ಹಾಸನ: ಗಾಳಿ ಮಳೆಗೆ ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ಸುಮಾರು 200ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಧರೆಗುರುಳಿದ್ದು, ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾನೆ.
ತಾಲೂಕಿನಲ್ಲಿ ಮಳೆ ಹೆಚ್ಚಾದ ಪರಿಣಾಮ ತುರ್ತು ಅಧಿಕಾರಿಗಳ ಸಭೆ ನಡೆಸಿದ ಸಕಲೇಶಪುರ ಕ್ಷೇತ್ರದ ಶಾಸಕ ಹೆಚ್.ಕೆ ಕುಮಾರಸ್ವಾಮಿ, ಪ್ರವಾಹ ಭೀತಿ ಉಂಟಾಗಿರುವ ಆಜಾದ್ ರಸ್ತೆಗೆ ಅಧಿಕಾರಿಗಳೊಂದಿಗೆ ತೆರಳಿ ಮುನ್ನೆಚ್ಚರಿಕಾ ಕ್ರಮವಾಗಿ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಜನರಿಗೆ ಮನವಿ ಮಾಡಿದ್ದಾರೆ.
ನಂತರ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಶಾಸಕ ಹೆಚ್‍ಕೆ.ಕುಮಾರಸ್ವಾಮಿ, ಕಳೆದ ವರ್ಷವೂ ಸಕಲೇಶಪುರದಲ್ಲಿ ಪ್ರವಾಹ ಉಂಟಾಗಿದ್ದ ಪರಿಣಾಮ ಸರ್ಕಾರಕ್ಕೆ 549 ಕೋಟಿ ಪರಿಹಾರ ಕೇಳಿದ್ದೆವು. ಆದರೆ ಸರ್ಕಾರ ಕೇವಲ 25 ಕೋಟಿ ಪರಿಹಾರ ನೀಡಿದೆ. ಈಗ ಮತ್ತೆ ಪ್ರವಾಹ ಭೀತಿ ಎದುರಾಗಿದೆ. ಹೀಗಾಗಿ ಅಧಿಕಾರಿಗಳ ಜೊತೆ ತುರ್ತು ಸಭೆ ಕರೆದು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮದ ಬಗ್ಗೆ ಚರ್ಚಿಸಿದ್ದೇನೆ.
ತಾಲೂಕಿನಲ್ಲಿ 200ಕ್ಕೂ ಹೆಚ್ಚಿನ ವಿದ್ಯುತ್ ಕಂಬಗಳು ಉರುಳಿದ್ದು ಹಲವೆಡೆ ವಿದ್ಯುತ್ ಸಂಪರ್ಕ ಕಡಿತವಾಗಿದೆ. ತಕ್ಷಣ ಸಮಸ್ಯೆ ಪರಿಹರಿಸುವಂತೆ ಅಧಿಕಾರಿಗಳಿಗೆ ತಿಳಿಸಿದ್ದೇನೆ. ನಾಳೆ ಹಾಸನ ಉಸ್ತುವಾರಿ ಸಚಿವರು ಇಲ್ಲಿಗೆ ಭೇಟಿ ನೀಡಲಿದ್ದು, ಅವರಿಗೂ ಪರಿಸ್ಥಿತಿಯ ಮನವರಿಕೆ ಮಾಡಿಕೊಡಲಾಗುವುದು ಎಂದು ಶಾಸಕ ಹೆಚ್.ಕೆ.ಕುಮಾರಸ್ವಾಮಿ ತಿಳಿಸಿದ್ದಾರೆ.