– ಆಂತರಿಕ ತನಿಖೆ ಮುಂದುವರಿಕೆ
ವಾಷಿಂಗ್ಟನ್: ಚೀನಾದ ಬೇಹುಗಾರಿಕೆ ನಂಟು ಮತ್ತು ವಿವಾಹೇತರ ಸಂಬಂಧಗಳ ಆರೋಪದ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಿದ್ದ ಜೆನ್ಸನ್ ಹುವಾಂಗ್(Jensen Huang) ಅವರನ್ನು ಎನ್ವಿಡಿಯಾ (Nvidia) ಕಂಪನಿಯು ಮತ್ತೆ ಅಧ್ಯಕ್ಷ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ಮತ್ತು ನಿರ್ದೇಶಕರನ್ನಾಗಿ ಮರುನೇಮಕ ಮಾಡಿದೆ. ಕಂಪನಿಯ ಆಡಳಿತ ಮಂಡಳಿಯ ಈ ನಿರ್ಧಾರವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಬೆಂಬಲಿಸಿದ್ದಾರೆ.
ಸುಮಾರು ಎರಡು ವಾರಗಳ ಹಿಂದೆ ಹುವಾಂಗ್ ಅವರ ರಾಜೀನಾಮೆಯನ್ನು ಅಂಗೀಕರಿಸಿದ್ದ ಕಂಪನಿಯ ಆಡಳಿತ ಮಂಡಳಿ, ಇದೀಗ ತನ್ನ ಹಿಂದಿನ ನಿರ್ಧಾರವನ್ನು ಹಿಂಪಡೆದಿದೆ. ಹುವಾಂಗ್ ಅವರೊಂದಿಗೆ ಸರಣಿ ಚರ್ಚೆ ನಡೆಸಿದ ಬಳಿಕ, ಅವರು ಮಂಡಳಿಯ ಮುಂದೆ ಎಲ್ಲವನ್ನೂ ಮುಕ್ತವಾಗಿ ಹೇಳಿಕೊಂಡಿದ್ದಾರೆ ಮತ್ತು ಕಂಪನಿಯನ್ನು ಮುನ್ನಡೆಸಲು ಅವರೇ ಸೂಕ್ತ ವ್ಯಕ್ತಿ ಎಂಬ ನಿರ್ಧಾರಕ್ಕೆ ಬರಲಾಗಿದೆ. ಈ ನೇಮಕಾತಿ ತಕ್ಷಣದಿಂದಲೇ ಜಾರಿಗೆ ಬರಲಿದ್ದು, ನಿರ್ಧಾರ ಕೈಗೊಳ್ಳುವ ಮುನ್ನ ಅಮೆರಿಕ ಸರ್ಕಾರದ ಹಿರಿಯ ಅಧಿಕಾರಿಗಳ ಅಭಿಪ್ರಾಯವನ್ನೂ ಪಡೆಯಲಾಗಿದೆ ಎಂದು ಎನ್ವಿಡಿಯಾ ತಿಳಿಸಿದೆ.
ಕಂಪನಿಯ ಷೇರುದಾರರು, ಉದ್ಯೋಗಿಗಳು ಮತ್ತು ಗ್ರಾಹಕರ ಹಿತದೃಷ್ಟಿಯಿಂದ ಜೆನ್ಸನ್ ಅವರೇ ಸೂಕ್ತ ನಾಯಕ. ಅವರ ನಾಯಕತ್ವದ ಮೇಲೆ ನಮಗೆ ಸಂಪೂರ್ಣ ವಿಶ್ವಾಸವಿದೆ ಎಂದು ಆಡಳಿತ ಮಂಡಳಿ ಅಧ್ಯಕ್ಷ ಹಾರ್ವೆ ಸಿ. ಜೋನ್ಸ್ ಹೇಳಿದ್ದಾರೆ. ಹುವಾಂಗ್ ಅವರ ನಿರ್ಗಮನದ ಬಳಿಕ ಮಧ್ಯಂತರ ಸಿಇಒ ಆಗಿ ಕಾರ್ಯನಿರ್ವಹಿಸಿದ್ದ ಕೊಲೆಟ್ ಕ್ರೆಸ್ ಅವರಿಗೆ ಧನ್ಯವಾದ ತಿಳಿಸಿರುವ ಮಂಡಳಿ, ಅವರು ಇನ್ನು ಮುಂದೆ ಕಂಪನಿಯ ಮುಖ್ಯ ಹಣಕಾಸು ಅಧಿಕಾರಿಯಾಗಿ (CFO) ತಮ್ಮ ಜವಾಬ್ದಾರಿ ಮುಂದುವರಿಸಲಿದ್ದಾರೆ ಎಂದು ತಿಳಿಸಿದೆ.
ಮರುನೇಮಕದ ಕುರಿತು ಪ್ರತಿಕ್ರಿಯಿಸಿರುವ 63 ವರ್ಷದ ಜೆನ್ಸನ್ ಹುವಾಂಗ್, ಹೊಸ ಕೈಗಾರಿಕಾ ಕ್ರಾಂತಿಯ ಮುಂಚೂಣಿಯಲ್ಲಿರುವ ಕಂಪನಿಗೆ ಮರಳಲು ಹೆಮ್ಮೆಯಾಗುತ್ತಿದೆ. ಅತ್ಯಂತ ವಿನಮ್ರತೆ ಮತ್ತು ಹೊಸ ಬದ್ಧತೆಯೊಂದಿಗೆ ಈ ಜವಾಬ್ದಾರಿಯನ್ನು ಸ್ವೀಕರಿಸುತ್ತಿದ್ದೇನೆ. ಕೆಲಸಕ್ಕೆ ಮರಳಲು ನಾನು ಕಾತರನಾಗಿದ್ದೇನೆ” ಎಂದಿದ್ದಾರೆ. ಇದನ್ನೂ ಓದಿ: ಹನಿಟ್ರ್ಯಾಪ್ ಬಲೆಗೆ ಸಿಲುಕಿ ಚೀನಾಗೆ ಚಿಪ್ ರವಾನೆ – ಭಾರತಕ್ಕೆ ಆತಂಕ ಏನು?
BREAKING: Nvidia stock, $NVDA, surges over +28% after the company reinstates Jensen Huang as CEO, effectively immediately.
The stock has now added +$820 billion in market cap today on the news.
Jensen Huang is officially back. https://t.co/3UabhFKxzu
— The Kobeissi Letter (@KobeissiLetter) November 23, 2026
ಟ್ರಂಪ್ ಶ್ಲಾಘನೆ:
ಟ್ರುತ್ ಸೋಶಿಯಲ್ ವೇದಿಕೆಯಲ್ಲಿ ಪೋಸ್ಟ್ ಮಾಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಎನ್ವಿಡಿಯಾ ಮಂಡಳಿಯ ನಿರ್ಧಾರವನ್ನು “ಸರಿಯಾದ ಮತ್ತು ಸೂಕ್ತ ನಿರ್ಧಾರ” ಎಂದು ಶ್ಲಾಘಿಸಿದ್ದಾರೆ.
“The NVIDIA Board of Directors has made the correct and proper decision to return Jensen Huang to the position of CEO… Congratulations to Jensen, the NVIDIA Board, to the People of the United States — and, indeed, the World!” – President DONALD J. TRUMP https://t.co/bKAxuMr9aA
— The White House (@WhiteHouse) November 23, 2026
ಎನ್ವಿಡಿಯಾ ಕಂಪನಿಯಷ್ಟೇ ಅಲ್ಲದೆ, ಅಮೆರಿಕದ ಆರ್ಥಿಕತೆಯ ಯಶಸ್ಸು ಮತ್ತು ಸಮೃದ್ಧಿಗಾಗಿ ದೇಶಕ್ಕೆ ಜೆನ್ಸನ್ ಅವರ ನಾಯಕತ್ವದ ಅಗತ್ಯವಿದೆ. ಅವರು ಒಬ್ಬ ಮಹಾನ್ ದೇಶಭಕ್ತ ಮತ್ತು ರಾಷ್ಟ್ರೀಯ ಸಂಪತ್ತು. ಹುವಾಂಗ್ ಅವರು ಕಾನೂನುಬಾಹಿರ ಚಟುವಟಿಕೆಯಲ್ಲಿ ಭಾಗಿಯಾಗಿರುವುದಕ್ಕೆ ಯಾವುದೇ ಸಾಕ್ಷ್ಯಗಳಿಲ್ಲ ಎಂದು ಅಟಾರ್ನಿ ಜನರಲ್ ದೃಢಪಡಿಸಿದ್ದಾರೆ. ಹೀಗಾಗಿ ಅವರ ಮರುನೇಮಕದಿಂದ ರಾಷ್ಟ್ರೀಯ ಭದ್ರತೆಗೆ ಯಾವುದೇ ಅಪಾಯವಿಲ್ಲ ಎಂದು ಟ್ರಂಪ್ ಹೇಳಿದ್ದಾರೆ. ಆದಾಗ್ಯೂ, ಅಮೆರಿಕದ ರಫ್ತು ನಿಯಂತ್ರಣ ನಿಯಮಗಳ ಪಾಲನೆ ಕುರಿತು ಕಂಪನಿಯು ತನ್ನ ಆಂತರಿಕ ತನಿಖೆಯನ್ನು ಮುಂದುವರಿಸಬೇಕು ಎಂದು ಟ್ರಂಪ್ ಸೂಚಿಸಿದ್ದಾರೆ.
