ಬ್ಯಾನ್ ಆದ್ರೂ ಸಕ್ರಿಯವಾಗಿದ್ಯಾ PFI?- ಬೇಟೆ ಮುಂದುವರಿಸಿದ ಮಂಗಳೂರು ಪೊಲೀಸರು

Public TV
2 Min Read
pfi flag india

ಮಂಗಳೂರು: ಪಿಎಫ್‌ಐ (PFI) ಸಂಘಟನೆಯನ್ನು ಕೇಂದ್ರ ಸರ್ಕಾರ ಬ್ಯಾನ್ (PFI Ban) ಮಾಡಿ ವಾರಗಳೇ ಕಳೆದಿವೆ. ಆದರೆ ಆ ಸಂಘಟನೆಯ ಮುಖಂಡರು ಹಾಗೂ ಕಾರ್ಯಕರ್ತರು ಇನ್ನೂ ತಮ್ಮ ಹಳೇ ಚಾಳಿಯನ್ನು ಮುಂದುವರಿಸುತ್ತಲೇ ಇದ್ದಾರೆ. ಬ್ಯಾನ್ ಬಳಿಕವೂ ಭೂಗತರಾಗಿ ಸಕ್ರಿಯ ಚಟುವಟಿಕೆ ನಡೆಸುತ್ತಾ ಇದ್ದಾರೆ ಎನ್ನುವ ಮಾಹಿತಿಯಂತೆ ಪೊಲೀಸರು ಮತ್ತೆ ಬಂಧನದ ಬೇಟೆ ಮುಂದುವರಿಸಿದ್ದಾರೆ. ರಾಜ್ಯದ ಕರಾವಳಿಯ ಮಂಗಳೂರಿನಲ್ಲಿ (Mangaluru) ಇಂದು ಮತ್ತೆ ಐವರನ್ನು ಬಂಧಿಸಲಾಗಿದೆ.

ನಿಷೇಧಿತ ಪಿಎಎಫ್‌ಐ ಸಂಘಟನೆಯ ಮುಖಂಡರು ಹಾಗೂ ಕಾರ್ಯಕರ್ತರ ಬಂಧನದ ಬೇಟೆ ಮುಂದುವರಿದಿದೆ. ಪಿಎಫ್‌ಐ ಬ್ಯಾನ್ ಆದ ಬಳಿಕವೂ ಭೂಗತರಾಗಿದ್ದುಕೊಂಡು ಸಕ್ರಿಯ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವವರ ಮೇಲೆ ಪೊಲೀಸರು ಹದ್ದಿನ ಕಣ್ಣು ಇಟ್ಟಿದ್ದಾರೆ. ಅದರಲ್ಲೂ ಪಿಎಫ್‌ಐ ಬಹಳಷ್ಟು ಆಕ್ವೀವ್ ಆಗಿದ್ದ ರಾಜ್ಯದ ಕರಾವಳಿಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರಾಜ್ಯ ಪೊಲೀಸ್ ಇಲಾಖೆಯ ಸೂಚನೆಯಂತೆ ಪೊಲೀಸರು ಬಂಧನದ ಬೇಟೆ ಮುಂದುವರಿಸಿದ್ದಾರೆ.

PFI BAN

ಇಂದು ಬೆಳ್ಳಂಬೆಳಗ್ಗೆ ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಪೊಲೀಸರು (Mangaluru Police) ಕಾರ್ಯಾಚರಣೆ ನಡೆಸಿದ್ದು ಒಟ್ಟು 5 ಮಂದಿ ಪಿಎಫ್‌ಐ ಮುಖಂಡರು ಹಾಗೂ ಕಾರ್ಯಕರ್ತರನ್ನು ಬಂಧಿಸಿದ್ದಾರೆ. ಮಂಗಳೂರು ಗ್ರಾಮಾಂತರ, ಪಣಂಬೂರು, ಸುರತ್ಕಲ್, ಉಳ್ಳಾಲ ಸೇರಿ 8 ಕಡೆಗಳಲ್ಲಿ ಏಕಕಾಲಕ್ಕೆ ಸ್ಥಳೀಯ ಪೊಲೀಸರು ಮನೆಗಳಿಗೆ ದಾಳಿ ನಡೆಸಿದ್ದಾರೆ. ಈ ಸಂದರ್ಭ ಯುಎಪಿಎ ಆಕ್ಟ್, ಸೆಕ್ಷನ್ 121 ಸೇರಿ ವಿವಿಧ ಐಪಿಸಿ ಸೆಕ್ಷನ್ ನಡಿ ಕೇಸ್ ದಾಖಲಿಸಿ ಐವರನ್ನು ಪೊಲೀಸರು ಬಂಧಿಸಿದ್ದಾರೆ.

ಪಿಎಫ್‌ಐ ಮಾತ್ರವಲ್ಲದೆ ಎಸ್‌ಡಿಪಿಐ (SDPI) ಪಕ್ಷದ ಮೇಲೂ ಪೊಲೀಸರು ಕಣ್ಣಿಟ್ಟಿದ್ದಾರೆ. ಪಿಎಫ್‌ಐ ಜೊತೆ ಸಂಪರ್ಕದಲ್ಲಿರೋ ಎಸ್‌ಡಿಪಿಐ ನಾಯಕರು ಹಾಗೂ ಕಾರ್ಯಕರ್ತರ ಮೇಲೂ ಕಣ್ಣಿಟ್ಟಿರುವ ಪೊಲೀಸರು ಅವರ ಚಲನವಲನಗಳನ್ನು ಗಮನಿಸುತ್ತಿದ್ದಾರೆ. ಎಸ್‌ಡಿಪಿಐನ ದ.ಕ ಜಿಲ್ಲಾಧ್ಯಕ್ಷ ಅಬೂಬಕ್ಕರ್ ಕುಳಾಯಿ ಅವರ ಮನೆಗೂ ಇಂದು ಪೊಲೀಸರು ದಾಳಿ ನಡೆಸಿದ್ದಾರೆ. ಆದರೆ ದಾಳಿ ವೇಳೆ ಅಬೂಬಕ್ಕರ್ ಮನೆಯಲ್ಲಿ ಇಲ್ಲದಿದ್ದು ಬಂಧಿಸಲು ಸಾಧ್ಯವಾಗಿಲ್ಲ. ಇದನ್ನೂ ಓದಿ: ಐಷಾರಾಮಿ ವಾಹನದಲ್ಲಿ ಸರ್ವೀಸ್ ಚಾರ್ಜ್ ತೆಗದುಕೊಳ್ತಾ ಇದ್ದೇವೆ – ಆಟೋ ರಿಕ್ಷಾ ಐಷಾರಾಮಿನಾ? ಓಲಾ, ಉಬರ್‌ಗೆ ಹೈಕೋರ್ಟ್ ಪ್ರಶ್ನೆ

PFI AND SDPI

ಹೀಗೆ ಪೊಲೀಸರು ಪಿಎಫ್‌ಐ, ಎಸ್‌ಡಿಪಿಐನ ಮುಖಂಡರು ಹಾಗೂ ಕಾರ್ಯಕರ್ತರ ಬೇಟೆ ಮುಂದುವರಿಸಿದ್ದಾರೆ. ಆದರೆ ಈ ಪಿಎಫ್‌ಐ ಸಂಘಟನೆಯನ್ನು ನಿಷೇಧಿಸಿದರೆ ಸಾಕಾಗಲ್ಲ. ಇಂದಲ್ಲ ನಾಳೆ ಮತ್ತೊಂದು ಹೆಸರಲ್ಲಿ ಪ್ರತ್ಯಕ್ಷವಾಗುತ್ತಾರೆ. ಹೀಗಾಗಿ ಪೊಲೀಸರು ಹಾಗೂ ಸರ್ಕಾರ ಇಂತಹ ಸಂಘಟನೆಯಲ್ಲಿದ್ದವರ ಮೇಲೆ ವಿಶೇಷವಾಗಿ ಕಣ್ಣಿಡಬೇಕು. ಅವರನ್ನು ಬುಡಸಮೇತರಾಗಿ ಕಿತ್ತೊಗೆಯಬೇಕು. ಇಲ್ಲದೇ ಇದ್ದಲ್ಲಿ ಈ ದೇಶಕ್ಕೆ ಅವರು ಮಾರಕವಾಗಲಿದ್ದಾರೆ ಎಂದು ಹಿಂದೂ ಮಹಾ ಸಭಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಧರ್ಮೇಂದ್ರ ಎಚ್ಚರಿಸಿದ್ದಾರೆ. ಇದನ್ನೂ ಓದಿ: ಮೋದಿ ವಿರುದ್ಧ ಅವಹೇಳನಕಾರಿ ಹೇಳಿಕೆ – ಗುಜರಾತ್ ಎಎಪಿ ಮುಖ್ಯಸ್ಥ ಪೊಲೀಸ್ ವಶಕ್ಕೆ

ಪಿಎಫ್‌ಐ ನಿಷೇಧ ಆಗಿದ್ರೂ ಅದರ ಮುಖಂಡರು ಹಾಗೂ ಕಾರ್ಯಕರ್ತರು ಮತ್ತಷ್ಟು ಸಕ್ರಿಯವಾಗಿರೋ ಎಲ್ಲಾ ಸಾಧ್ಯತೆಗಳು ಇದೆ. ಇತ್ತೀಚೆಗೆ ಬಂಟ್ವಾಳದ ನೈನಾಡು ಎಂಬಲ್ಲಿ ರಸ್ತೆಯಲ್ಲಿ ಪಿಎಫ್‌ಐ ಅನ್ನು ನಾವು ಮತ್ತೆ ತರುತ್ತೇವೆ ಎನ್ನುವುದನ್ನು ಬರೆದಿರುವುದೇ ಸಾಕ್ಷಿಯಾಗಿದೆ. ಹೀಗಾಗಿ ಪೊಲೀಸರು ಹಾಗೂ ಸರ್ಕಾರ ಮತ್ತಷ್ಟು ಎಚ್ಚೆತ್ತುಕೊಳ್ಳೋ ಅನಿವಾರ್ಯತೆ ಇದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *