ಚಿತೆಗೆ ಹಚ್ಚಿದ ಜ್ವಾಲೆ ಆರಿಲ್ಲ -ಬಿಜೆಪಿ ನಾಯಕತ್ವ ಕಿತ್ತಾಟಕ್ಕೆ ಮಾಜಿ ಸಿಎಂ ಎಚ್‌ಡಿಕೆ ಕಿಡಿ

Public TV
2 Min Read
hd kumaraswamy

ಬೆಂಗಳೂರು : ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ವಿಚಾರವಾಗಿ ನಡೆಯುತ್ತಿರೋ ಕಿತ್ತಾಯಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಕಿಡಿಕಾರಿದ್ದಾರೆ. ಸರಣಿ ಟ್ವೀಟ್ ಮೂಲಕ ಬಿಜೆಪಿ ವಿರುದ್ದ ಆಕ್ರೋಶ ಹೊರ ಹಾಕಿರುವ ಕುಮಾರಸ್ವಾಮಿ, ಚಿತೆಗೆ ಹಚ್ಚಿದ ಜ್ವಾಲೆ ಆರಿಲ್ಲ. ಆಗಲೇ ಬಿಜೆಪಿ ಅಧಿಕಾರಕ್ಕಾಗಿ ಕಿತ್ತಾಡುತ್ತಿದೆ ಅಂತ ಆಕ್ರೋಶ ಹೊರ ಹಾಕಿದ್ದಾರೆ.

ರಾಜ್ಯದಲ್ಲಿ ರಾಜಕೀಯ ಬಿಕ್ಕಟ್ಟು ಎದುರಾಗಿದೆ. ಅದು ಎಂಥಾ ಸಂದರ್ಭದಲ್ಲಿ?ಕೋವಿಡ್‌ ಅಟ್ಟಹಾಸ ಮೆರೆಯುತ್ತಿರುವ ಹೊತ್ತಿನಲ್ಲಿ, ಬ್ಲಾಕ್‌ ಫಂಗಸ್‌ ಎಂಬ ಭಯಾನಕ ರೋಗ ಜನರನ್ನು ಆಪೋಷನ ತೆಗೆದುಕೊಳ್ಳುತ್ತಿರುವ ಗಳಿಗೆಯಲ್ಲಿ, ಮಕ್ಕಳು ಪಿಡುಗಿಗೆ ಸಿಲುಕಲಿದ್ದಾರೆಂಬ ಎಚ್ಚರಿಕೆಗಳ ನಡುವಿನಲ್ಲಿ, ಕನ್ನಡದ ಅಸ್ಮಿತೆಗೆ ದಕ್ಕೆಯಾಗಿರುವ ಕಾಲಘಟ್ಟದಲ್ಲಿ.ರಾಜ್ಯ ಸಂದಿಗ್ಧತೆಗೆ ಸಿಲುಕಿರುವ ಈ ಹೊತ್ತಿನಲ್ಲಿ ಇದೆಂಥ ರಾಜಕೀಯ? ಈಗ ರಾಜ್ಯದ ಎದುರಿಗೆ ಇರುವುದು ನಾಯಕತ್ವದ ಪ್ರಶ್ನೆಯೋ? ಅಥವಾ ಜನರ ಹಿತದ ಪ್ರಶ್ನೆಯೋ? ಅಂತ ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: ಬಿಜೆಪಿ ವರಿಷ್ಠರ ಮಧ್ಯಪ್ರವೇಶಕ್ಕೆ ನಿಷ್ಠ ಬಣ ಆಗ್ರಹ

BJP Leaders 1

ರಾಜ್ಯದಲ್ಲಿ ಚಿತೆಗಳಿಗೆ ಹಚ್ಚಿದ ಜ್ವಾಲೆ ಇನ್ನೂ ಆರಿಲ್ಲ. ಅದು ಎಂದು ಆರುತ್ತದೆ ಎಂಬುದೇ ಯಾರಿಗೂ ತಿಳಿಯುತ್ತಿಲ್ಲ. ಇಂಥ ಸಂದರ್ಭದಲ್ಲಿ ಇಂಥ ಕ್ಷುಲ್ಲಕ ರಾಜಕಾರಣ ಅಗತ್ಯವಿದೆಯೇ? ರಾಜ್ಯ ಸರ್ಕಾರ ಕೋವಿಡ್‌ ಸ್ಥಿತಿಯನ್ನು ನಿಭಾಯಿಸಿದ ರೀತಿಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.ಸರ್ಕಾರ ಇನ್ನಾದರೂ ತಿದ್ದಿಕೊಳ್ಳಲಿದೆ ಎಂದು ನಾವು ಭಾವಿಸಿದೆವು. ಇಂಥ ಸಂದರ್ಭದಲ್ಲಿ ಸರ್ಕಾರವನ್ನು ಟೀಕಿಸಿ ರಾಜಕೀಯ ಮಾಡುವುದು ಬೇಡ ಎಂದು ಜೆಡಿಎಸ್‌ ನಿರ್ಧರಿಸಿತ್ತು.ಆದರೆ, ಬಿಜೆಪಿ ಅಧಿಕಾರದ ಲಾಲಸೆ ಪ್ರದರ್ಶಿಸಿದರೆ ಸುಮ್ಮನಿರುವುದು ಹೇಗೆ? ಬಿಎಸ್‌ ಯಡಿಯೂರಪ್ಪನವರು ತಾವು ಖರೀದಿಸಿ ತಂದ ಕುದುರೆಗಳ ಮೇಲೆ ತಾವೇ ಸವಾರಿ ಮಾಡಿದ್ದರೆ ಈ ಪರಿಸ್ಥಿತಿ ಬರುತ್ತಲೇ ಇರಲಿಲ್ಲ. ಅದರ ಬದಲಿಗೆ ಮಾಧ್ಯಮಗಳು ಬಣ್ಣಿಸುವ ‘ಸೋಕಾಲ್ಡ್‌ ಹುಲಿ, ಬಾಹುಬಲಿ‘ ಮುಂತಾದವರನ್ನು ಮುಖ್ಯಮಂತ್ರಿ ಸೀಟಿನ ಮೇಲೆ ಕೂರಿಸಿದ್ದೇ ಸದ್ಯದ ರಾಜಕೀಯ ದುಸ್ಥಿತಿಗೆ ಕಾರಣ ಎಂದು ಟೀಕಿಸಿದ್ದಾರೆ.ಇದು ಯಡಿಯೂರಪ್ಪನವರ ಸ್ವಯಂಕೃತ ಅಪರಾಧ ಅಂತ ಲೇವಡಿ ಮಾಡಿದ್ದಾರೆ.

ಇನ್ನೊಂದು ಕಡೆ ಕಾಂಗ್ರೆಸ್ ವಿರುದ್ದವೂ ಕಿಡಿಕಾರಿದ ಅವ್ರು, ಅನ್ನ ಹಳಸಿದೆ, ನಾಯಿ ಕಾದಿದೆ ಎಂಬಂತೆ ರಾಜ್ಯದ ಮತ್ತೊಂದು ರಾಜಕೀಯ ಪಕ್ಷ ಕಾದು ಕುಳಿತಿದೆ. ರಾಜ್ಯದಲ್ಲಿ ಹೊತ್ತಿರುವ ಚಿತೆಗಳ ಬೆಂಕಿಯಲ್ಲಿ ರಾಜ್ಯ ಬಿಜೆಪಿ ಸರ್ಕಾರ ಬೆಂದು ಹೋದರೆ, ನಂತರದ ದಿನಗಳಲ್ಲಿ ತನ್ನನ್ನು ಅಧಿಕಾರದಲ್ಲಿ ಪ್ರತಿಷ್ಠಾಪಿಸಿಕೊಳ್ಳಲು ಆ ರಾಷ್ಟ್ರೀಯ ಪಕ್ಷ ಪ್ರಯತ್ನಗಳನ್ನು ಪೈಪೋಟಿಗೆ ಬಿದ್ದು ನಡೆಸುತ್ತಿದೆ ಅಂತ ಆಕ್ರೋಶ ಹೊರ ಹಾಕಿದರು.

BSY B S Yediyurappa

ರಾಜ್ಯದ ಸಂಕಷ್ಟದ ಕಾಲದಲ್ಲಿ ಬಿಜೆಪಿಯಲ್ಲಿ ಉಂಟಾಗಿರುವ ಅಧಿಕಾರದ ಲಾಲಸೆ, ಅದನ್ನು ಬಳಸಿಕೊಂಡು ಅಧಿಕಾರಕ್ಕೆ ಬರಲು ಕೋವಿಡ್‌ ನಿಯಮಗಳನ್ನೆಲ್ಲ ಮೀರಿ ಬೀದಿಗೆ ಬಿದ್ದಿರುವ ಕಾಂಗ್ರೆಸ್‌ ಪಕ್ಷಗಳೆರಡೂ ಆತ್ಮಾವಲೋಕನೆ ಮಾಡಿಕೊಳ್ಳಬೇಕು. ಸಂಕಷ್ಟದ ಪರಿಸ್ಥಿತಿಯನ್ನೇ ಅಧಿಕಾರಕ್ಕೇರಲು ಏಣಿ ಮಾಡಿಕೊಳ್ಳುತ್ತಿರುವ ಈ ಪಕ್ಷಗಳ ನಡೆಯನ್ನು ಜನ ಗಮನಿಸಬೇಕು.ಆರೋಗ್ಯ ತುರ್ತು ಪರಿಸ್ಥಿತಿಯ ನಡುವೆ ಕನ್ನಡ, ಕರ್ನಾಟಕದ ಅಸ್ಮಿತೆ ಪ್ರಶ್ನೆ ಮಾಡುವಂಥ ಘಟನೆಗಳು ಒಂದರ ಹಿಂದೊಂದರಂತೆ ನಡೆದವು.ಈ ವಿಚಾರವಾಗಿ ಬಿಜೆಪಿ, ಕಾಂಗ್ರೆಸ್‌ ಏನು ಮಾಡಿದವು? ಇವರೆಲ್ಲ ರಾಜಕೀಯ ಮಾಡುತ್ತಿರುವುದು ಕರ್ನಾಟಕದಲ್ಲೇ ಅಲ್ಲವೇ?ಆದರೆ, ಕರ್ನಾಟಕದ ಸ್ವಾಭಿಮಾನಕ್ಕೆ ದಕ್ಕೆಯಾದಾಗ ಇವರೆಲ್ಲ ಅದ್ಯಾವ ಬಿಲದಲ್ಲಿ ಅಡಗಿದ್ದರು? ಎಂದು ಕುಮಾರಸ್ವಾಮಿ ಆಕ್ರೋಶ ಹೊರ ಹಾಕಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *