-ಹೈಕೋರ್ಟ್ ಆದೇಶ ರದ್ದುಪಡಿಸಿದ ಸುಪ್ರೀಂ
ನವದೆಹಲಿ: ಧಾರವಾಡ ಜಿ.ಪಂ ಸದಸ್ಯ ಯೋಗೇಶ್ ಗೌಡ ಕೊಲೆ ಕೇಸ್ನಲ್ಲಿ (Yogesh Gowda Case) ಹೈಕೋರ್ಟ್ ಬೇಲ್ ಮೇಲೆ ಹೊರಗೆ ಬಂದಿದ್ದ ಶಾಸಕ ವಿನಯ್ ಕುಲಕರ್ಣಿಗೆ (Vinay Kulkarni) ಮತ್ತೆ ಜೈಲೇ ಗತಿಯಾಗಿದೆ. ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್ (Supreme Court) ರದ್ದುಪಡಿಸಿದ್ದು, 2 ವಾರಗಳಲ್ಲಿ ಸೆಷನ್ಸ್ ಕೋರ್ಟ್ಗೆ ಶರಣಾಗುವಂತೆ ಸೂಚಿಸಿದೆ.
2023ರ ಚುನಾವಣೆ ಗೆದ್ದ ಬಳಿಕ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ಶಾಸಕ ವಿನಯ್ ಕುಲಕರ್ಣಿ ಬಹುತೇಕ ಜೈಲಿನಲ್ಲೇ ಇದ್ದರು. ಜಾಮೀನು ಪೆರೋಲ್ ಹೀಗೆ ಎರಡೆರಡು ಬಾರಿ ಜೈಲಿನಿಂದ ಹೊರ ಬಂದಿದ್ದ ವಿನಯ್ ಕುಲಕರ್ಣಿ ಈಗ ಮತ್ತೆ ಜೈಲುಪಾಲಾಗಿದ್ದಾರೆ. ನ್ಯಾ. ಪ್ರಶಾಂತ್ ಕುಮಾರ್ ನೇತೃತ್ವದ ದ್ವಿ ಸದಸ್ಯ ಪೀಠ ಆದೇಶ ಹೊರಡಿಸಿದೆ.
ಕೊಲೆ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯ 2026ರ ಏಪ್ರಿಲ್ 15ರಂದು ವಿನಯ್ ಕುಲಕರ್ಣಿ ಸೇರಿದಂತೆ ಆರೋಪಿಗಳನ್ನು ದೋಷಿಗಳೆಂದು ಘೋಷಿಸಿತು. ಏಪ್ರಿಲ್ 17ರಂದು ವಿನಯ್ ಕುಲಕರ್ಣಿ ಸೇರಿದಂತೆ 16 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಲಾಯಿತು. ಮತ್ತೊಬ್ಬ ಆರೋಪಿ ಚನ್ನಕೇಶವ ಟಿಂಗರಿಕರ್ಗೆ ಏಳು ವರ್ಷಗಳ ಶಿಕ್ಷೆ ವಿಧಿಸಲಾಯಿತು. ಇನ್ನೂ ವಿಚಾರಣಾ ನ್ಯಾಯಾಲಯ ನೀಡಿದ ಆದೇಶ ಪ್ರಶ್ನಿಸಿ ವಿನಯ್ ಕುಲಕರ್ಣಿ ಹೈಕೋರ್ಟ್ಗೆ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು. ಜುಲೈ 31 ರಂದು ಹೈಕೋರ್ಟ್, ಮೇಲ್ಮನವಿ ಇತ್ಯರ್ಥವಾಗುವವರೆಗೆ ಅವರ ಶಿಕ್ಷೆ ಹಾಗೂ ಅಪರಾಧ ನಿರ್ಣಯಕ್ಕೆ ತಡೆ ನೀಡಿ, ಜಾಮೀನು ನೀಡಿತ್ತು. ಇದರ ಬೆನ್ನಲ್ಲೇ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸಿಬಿಐ ಮತ್ತು ಯೋಗೇಶಗೌಡ ಸಹೋದರ ಗುರುನಾಥಗೌಡ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.
ಬಿಜೆಪಿಯ ಯೋಗೇಶ್ಗೌಡ ಹತ್ಯೆ ಹಿಸ್ಟರಿ..!
* ಜೂನ್ 15, 2016ರಂದು ನಡೆದಿದ್ದ ಯೋಗೇಶ್ ಗೌಡ ಹತ್ಯೆ
* 2019ರಲ್ಲಿ ರಾಜ್ಯ ಸರ್ಕಾರದಿಂದ ಕೇಸ್ ಸಿಬಿಐಗೆ ಹಸ್ತಾಂತರ
* ನವೆಂಬರ್ 5, 2020ರಲ್ಲಿ ವಿನಯ್ ಕುಲಕರ್ಣಿ ಬಂಧನ
* ಆಗಸ್ಟ್ 2021ರಲ್ಲಿ ಸುಪ್ರೀಂಕೋರ್ಟ್ನಿಂದ ಷರತ್ತುಬದ್ಧ ಜಾಮೀನು
* ಮೇ 2023ರಲ್ಲಿ ಧಾರವಾಡ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆ
* ಜೂನ್ 2025ರಲ್ಲಿ ಸುಪ್ರೀಂಕೋರ್ಟ್ನಿಂದ ಮತ್ತೆ ಜಾಮೀನು ರದ್ದು
* ಏಪ್ರಿಲ್ 15, 2026ರಂದು 16 ಮಂದಿ ದೋಷಿ ಎಂದು ಜನಪ್ರತಿನಿಧಿ ಕೋರ್ಟ್ ತೀರ್ಪು
* ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ನಿಂದ ಜೀವಾವಧಿ ಶಿಕ್ಷೆ ಪ್ರಕಟ
* ಮೇ 2026ರಲ್ಲಿ ಶಾಸಕ ಸ್ಥಾನ ವಜಾಗೊಳಿಸಿದ ವಿಧಾನಸಭಾಧ್ಯಕ್ಷರು
* ಜುಲೈ 30-31, 2026ರಂದು ಹೈಕೋರ್ಟ್ನಿಂದ ಶಿಕ್ಷೆಗೆ ತಡೆಯಾಜ್ಞೆ
* ಅ.2026ರಲ್ಲಿ ಹೈಕೋರ್ಟ್ ತಡೆಯಾಜ್ಞೆ ಪ್ರಶ್ನಿಸಿ ಸುಪ್ರೀಂಗೆ ಮೇಲ್ಮನವಿ
ಸಿಬಿಐ ಪರ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ. ರಾಜು ವಾದ ಮಂಡಿಸಿದ್ರು. ಗಂಭೀರ ಅಪರಾಧಗಳಲ್ಲಿ ಶಿಕ್ಷೆ ಅಮಾನತುಗೊಳಿಸುವಾಗ ಸುಪ್ರೀಂ ಕೋರ್ಟ್ನ ಹಿಂದಿನ ತೀರ್ಪುಗಳು ಹಾಗೂ ಕಾನೂನು ತತ್ವಗಳನ್ನು ಪಾಲಿಸಬೇಕು. ಕರ್ನಾಟಕ ಹೈಕೋರ್ಟ್ ವಿನಯ್ ಕುಲಕರ್ಣಿ ಅವರ ಶಿಕ್ಷೆ ಅಮಾನತುಗೊಳಿಸಿ ಜಾಮೀನು ನೀಡಿರುವುದು ಸರಿಯಲ್ಲ ಎಂದು ವಾದ ಮಂಡಿಸಿದ್ರು. ಇನ್ನೂ ವಿನಯ್ ಕುಲಕರ್ಣಿ ಪರ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ವಾದ ಮಂಡಿಸಿದ್ರು.
ಸದ್ಯ ಇದೇ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಜಾಮೀನು ರದ್ದು ಮಾಡಿದ್ದು, ಮೂರನೇ ಬಾರಿಗೆ ಜೈಲು ಸೇರಬೇಕಾದ ಪರಿಸ್ಥಿತಿ ಎದುರಾಗಿದೆ.

