ಚಂಡೀಗಢ: ಲೂಧಿಯಾನದಲ್ಲಿ ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರವೆಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ 32 ವರ್ಷದ ಕಾರ್ಮಿಕನೊಬ್ಬನನ್ನು ಭಾನುವಾರ ಪೊಲೀಸರು ಬಂಧಿಸಿದ್ದಾರೆ.
ಬಾಲಕಿಯ ತಾಯಿಗೆ ವರ್ಷದ ಹಿಂದೆಯಷ್ಟೇ ಬೇರೆ ಮದುವೆಯಾಗಿದ್ದು, ತನ್ನ ಎರಡನೇಯ ಪತಿಯ ಜೊತೆ ಆಕೆ ವಾಸವಿದ್ದರು. ಇದೀಗ ಬಾಲಕಿ, ತಂದೆ ತನ್ನೊಂದಿಗೆ ಮೆರೆದ ವಿಕೃತಿಯನ್ನು ತಾಯಿ ಬಳಿ ಹೇಳಿಕೊಂಡಿದ್ದರಿಂದ ಪ್ರಕರಣ ಬೆಳಕಿಗೆ ಬಂದಿದೆ.
ದುಷ್ಟ ತಂದೆ ಸ್ಕೂಟರಿನ ಬಿಡಿಭಾಗಗಳ ತಯಾರಿಕಾ ಕಾರ್ಖಾನೆಯಲ್ಲಿ ಕಳೆದ ಒಂದು ವರ್ಷಗಳಿಂದ ಕಾರ್ಮಿಕನಾಗಿದ್ದಾನೆ. ತನ್ನ ಪತ್ನಿ ಎರಡನೇ ಮದುವೆ ಮಾಡಿಕೊಂಡ ಬಳಿಕ ಈತ 8 ವರ್ಷದ ಹಾಗೂ 2 ವರ್ಷದ ಹೆಣ್ಣು ಮಕ್ಕಳೊಂದಿಗೆ ಉತ್ತರಪ್ರದೇಶದ ಕಾನ್ಪುರದಲ್ಲಿ ವಾಸವಾಗಿದ್ದನು. ಇದೀಗ ಮಗಳ ಮೇಲಿನ ಅತ್ಯಾಚಾರವನ್ನು ಖಂಡಿಸಿದ ತಾಯಿ ಕೂಡಲೇ ತನ್ನ ಮಗಳ ಜೊತೆ ಪೊಲೀಸ್ ಠಾಣೆಗೆ ತೆರಳಿ ಮಾಜಿ ಪತಿಯ ವಿರುದ್ಧ ದೂರು ದಾಖಲಿಸಿದ್ದಾರೆ. ಸದ್ಯ ಪ್ರಕರಣ ಸಂಬಂಧಿಸಿದಂತೆ ಆರೋಪಿ ತಂದೆಯನ್ನು ಬಂಧಿಸಿದ್ದು, ಆತನ ವಿರುದ್ಧ ಐಪಿಸಿ ಸೆಕ್ಷನ್ 376(ಅತ್ಯಾಚಾರ) ಮತ್ತು 379(ಲೈಂಗಿಕ ದೌರ್ಜನ್ಯ), ಪೋಸ್ಕೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಘಟನೆಗೆ ಬೆಳಕಿಗೆ ಬಂದಿದ್ದು ಹೇಗೆ?: ಕಳೆದ 9 ವರ್ಷದ ಹಿಂದೆ ನಾನು ಆರೋಪಿಯನ್ನು ವರಿಸಿದ್ದೇನೆ. ನಮಗಿಬ್ಬರು ಹೆಣ್ಣು ಮಕ್ಕಳಿದ್ದಾರೆ. ಆ ಬಳಿಕ ಆತ ನನಗೆ ಮತ್ತು ನನ್ನಿಬ್ಬರು ಹೆಣ್ಣು ಮಕ್ಕಳಿಗೆ ಕಿರುಕುಳ ನೀಡಲು ಆರಂಭಿಸಿದ್ದನು. ಹೀಗಾಗಿ ಕಳೆದ ವರ್ಷ ಆತ ನನ್ನಿಂದ ದೂರವಾಗಿ ಇಬ್ಬರು ಮಕ್ಕಳನ್ನು ಕರೆದುಕೊಂಡು ಹೋಗಿ ಕಾನ್ಪುರದ ಗ್ರಾಮವೊಂದರಲ್ಲಿ ನೆಲೆಸಿದ್ದನು. ಆದ್ರೂ ಕೆಲ ತಿಂಗಳ ಕಾಲ ನಾನು ಆತನಿಗಾಗಿ ಕಾದೆ. ನಂತರ ಬೇರೊಬ್ಬನನ್ನು ಮದುವೆಯಾಗಿ ಹೊಸ ಜೀವನ ನಡೆಸಲು ಆರಂಭಿಸಿದೆನು ಅಂತ ಬಾಲಕಿಯ ತಾಯಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಇತ್ತೀಚೆಗಷ್ಟೇ ಮಾರ್ಕೆಟ್ ನಲ್ಲಿ ನನ್ನ ಮಾಜಿ ಪತಿಯನ್ನು ಭೇಟಿಯಾಗಿದೆ. ಈ ವೇಳೆ ತನ್ನ ಮಕ್ಕಳನ್ನು ನೋಡುವ ಆಸೆ ವ್ಯಕ್ತಪಡಿಸಿದೆ. ಅದಕ್ಕೆ ಆತ ಒಪ್ಪಿಗೆ ಸೂಚಿಸಿದ. ಹೀಗೆ ಮಕ್ಕಳನ್ನು ನೋಡಲು ಹೋದವಳು ಅವರನ್ನು ತನ್ನೊಂದಿಗೆ ಕರೆದುಕೊಂಡು ಬಂದಿದ್ದೆ. ಈ ವೇಳೆ ದೊಡ್ಡ ಮಗಳು ಆಕೆಯ ಮೇಲೆ ತಂದೆ ನಡೆಸಿದ ಅತ್ಯಾಚಾರವನ್ನು ನನಗೆ ತಿಳಿಸಿದ್ದಾಳೆ. ಮಗಳ ಮೇಲೆ ಅತ್ಯಾಚಾರವೆಸಗಿದ್ದಲ್ಲದೇ, ಆ ವಿಚಾರವನ್ನು ಯಾರೊಂದಿಗೂ ಹೇಳಿಕೊಳ್ಳದಂತೆ ಹೊಡೆದಿದ್ದಾರೆ ಮತ್ತು ಬೆದರಿಕೆ ಕೂಡ ಹಾಕಿದ್ದಾನೆ ಅಂತ ಮಗಳು ತಿಳಿಸಿರುವುದಾಗಿ ಹೇಳಿದ್ದಾರೆ.
ನನ್ನ ಮಕ್ಕಳನ್ನು ನಾನೇ ನೋಡಿಕೊಳ್ಳುತ್ತೇನೆ. ಅವರಿಗೆ ಶಿಕ್ಷಣವನ್ನು ಕೊಡಿಸುತ್ತೇನೆ ಅಂತ ಹೇಳಿದ್ದಾರೆ. ಮಕ್ಕಳು ಆರೋಪಿ ಜೊತೆ ಇದ್ದರೆ ಆತ ಶಾಲೆಗೆ ಕಳುಹಿಸಲ್ಲ. ಹೀಗಾಗಿ ನಾನೇ ಅವರನ್ನು ನೋಡಿಕೊಳ್ಳುತ್ತೇನೆ ಅಂತ ತಾಯಿ ಹೇಳಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ತಾಯಿ ದೂರು ನೀಡುತ್ತಿದ್ದಂತೆಯೇ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮನೆಯಿಂದಲೇ ಆರೋಪಿ ತಂದೆಯನ್ನು ಬಂಧಿಸಿದ್ದಾರೆ. ಅಲ್ಲದೇ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆಯೇ ಇಲ್ಲವೇ ಎಂಬುದರ ಬಗ್ಗೆ ತನಿಖೆ ನಡೆಸಲು ಬಾಲಕಿಯನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದೆ. ಆರೋಪಿಯನ್ನು ಕೂಡ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗುತ್ತದೆ ಅಂತ ಸಹಾಯ ಪೊಲೀಸ್ ಇನ್ಸ್ ಪೆಕ್ಟರ್ ರಾಜ್ ವಂತ್ ಸಿಂಗ್ ಮಾಧ್ಯಮಕ್ಕೆ ತಿಳಿಸಿದ್ದಾರೆ.