರಿಯಲ್ಲಿ ಸುಮಾರು 3 ರಿಂದ 4 ನಿಮಿಷಗಳ ಕಾಲ ಬೇಯಲು ಬಿಡಿ. ಲಿವರ್ ಮಸಾಲೆ ಜೊತೆ ಚೆನ್ನಾಗಿ ಬೆಂದು ಎಣ್ಣೆ ಬಿಡುತ್ತಿದ್ದಂತೆ, ಕೊನೆಯಲ್ಲಿ ನಿಂಬೆ ರಸ ಹಾಗೂ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು ಸೇರಿಸಿ ಒಲೆಯಿಂದ ಕೆಳಗಿಳಿಸಿದರೆ ಗರಿಗರಿಯಾದ, ಖಾರದ ಘಮಘಮಿಸುವ ಚಿಕನ್ ಲಿವರ್ ಫ್ರೈ ಸವಿಯಲು ಸಿದ್ಧ.
