ರಾಜ್ಯಪಾಲರಿಗೆ ಆದೇಶ ನೀಡೋ ಅಧಿಕಾರ ಇದೆಯೋ – ಕೃಷ್ಣಬೈರೇಗೌಡ Vs ಮಾಧುಸ್ವಾಮಿ

Public TV
3 Min Read
Krishna Byre Gowda Madhuswamy

ಬೆಂಗಳೂರು: ಶುಕ್ರವಾರ ಮಧ್ಯಾಹ್ನ 1:30ರ ಒಳಗಡೆ ಬಹುಮತ ಸಾಬೀತು ಪಡಿಸಬೇಕೆಂದು ಸಿಎಂಗೆ ರಾಜ್ಯಪಾಲ ವಿ.ಆರ್.ವಾಲಾ ನೀಡಿರುವ ಆದೇಶದ ಬಗ್ಗೆ ವಿಧಾನ ಸಭೆಯಲ್ಲಿ ಬಹಳ ಗಂಭೀರ ಚರ್ಚೆ ನಡೆಯಿತು.

ಸಚಿವ ಕೃಷ್ಣಬೈರೇಗೌಡರು ವಿಶ್ವಾಸ ಮತಯಾಚನೆ ಪ್ರಕ್ರಿಯೆ ಆರಂಭಗೊಂಡ ಬಳಿಕ ಸಿಎಂ ಅವರಿಗೆ ರಾಜ್ಯಪಾಲರು ಆದೇಶ ನೀಡಲು ಬರುವುದಿಲ್ಲ ಎಂದು ವಾದಿಸಿದರೆ ಬಿಜೆಪಿಯ ಮಾಧುಸ್ವಾಮಿಯವರು ರಾಜ್ಯಪಾಲರಿಗೆ ಆದೇಶ ನೀಡಲು ಬರುತ್ತದೆ ಎಂದು ಹೇಳಿದರು.

Krishna Byre Gowda A

ಆರಂಭದಲ್ಲಿ ಕೃಷ್ಣಬೈರೇಗೌಡರು ಈ ವಿಚಾರವನ್ನು ಪ್ರಸ್ತಾಪಿಸಿ, ಎಸ್.ಆರ್.ಬೊಮ್ಮಯಿ ಅವರು ಮುಖ್ಯಮಂತ್ರಿಯಾಗಿದ್ದಾಗ ಸರ್ಕಾರ ವಜಾಗೊಳಿಸುವ ವಿಚಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ಈ ವೇಳೆ ಸುಪ್ರೀಂಕೋರ್ಟ್ ನೀಡಿದ ತೀರ್ಪಿನ ಪ್ರಕಾರ, ರಾಜ್ಯಪಾಲರು ಆಡಳಿತ ಪಕ್ಷಕ್ಕೆ ಬಹುಮತ ಸಾಬೀತು ಪಡಿಸಲು ಸೂಚನೆ ನೀಡಬಹುದು. ಜೊತಗೆ ಅದಕ್ಕೆ ಒಂದು ವಾರ ಕಾಲ ನಿಗದಿ ಮಾಡಬಹುದು ಎಂದು ಆದೇಶ ನೀಡಲಾಗಿತ್ತು. ಆದರೆ ಇಂದಿನ ಪರಿಸ್ಥಿತಿ ಬೇರೆ ಇದೆ ಎಂದು ತಿಳಿಸಿದರು.

ವಿಶ್ವಾಸಮತ ನಿರ್ಣಯವನ್ನು ಸ್ವತಃ ಸಭಾ ನಾಯಕ (ಸಿಎಂ) ಮಂಡಿಸುವುದಾಗಿ ಸದನಕ್ಕೆ ತಿಳಿಸಿದ್ದಾರೆ. ಸಿಎಂ ಅವರೇ ಹೇಳಿರುವಾಗ ಆದೇಶವನ್ನು ಹೇಗೆ ನೀಡುತ್ತಾರೆ. ಈ ವಿಚಾರವನ್ನು ಸದನದಲ್ಲಿ ಚರ್ಚೆ ಮಾಡಲಾಗುತ್ತಿದೆ. ಅದನ್ನು ನಡೆಸುವವರು ಸ್ಪೀಕರ್ ಸ್ಥಾನದಲ್ಲಿರುವ ನೀವು ಎಂದು ರಮೇಶ್ ಕುಮಾರ್ ಅವರಿಗೆ ಮನವಿ ಮಾಡಿಕೊಂಡರು.

CM HDK

ನಮ್ಮ ಸಂವಿಧಾನದಲ್ಲಿ ಯಾರಿಗೂ ಸರ್ವಾಧಿಕಾರಿಯಂತೆ ನಡೆದುಕೊಳ್ಳುವ ಅಧಿಕಾರವನ್ನು ಕೊಟ್ಟಿಲ್ಲ. ಸಿಎಂ, ಸ್ಪೀಕರ್, ರಾಜ್ಯಪಾಲರು, ನ್ಯಾಯಾಧೀಶರು ಯಾರಿಗೂ ಸರ್ವಾಧಿಕಾರವಿಲ್ಲ. ವಿಶ್ವಾಸಮತ ನಿರ್ಣಯ ಸದನದ ಸ್ವತ್ತು ಹಾಗೂ ನೀವು ಇದನ್ನು ನಡೆಸುತ್ತಿರುವಾಗ ರಾಜ್ಯಪಾಲ ಪ್ರವೇಶ ಎಷ್ಟು ಸರಿ ಎಂದು ಪ್ರಶ್ನಿಸಿದರು.

ಅಧಿಕಾರ ಹಪಹಪಿಗಾಗಿ ಸಂವಿಧಾನಿಕ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ರಾಜ್ಯಪಾಲ ವ್ಯಾಪ್ತಿಯನ್ನು ಸಂವಿಧಾನಿಕ ಪೀಠ ತಿಳಿಸಿರುವ ಮಾಹಿತಿಯನ್ನು ಮತ್ತೊಮ್ಮೆ ಓದಿ ಹೇಳಬೇಕೇ? ಇಂದಿನ ಪರಿಸ್ಥಿತಿ ನೋಡಿದರೆ ಇದು ಪ್ರಜಾಪ್ರಭುತ್ವವೇ ಎನ್ನುವ ಅನುಮಾನ ಜನರಲ್ಲಿ ಮೂಡುತ್ತಿದೆ ಎಂದು ಕಿಡಿಕಾರಿದರು. ಈ ವೇಳೆ ನಾಗಲ್ಯಾಂಡ್ ಸರ್ಕಾರಕ್ಕೆ ರಾಜ್ಯಪಾಲರು ನೀಡಿದ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ನೀಡಿದ ಆದೇಶವನ್ನು ಓದಿ ತಮ್ಮ ವಾದವನ್ನು ಸಮರ್ಥಿಸಿಕೊಂಡರು.

speaker Ramesh Kumar A

2018ರಲ್ಲಿ ಯಡಿಯೂರಪ್ಪನವರಿಗೆ 15 ದಿನಗಳ ಕಾಲ ಬಹುಮತ ಸಾಬೀತು ಪಡಿಸಲು ಅವಕಾಶವನ್ನು ರಾಜ್ಯಪಾಲರು ನೀಡುತ್ತಾರೆ. ಆದರೆ ಇಲ್ಲಿ ಈಗ 15 ಗಂಟೆಗಳ ಕಾಲ ಅವಕಾಶವನ್ನು ನೀಡುತ್ತಾರೆ. ಇದರಲ್ಲೇ ರಾಜ್ಯಪಾಲರು ಹೇಗೆ ನಡೆದುಕೊಳ್ಳುತ್ತಿದ್ದಾರೆ ಎನ್ನುವುದು ಗೊತ್ತಾಗುತ್ತದೆ ಎಂದರು. ಈ ವೇಳೆ ಕಾಂಗ್ರೆಸ್ ಶಾಸಕರು ರಾಜ್ಯಪಾಲರ ವಿರುದ್ಧವೇ ಘೋಷಣೆ ಕೂಗಿದರು.

ಈ ವೇಳೆ ಬಿಜೆಪಿ ಶಾಸಕ ಮಾಧುಸ್ವಾಮಿ ಅವರು ಮಧ್ಯಪ್ರವೇಶ ಮಾಡುತ್ತಿದ್ದಂತೆ ಗುಡುಗಿದ ಸಚಿವರು, ನೀವು 3 ಕೋಟಿ ರೂ. ನೀಡಿ ಶಾಸಕರನ್ನು ಖರೀದಿ ಮಾಡುತ್ತೀರಿ. ಇರುವ ವಿಚಾರವನ್ನು ಹೇಳಲು ನಾನೇಕೆ ಹಿಂಜರಿಯಬೇಕು. ನಾನು ಅಂತಹ ಅನ್ಯಾಯದ ಕೆಲಸ ಮಾಡಿಲ್ಲ. ನೀವು ನನಗೆ ಪಾಠ ಹೇಳಬೇಡಿ ಎಂದು ಹೇಳಿದರು.

Madhuswamy

ನಮಗೆ ಮಾತಾನಾಡಲು ಅನುಮತಿಯ ಜೊತೆಗೆ ರಕ್ಷಣೆಯೂ ಕೊಡಿ. ರಾಜ್ಯಪಾಲರು ಬಹುಮತ ಸಾಬೀತು ಮಾಡಿ ಅಂತ ಹೇಳುವುದು ಹೇಗೆ ತಪ್ಪಾಗುತ್ತೆ ಎಂದು ಮಾಧುಸ್ವಾಮಿ ಮಾತನಾಡುತ್ತಿದ್ದಂತೆ ಪ್ರತಿಪಕ್ಷದ ನಾಯಕರು ಗದ್ದಲ ಎಬ್ಬಿಸಿದರು. ಈ ವೇಳೆ ಸ್ಪೀಕರ್ ಮಧ್ಯಪ್ರವೇಶಿಸಿ ಸಿಎಂ ಮತ್ತು ಕೃಷ್ಣಬೈರೇಗೌಡರು ಮಾತನಾಡುವಾಗ ವಿರೋಧ ಪಕ್ಷದ ಸದಸ್ಯರು ಅಡ್ಡಿ ಪಡಿಸಲಿಲ್ಲ. ಹೀಗಾಗಿ ನೀವು ಅಡ್ಡಿಪಡಿಸುವುದು ಸರಿಯಲ್ಲ ಎಂದು ಮನವಿ ಮಾಡಿಕೊಂಡರು.

ಮಾತು ಮುಂದುವರಿಸಿದ ಮಾಧುಸ್ವಾಮಿ ಅವರು, ಸರ್ಕಾರದ ಮೇಲೆ ಅನುಮಾನ ಬಂದರೆ ಬಹುಮತ ಸಾಬೀತು ಪಡೆಸುವಂತೆ ಕೇಳುವ ಅಧಿಕಾರ ರಾಜ್ಯಪಾಲರಿಗೆ ಇದೆ. ಇದು ಸಂವಿಧಾನಾತ್ಮಕ ಹಕ್ಕು. ಸರ್ಕಾರವನ್ನು ರಾಜ್ಯಪಾಲರು ಬಹುಮತ ಸಾಬೀತು ಮಾಡುವಂತೆ ಕೇಳುವುದು ತಪ್ಪು ಅಂತ ಎಲ್ಲಿಯೂ ವ್ಯಾಖ್ಯಾನ ಮಾಡಿಲ್ಲ ಎಂದರು.

Vajubhai Rudabha Vala

ನಾವು ಯಾರೂ ನಿಮಗೆ ಅಡಚಣೆ ಮಾಡಿಲ್ಲ. ರಾಜ್ಯಪಾಲರು ಸರ್ಕಾರಕ್ಕೆ ಪತ್ರದ ಬರೆದು, ನನಗೆ ಇಂತಹ ಕಾರಣಗಳಿಂದ ಬಹುಮತದ ಮೇಲೆ ಅನುಮಾನ ಬಂದಿದೆ. ನೀವು ಬಹುಮತ ಸಾಬೀತು ಮಾಡಿ ಎಂದು ಆದೇಶ ನೀಡಿದ್ದಾರೆ. ಸಂವಿಧಾನದತ್ತವಾಗಿ ಅವರಿಗೆ ಆದೇಶ ನೀಡುವ ಅಧಿಕಾರವಿದೆ. ಈಗ ಅಧಿವೇಶ ನಡೆಯುತ್ತಿರುವ ಕಾರಣದಿಂದಾಗಿ ರಾಜ್ಯಪಾಲರು ಹೀಗೆ ನಿರ್ದೇಶನ ನೀಡಿದ್ದಾರೆ. ಗುರುವಾರ ನಡೆದ ಅಧಿವೇಶನವನನು ರಾಜ್ಯಪಾಲರು ನೋಡಿದ್ದಾರೆ ಎಂದು ತಿಳಿಸಿದರು.

ರಾಜ್ಯಪಾಲರ ಆದೇಶವನ್ನು ಪಾಲಿಸುವವರೆಗೂ ನಾವು ಇಲ್ಲಿಯೇ ಇರುತ್ತೇವೆ. ಬಿಜೆಪಿ ಎಲ್ಲ ಸದಸ್ಯರು ಇದಕ್ಕೆ ಬದ್ಧವಾಗಿದ್ದೇವೆ ಎಂದು ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *