ಈ ಕ್ಷಣದಿಂದ ಜಮ್ಮಕಾಶ್ಮೀರದಲ್ಲಿ ಯಾರೂ ಬೇಕಾದ್ರೂ ಆಸ್ತಿ ಖರೀದಿಸಬಹುದು

Public TV
2 Min Read
Jammu Land

– ಜಮ್ಮು, ಕಾಶ್ಮೀರ ಮಾರಲು ಕೇಂದ್ರದ ಸಿದ್ಧತೆ ಎಂದ ಮಾಜಿ ಸಿಎಂ
– ಗೆಜೆಟ್ ನೋಟಿಫಿಕೇಶನ್ ಹೊರಡಿಸಿದ ಕೇಂದ್ರ ಸರ್ಕಾರ

ನವದೆಹಲಿ: ಜಮ್ಮು- ಕಾಶ್ಮೀರ ಮತ್ತು ಲಡಾಕ್ ನಲ್ಲಿ ಬೇರೆ ರಾಜ್ಯದ ಜನರು ಆಸ್ತಿ ಖರೀದಿಸುವ ಪ್ರಕ್ರಿಯೆಗೆ ಮೋದಿ ಸರ್ಕಾರ ಹಸಿರು ನಿಶಾನೆ ತೋರಿಸಿದೆ. ‌ ಇಂದು ಕೇಂದ್ರ ಗೃಹ ಸಚಿವಾಲಯ ಅಧಿಕೃತ ಆದೇಶವನ್ನು ಹೊರಡಿಸಿದೆ.

ARMY JAMMU

ಕಾನೂನಿಗೆ ತಿದ್ದುಪಡಿ ತರುವ ಮೂಲಕ ಇದಕ್ಕೆ ಅವಕಾಶ ನೀಡಲಾಗಿದ್ದು, 370ನೇ ವಿಧಿ ರದ್ದು ಬಳಿಕ ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿದೆ.  ಜಮ್ಮು ಕಾಶ್ಮೀರದ ಕೇಂದ್ರಾಡಳಿತ ಪ್ರದೇಶಗಳ ಮರುವಿಂಗಡಣೆ(ಕೇಂದ್ರದ ಕಾನೂನುಗಳ ಅಳವಡಿಕೆ) ಮೂರನೇ ಆದೇಶವನ್ನು ಗೃಹ ಸಚಿವಾಲಯ ಹೊರಡಿಸಿದೆ. ರಾಜ್ಯದ 26 ಕಾನೂನುಗಳನ್ನು ಕೇಂದ್ರ ಸರ್ಕಾರ ಬದಲಿಸಿ ಹೊಸ ಆದೇಶವನ್ನು ಪ್ರಕಟಿಸಿದೆ. ಈ ಆದೇಶವು ತಕ್ಷಣದಿಂದ ಜಾರಿಗೆ ಬರಲಿದೆ. ಭಾರತದ ಇತರ ಭೂ ಪ್ರದೇಶಗಳಿಗೆ ಅನ್ವಯವಾಗುವ ಕಾನೂನಿನ ವ್ಯಾಖ್ಯಾನದಲ್ಲಿ ಈ ಆದೇಶವನ್ನ ಸರ್ಕಾರ ಹೊರಡಿಸಿದೆ.

ಗೆಜೆಟ್ ನೋಟಿಫಿಕೇಶನ್ ಹೊರಡಿಸಿದ ಕೇಂದ್ರ ಸರ್ಕಾರ, ಜಮ್ಮು ಕಾಶ್ಮೀರ ಅಭಿವೃದ್ಧಿ ಕಾಯ್ದೆಯ ಸೆಕ್ಷನ್ 17ರಲ್ಲಿನ ರಾಜ್ಯದ ಶಾಶ್ವತ ನಿವಾಸಿ ಎಂಬ ಅಂಶವನ್ನು ಕೈಬಿಟ್ಟಿದೆ. ಇದು ಕೇಂದ್ರಾಡಳಿತ ಪ್ರದೇಶದಲ್ಲಿನ ಭೂಮಿ ವಿಲೇವಾರಿಯ ಕುರಿತಾಗಿತ್ತು.

ಕಳೆದ ವರ್ಷ ಆಗಸ್ಟ್‌ನಲ್ಲಿ 370 ಹಾಗೂ 35-ಎ ವಿಧಿ ರದ್ದತಿಗೂ ಮುನ್ನ ಜಮ್ಮು ಕಾಶ್ಮೀರದ ನಿವಾಸಿಗಳಲ್ಲದವರು ಯಾವುದೇ ರೀತಿಯ ಸ್ಥಿರಾಸ್ತಿಯನ್ನು ಕೊಳ್ಳುವಂತಿರಲಿಲ್ಲ. ಆದರೆ ಇದೀಗ ತಿದ್ದುಪಡಿ ಮೂಲಕ ರಾಜ್ಯದ ಶಾಶ್ವತ ನಿವಾಸಿಗಳಲ್ಲದಿದ್ದರೂ, ಯಾರು ಬೇಕಾದರೂ ಜಮ್ಮು ಕಾಶ್ಮೀರದಲ್ಲಿ ಆಸ್ತಿ ಖರೀದಿಸಬಹುದಾಗಿದೆ.

Jammu and Kashmir

ಈ ಕುರಿತು ಪ್ರತಿಕ್ರಿಯಿಸಿರುವ ಜಮ್ಮು ಕಾಶ್ಮೀರ ಉಪರಾಜ್ಯಪಾಲ ಮನೋಜ್ ಸಿಂಗ್, ಹೊರಗಿನವರು ಇಲ್ಲಿ ಬಂದು ಜಮೀನು ಖರೀದಿಸಿ ಉದ್ಯಮ ಸ್ಥಾಪಿಸಿದ್ರೆ ಉದ್ಯೋಗ ಸೃಷ್ಟಿಯಾಗುತ್ತದೆ. ಇದರಿಂದ ಜಮ್ಮು-ಕಾಶ್ಮೀರದ ಆರ್ಥಿಕ ಸ್ಥಿತಿಯಲ್ಲಿ ಬೆಳವಣಿಗೆ ಆಗುತ್ತದೆ. ಆದ್ರೆ ಕೃಷಿ ಭೂಮಿ ಮಾತ್ರ ಸ್ಥಳೀಯರ ಬಳಿಯಲ್ಲಿಯೇ ಇರಲಿದೆ. ಕೃಷಿ ಭೂಮಿಯನ್ನ ಕೇವಲ ಜಮ್ಮು-ಕಾಶ್ಮೀರದ ಮೂಲ ನಿವಾಸಿಗಳೇ ಖರೀದಿ ಮಾಡಬಹುದಾಗಿದೆ. ಮೋದಿ ಸರ್ಕಾರದ ಆದೇಶದ ಪ್ರಕಾರ ಬೇರಯವರು ಇಲ್ಲಿ ಆಸ್ತಿ ಖರೀದಿಸಬಹುದಾಗಿದೆ ಎಂದಿದ್ದಾರೆ. ಇದನ್ನೂ ಓದಿ: ಜಮ್ಮು ಕಾಶ್ಮೀರ ಪುನರ್‌ರಚನಾ ವಿಧೇಯಕ ಪಾಸ್ – ಮೋದಿ ಮುಕಟಕ್ಕೆ ಗರಿ

ಆದೇಶದ ಪ್ರಕಾರ, ಭಾರತದ ಯಾವ ಪ್ರಜೆ ಇಲ್ಲಿ ಆಸ್ತಿ ಖರೀದಿಸಿ ಮನೆ, ಕಾರ್ಖಾನೆ, ಮನೆ, ಅಂಗಡಿ ಮಾಡಿಕೊಳ್ಳಬಹುದಾಗಿದೆ. ಜಮೀನು ಖರೀದಿ ವೇಳೆ ಸ್ಥಳೀಯ ನಿವಾಸಿ ಎಂದು ಹೇಳುವ ಯಾವುದೇ ದಾಖಲೆಗಳನ್ನ ಸಲ್ಲಿಸುವ ಅವಶ್ಯಕತೆ ಇರಲ್ಲ. ಇದನ್ನೂ ಓದಿ: ಏನಿದು ಆರ್ಟಿಕಲ್ 370, 35 (ಎ) ಇದು ಹೇಗೆ ಜಾರಿಗೆ ಬಂತು?

ಜಮೀನು ಖರೀದಿಸುವ ಕಾನೂನು ಬದಲಾವಣೆ ಆದೇಶದ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಉಮರ್ ಅಬ್ದುಲ್ಲಾ, ಜಮ್ಮು ಮತ್ತು ಕಾಶ್ಮೀರದ ಭೂಮಿ ಒಡೆತನದ ಕಾನೂನಿನಲ್ಲಿ ಬದಲಾವಣೆ ತರಲಾಗಿದೆ. ಕೇಂದ್ರ ಸರ್ಕಾರದ ಈ ಆದೇಶವನ್ನು ನಾವು ವಿರೋಧಿಸುತ್ತೇವೆ. ಕೃಷಿ ಭೂಮಿ ಹೊರತುಪಡಿಸಿ ಯಾವುದೇ ಜಮೀನು ಅಥವಾ ನಿವೇಶನ ಖರೀದಿಗೆ ಸ್ಥಳೀಯ ಪ್ರಮಾಣ ಪತ್ರ ನೀಡುವಂತಿಲ್ಲ. ಮುಂದಿನ ದಿನಗಳಲ್ಲಿ ಕೃಷಿ ಭೂಮಿ ಖರೀದಿಯ ಕಾನೂನಿನಲ್ಲಿ ಬದಲಾವಣೆ ತರಬಹುದು. ಕೇಂದ್ರ ಜಮ್ಮು-ಕಾಶ್ಮೀರ ಮಾರಲು ಸಿದ್ಧತೆ ನಡೆಸಿದೆ. ಈ ಆದೇಶದಿಂದ ಬಡ ಜಮೀನು ಮಾಲೀಕನ ಜೀವನ ಕಷ್ಟದಲ್ಲಿ ಸಿಲುಕಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಪರಿಚ್ಛೇಧ 370, 35ಎ ರದ್ದು ಕಾನೂನುಬಾಹಿರ, ಅಸಂವಿಧಾನಿಕ ನಡೆ: ಮೆಹಬೂಬಾ ಮುಫ್ತಿ

Share This Article
Leave a Comment

Leave a Reply

Your email address will not be published. Required fields are marked *