ದಕ್ಷಿಣದ ಖ್ಯಾತ ತಾರೆ ಸಾಯಿ ಪಲ್ಲವಿ ನಟನೆಯ ವಿರಾಟ ಪರ್ವಂ ಸಿನಿಮಾ ದೇಶದಾದ್ಯಂತ ರಿಲೀಸ್ ಆಗುತ್ತಿದೆ. ಈ ಸಮಯದಲ್ಲಿ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿರುವ ಸಾಯಿ ಪಲ್ಲವಿ, ಸಮಾಜದಲ್ಲಿ ನಡೆಯುತ್ತಿರುವ ಕೋಮು ದಳ್ಳುರಿಯ ಬಗ್ಗೆ ಮಾತನಾಡಿದ್ದಾರೆ. ಅದರಲ್ಲೂ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾದ ಕಥಾವಸ್ತುವಾಗಿರುವ ಕಾಶ್ಮೀರಿ ಪಂಡಿತರ ಹತ್ಯೆಯನ್ನು ಮುಸ್ಲಿಂ ಡ್ರೈವರ್ ಒಬ್ಬರ ಹತ್ಯೆಗೆ ಹೋಲಿಸಿ ಪರ ಮತ್ತು ವಿರೋಧಕ್ಕೆ ಕಾರಣವಾಗಿದ್ದಾರೆ.
ಸಂದರ್ಶನವೊಂದರಲ್ಲಿ ಅವರು ಮಾತನಾಡುತ್ತಾ, ‘ನಾನು ಎಡ ಮತ್ತು ಬಲ ಅಂತ ಕೇಳಿದ್ದೇನೆ. ಆದರೆ ಎರಡರ ಬಗ್ಗೆಯೂ ನನಗೆ ಆಳವಾದ ಜ್ಞಾನವಿಲ್ಲ. ಆದರೆ ನಾನು ಮನುಷ್ಯತ್ವದ ಪರ ಮಾತನಾಡುತ್ತೇನೆ. ನನ್ನ ಮನೆಯಲ್ಲಿ ಕಲಿಸಿದ್ದು ನ್ಯೂಟ್ರಲ್ ನಿಯಮ. ಹಾಗಾಗಿ ಕಾಶ್ಮೀರದಲ್ಲಿ ಪಂಡಿತರ ಹತ್ಯೆಯನ್ನು ಹೇಗೆ ಧಾರ್ಮಿಕ ದೃಷ್ಟಿಕೋನದಿಂದ ನೋಡಲಾಯಿತೋ, ಹಾಗೆಯೇ ಲಾಕ್‌ಡೌನ್ ಸಮಯದಲ್ಲಿ ಗೋವುಗಳನ್ನು ಸಾಗಿಸುತ್ತಿದ್ದ ಮುಸ್ಲಿಂ ಟೆಂಪೋ ಟ್ರೈವರ್ ಮೇಲೆ ಜೈ ಶ್ರೀರಾಮ್ ಎಂದು ಹೇಳುತ್ತಾ ಕೊಚ್ಚಿಕೊಂದ ಘಟನೆಯನ್ನೂ ನಾನು ಹಾಗೆಯೇ ನೋಡಬೇಕಾಗುತ್ತದೆ. ಎರಡು ಹತ್ಯೆಯೂ ಒಂದೇ’ ಎಂದು ಹೇಳಿದ್ದಾರೆ. ಈ ಮಾತು ಇದೀಗ ವೈರಲ್ ಆಗುತ್ತಿದೆ. ಇದನ್ನೂ ಓದಿ: ಅಮ್ಮ ಅಂತಾ ಎಷ್ಟೇ ಹೇಳಿಕೊಟ್ಟರೂ ಕೊನೆಗೆ ಅಪ್ಪ ಎಂದು ಕರೆದ ರಾಯನ್
ನಾನು ಸಮಸಮಾಜದ ಕನಸು ಕಂಡಿರುವ ಹುಡುಗಿ. ನಾನು ಯಾವುದೇ ಪಕ್ಷದ ಪರವಾಗಿ ಕೆಲಸ ಮಾಡುವುದಿಲ್ಲ. ಜಾತಿ, ಧರ್ಮಗಳ ಬಡಿದಾಟಕ್ಕೂ ನಾನು ಸಿದ್ಧಳಿಲ್ಲ. ಸಮಾಜದಲ್ಲಿ ಎಲ್ಲರೂ ಒಗ್ಗಟ್ಟಿನಿಂದಲೇ ಬದುಕಬೇಕು. ಧರ್ಮಗಳ ಕಚ್ಚಾಟ ಏಕೆ? ಯಾರದೋ ಲಾಭಕ್ಕಾಗಿ ಆಗುತ್ತಿರುವ ದಾಳಿಯಿದು ಅಂತ ನನಗೆ ಅನಿಸುತ್ತಿದೆ ಎಂದು ಸಾಯಿ ಪಲ್ಲವಿ ಮಾತನಾಡಿದ್ದಾರೆ. ಇವರ ಮಾತಿಗೆ ಕೆಲವರು ಮೆಚ್ಚಿಕೊಂಡರೆ, ಇನ್ನೂ ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ.