ಬೆಂಗಳೂರು: ಆಸ್ತಿ ವಿಚಾರಕ್ಕೆ ನಡೆದ ಜಗಳ ವಿಕೋಪಕ್ಕೆ ತಿರುಗಿ, ಅಣ್ಣನೇ ತನ್ನ ಒಡಹುಟ್ಟಿದ ತಂಗಿಯನ್ನು ಕ್ರಿಕೆಟ್ ಬ್ಯಾಟ್ನಿಂದ ತಲೆಗೆ ಹೊಡೆದು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಬೆಂಗಳೂರಿನ (bengaluru Crime) ಬೆಳ್ಳಂದೂರು ಪೊಲೀಸ್ ಠಾಣಾ ವ್ಯಾಪ್ತಿಯ ಜುನ್ನಸಂದ್ರದಲ್ಲಿ ನಡೆದಿದೆ.
39 ವರ್ಷದ ಮೀನಾಕ್ಷಿ ಕೊಲೆಯಾದ ದುರ್ದೈವಿ. ವಕೀಲನಾಗಿರುವ ಅಣ್ಣ ಜಯರಾಮ್ ಕೃತ್ಯ ಎಸಗಿ ಪರಾರಿಯಾಗಿದ್ದಾನೆ.
ಮೃತ ಮೀನಾಕ್ಷಿ ಕಳೆದ ಕೆಲ ತಿಂಗಳುಗಳಿಂದ ಪತಿಯಿಂದ ದೂರವಾಗಿದ್ದರು. ಹೀಗಾಗಿ ತಮ್ಮ ಇಬ್ಬರು ಮಕ್ಕಳೊಂದಿಗೆ ತವರು ಮನೆಗೆ ಬಂದಿದ್ದ ಅವರು, ಅಣ್ಣ ಜಯರಾಮ್ ಮನೆಯ ಎದುರಿನ ಶೀಟ್ ಮನೆಯಲ್ಲಿ (ಶೆಡ್) ವಾಸವಾಗಿದ್ದರು. ಆದರೆ, ಆಸ್ತಿ ವಿಚಾರವಾಗಿ ಮತ್ತು ಶೀಟ್ ಮನೆ ಖಾಲಿ ಮಾಡುವಂತೆ ಅಣ್ಣ ಜಯರಾಮ್ ಪದೇಪದೇ ತಂಗಿ ಮೀನಾಕ್ಷಿ ಜೊತೆ ಜಗಳವಾಡುತ್ತಿದ್ದ ಎನ್ನಲಾಗಿದೆ.
ನೀರು ಎರಚಿದ ವಿಚಾರಕ್ಕೆ ಶುರುವಾದ ಜಗಳ
ಇಂದು ಬೆಳಗ್ಗೆ ಸುಮಾರು 11:30ರ ವೇಳೆಗೆ ಜಯರಾಮ್ ಅವರ ಪತ್ನಿ ಕಿಟಕಿಯಿಂದ ನೀರು ಎರಚಿದ ವಿಚಾರಕ್ಕೆ ಅತ್ತಿಗೆ ಮತ್ತು ನಾದಿನಿ (ಮೀನಾಕ್ಷಿ) ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಜಯರಾಮ್ ಪತ್ನಿ, ಕೂಡಲೇ ಶೆಡ್ ಖಾಲಿ ಮಾಡಿಕೊಂಡು ಹೋಗುವಂತೆ ಮೀನಾಕ್ಷಿ ಜೊತೆ ಜಗಳ ತೆಗೆದಿದ್ದಾರೆ. ಬಳಿಕ ಈ ಗಲಾಟೆಯ ವಿಚಾರವನ್ನು ಪತಿ ಜಯರಾಮ್ಗೆ ತಿಳಿಸಿದ್ದಾರೆ.
ಇದರಿಂದ ತೀವ್ರ ಆಕ್ರೋಶಗೊಂಡ ವಕೀಲ ಜಯರಾಮ್, ಏಕಾಏಕಿ ತಂಗಿಯ ಮನೆಗೆ ನುಗ್ಗಿ ಕೈಯಲ್ಲಿದ್ದ ಕ್ರಿಕೆಟ್ ಬ್ಯಾಟ್ನಿಂದ ಮೀನಾಕ್ಷಿ ಅವರ ತಲೆಗೆ ಬಲವಾಗಿ ಹೊಡೆದಿದ್ದಾನೆ. ಗಂಭೀರವಾಗಿ ಗಾಯಗೊಂಡ ಮೀನಾಕ್ಷಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಕೃತ್ಯ ಎಸಗಿದ ಬೆನ್ನಲ್ಲೇ ಆರೋಪಿ ಜಯರಾಮ್ ಸ್ಥಳದಿಂದ ತಲೆಮರಿಸಿಕೊಂಡಿದ್ದಾನೆ.ಇದನ್ನೂ ಓದಿ: ಚಿನ್ನ, ಬೆಳ್ಳಿ ದರ ಮತ್ತಷ್ಟು ಇಳಿಕೆ
ಘಟನಾ ಸ್ಥಳಕ್ಕೆ ಬೆಳ್ಳಂದೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸೇಂಟ್ ಜಾನ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಸಂಬಂಧ ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ತಲೆಮರಿಸಿಕೊಂಡಿರುವ ಆರೋಪಿ ಜಯರಾಮ್ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.ಇದನ್ನೂ ಓದಿ: ಬಸವ ಮಂಟಪ ಕೃತಿ ವಿವಾದ: ಲೇಖಕ ರವಿ ಹಂಜ್ಗೆ ನಿರೀಕ್ಷಣಾ ಜಾಮೀನು ಮಂಜೂರು
