ನವದೆಹಲಿ: ತಡರಾತ್ರಿ ಪಾರ್ಟಿ ಮುಗಿಸಿ ಬರುವಾಗ ಸಹೋದ್ಯೋಗಿಗಳಿಂದಲೇ ಸಾಮೂಹಿಕ ಅತ್ಯಾಚಾರ (Gang Rape) ನಡೆದಿರುವ ಆರೋಪ ಕೇಳಿಬಂದಿದ್ದು, ಪೊಲೀಸರು ಇಬ್ಬರು ಮಹಿಳೆಯರು ಸೇರಿ ಒಟ್ಟು ಮೂವರನ್ನು ಅರೆಸ್ಟ್ ಮಾಡಿದ್ದಾರೆ.
22 ವರ್ಷದ ಯುವತಿಯೊಬ್ಬರು ದೂರು ನೀಡಿದ್ದು, ಪೂರ್ವ ದೆಹಲಿಯ (Delhi) ಪ್ರೀತ್ ವಿಹಾರ್ನಲ್ಲಿರುವ ಕೆಫೆಯೊಂದರಲ್ಲಿ ತಡರಾತ್ರಿ ನಡೆದ ಪಾರ್ಟಿಯ ನಂತರ ಸಹೋದ್ಯೋಗಿಗಳಾದ ಇಬ್ಬರು ಪುರುಷರು ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಮಹಿಳೆಯರು ಸೇರಿದಂತೆ ಮೂವರನ್ನು ಬಂಧಿಸಿದ್ದು, ಉಳಿದ ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಇದನ್ನೂ ಓದಿ: ಪೋರ್ಟೊ ರಿಕೊದ ಜೆನ್ನಿಫರ್ ಬ್ಯಾರೆಟೊ 2026ರ ವಿಶ್ವ ಸುಂದರಿ ಕಿರೀಟ
ಪೊಲೀಸರ ಮಾಹಿತಿಯ ಪ್ರಕಾರ, ಸಂತ್ರಸ್ತೆ ಮತ್ತು ಆರೋಪಿಗಳು ಸೋಮವಾರ (ನ.23) ರಾತ್ರಿ ಸಂತ್ರಸ್ತೆ ಸೇರಿದಂತೆ ಎಂಟು ಜನರು ಪಾರ್ಟಿ ಮಾಡಲೆಂದು ಪ್ರೀತ್ ವಿಹಾರ್ನಲ್ಲಿರುವ ಕೆಫೆಯೊಂದರಲ್ಲಿ ಸೇರಿದ್ದರು. ಈ ಕೆಫೆ ಸಾಮಾನ್ಯವಾಗಿ ರಾತ್ರಿ 11:30ಕ್ಕೆ ಮುಚ್ಚುತ್ತದೆ. ಆದರೆ, ಉದ್ಯೋಗಿಗಳಲ್ಲಿ ಒಬ್ಬರ ಬಳಿ ಕೆಫೆಯ ಕೀಲಿ ಕೈ ಇದ್ದ ಕಾರಣ, ತಡರಾತ್ರಿ ಮತ್ತೆ ಕೆಫೆಯ ಬಾಗಿಲು ತೆರೆದು ಪಾರ್ಟಿ ಮುಂದುವರಿಸಿದ್ದಾರೆ ಎಂದು ವರದಿಯಾಗಿದೆ.
ಪಾರ್ಟಿಯಲ್ಲಿದ್ದವರೆಲ್ಲಾ ಮದ್ಯಪಾನ ಮಾಡಿದ್ದು, ಮುಂಜಾನೆ 3:30ರ ಸುಮಾರಿಗೆ ಕೆಫೆಯಿಂದ ಹೊರಬಂದಿದ್ದಾರೆ. ಇದಾದ ಸ್ವಲ್ಪ ಸಮಯದಲ್ಲೇ ಇಬ್ಬರು ಪುರುಷರು ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಮತ್ತು ಇತರ ಸಹೋದ್ಯೋಗಿಗಳು ಅವರಿಗೆ ಬೆಂಬಲ ನೀಡಿದ್ದಾರೆ ಎಂದು ಯುವತಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.ಇದನ್ನೂ ಓದಿ: ಬೆಂಗಳೂರಲ್ಲಿ 11 ಕೋಟಿ ಮೌಲ್ಯದ ಡ್ರಗ್ಸ್ ವಶ – ಇಬ್ಬರು ಅರೆಸ್ಟ್
ನಾಲ್ವರು ಪುರುಷರು ಮತ್ತು ಇಬ್ಬರು ಮಹಿಳೆಯರು ಸೇರಿದಂತೆ ಒಟ್ಟು ಆರು ಜನರ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಈ ಪೈಕಿ ಇಬ್ಬರು ಮಹಿಳೆಯರು ಸೇರಿದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ಪರಾರಿಯಾಗಿರುವ ಉಳಿದ ಮೂವರ ಪತ್ತೆಗೆ ಶೋಧ ಕಾರ್ಯ ನಡೆಯುತ್ತಿದೆ. ಪ್ರಸ್ತುತ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತೆಯ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗುತ್ತಿದ್ದು, ಮ್ಯಾಜಿಸ್ಟ್ರೇಟ್ ಮುಂದೆಯೂ ಆಕೆಯ ಹೇಳಿಕೆಯನ್ನು ದಾಖಲಿಸಲಾಗುವುದು.
ಪ್ರಾಥಮಿಕ ಮಾಹಿತಿಯ ಪ್ರಕಾರ, ಘಟನೆ ನಡೆದ ತಕ್ಷಣ ಯುವತಿ ಪೊಲೀಸರನ್ನು ಸಂಪರ್ಕಿಸಿರಲಿಲ್ಲ. ಆದರೆ ಒಬ್ಬ ಸ್ನೇಹಿತ ಮತ್ತು ಇತರ ಇಬ್ಬರು ಮಹಿಳೆಯರೊಂದಿಗೆ ವಾಹನವೊಂದರಲ್ಲಿ ತೆರಳುತ್ತಿರುವುದು ಸಿಸಿಟಿವಿ ದೃಶ್ಯಾವಳಿಗಳಲ್ಲಿ ಕಂಡುಬಂದಿದೆ ಎಂದು ವರದಿಯಾಗಿದೆ. ನಂತರ ಮಂಗಳವಾರ (ನ.24) ಮುಂಜಾನೆ 5:45ರ ಸುಮಾರಿಗೆ ಪೊಲೀಸ್ ಠಾಣೆಗೆ ತಲುಪಿ, ಯುವತಿ ದೂರು ದಾಖಲಿಸಿದ್ದಾರೆ.ಇದನ್ನೂ ಓದಿ: ರಾಜ್ಯದಲ್ಲಿ ಇಂದು ಶಾಲಾ ಮಕ್ಕಳಿಗಿಲ್ಲ ಬಿಸಿಯೂಟ
