ನವದೆಹಲಿ: ಇಲ್ಲಿನ (Delhi) ಥಾಣಾದಲ್ಲಿ ದುಷ್ಕರ್ಮಿಯೊಬ್ಬ 9 ಪೊಲೀಸರಿಗೆ ಚಾಕು ಇರಿದ ಘಟನೆ ನಡೆದಿದೆ. ಮೊದಲು ಜಾಮಾ ಮಸೀದಿ ಪೊಲೀಸ್ ಠಾಣೆಯಲ್ಲೇ ಐವರು ಪೊಲೀಸರಿಗೆ (Police) ದುಷ್ಕರ್ಮಿ ಚಾಕು ಇರಿದು ಪರಾರಿಯಾಗಿದ್ದ. ಆತನ ಬಂಧನಕ್ಕೆ ತೆರಳಿದಾಗ ಮತ್ತೆ ನಾಲ್ವರು ಪೊಲೀಸರ ಮೇಲೆ ಆರೋಪಿ ದಾಳಿ ನಡೆಸಿದ್ದಾನೆ. ಬಳಿಕ ಆತನಿಗೆ ಗುಂಡೇಟು ನೀಡಿ ಪೊಲೀಸರು ಬಂಧಿಸಿದ್ದಾರೆ.
ನಬೀಲ್ ಎಂಬಾತ ಈ ದಾಳಿ ನಡೆಸಿದ ಆರೋಪಿ. ಈತನ ವಿರುದ್ಧ ತಾಯಿ ಹಾಗೂ ತಂಗಿ ಕಿರುಕುಳ ನೀಡುತ್ತಿದ್ದ ಆರೋಪ ಮಾಡಿದ್ದರು. ಅದಕ್ಕಾಗಿ ಮಧ್ಯಾಹ್ನ 2:30ರ ಸುಮಾರಿಗೆ ಕೌನ್ಸಿಲಿಂಗ್ಗಾಗಿ ಪೊಲೀಸ್ ಠಾಣೆಗೆ ಆತನನ್ನು ಕರೆಸಲಾಗಿತ್ತು. ಇದನ್ನೂ ಓದಿ: ಕೋಲಾರ | ಅಪ್ರಾಪ್ತೆ ಮದುವೆಯಾಗಿ ಮೂರು ಮಕ್ಕಳ ತಂದೆಯಾಗಿದ್ದವ ಜೈಲಿಗೆ
ಪೊಲೀಸ್ ಠಾಣೆಯಲ್ಲಿ ಮಾತನಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಆರೋಪಿ ಚಾಕು ತೆಗೆದು ಐದು ಸಿಬ್ಬಂದಿ ಮೇಲೆ ದಾಳಿ ಮಾಡಿದ್ದಾನೆ. ದಾಳಿಯಲ್ಲಿ ಗಾಯಗೊಂಡವರ ಪೈಕಿ ಇಬ್ಬರು ಸಬ್-ಇನ್ಸ್ಪೆಕ್ಟರ್ಗಳು, ಇಬ್ಬರು ಹೆಡ್ ಕಾನ್ಸ್ಟೆಬಲ್ಗಳು ಮತ್ತು ಒಬ್ಬ ಸಹಾಯಕ ಸಬ್-ಇನ್ಸ್ಪೆಕ್ಟರ್ ಸೇರಿದ್ದಾರೆ. ಅವರಲ್ಲಿ ಮೂವರು ಗಂಭೀರ ಗಾಯಗಳಾಗಿವೆ. ಘಟನೆಯ ಸಮಯದಲ್ಲಿ ಆತನ ತಾಯಿ ಮತ್ತು ಸಹೋದರಿ ಪೊಲೀಸ್ ಠಾಣೆಯಲ್ಲೇ ಇದ್ದರು.
ದಾಳಿಯ ನಂತರ ನಬೀಲ್ ಪೊಲೀಸ್ ಠಾಣೆಯಿಂದ ಪರಾರಿಯಾಗಿದ್ದ. ಮೊದಲು ಕಾಲ್ನಡಿಗೆಯಲ್ಲೇ ತೆರಳಿದ್ದ. ನಂತರ ಒಬ್ಬರಿಂದ ಸ್ಕೂಟರ್ ಕಸಿದುಕೊಂಡು ಪರಾರಿಯಾಗಿದ್ದ. ಪೊಲೀಸ್ ತಂಡವು ಅವನನ್ನು ಬೆನ್ನಟ್ಟಿ ಪತ್ತೆಹಚ್ಚಿತ್ತು. ಆದಾಗ್ಯೂ, ಸುಮಾರು ಎರಡು ಗಂಟೆಗಳ ಕಾಲ ನಡೆದ ಕಾರ್ಯಾಚರಣೆಯ ನಂತರ ಹಿಡಿಯಲು ಪ್ರಯತ್ನಿಸಿದಾಗ, ಮತ್ತೆ ಚಾಕುವಿನಿಂದ ದಾಳಿ ಮಾಡಿದ್ದ. ಆಗ ನಾಲ್ವರು ಕಾನ್ಸ್ಟೆಬಲ್ಗಳು ಗಾಯಗೊಂಡಿದ್ದಾರೆ.
ಆರೋಪಿಯನ್ನು ನಿಯಂತ್ರಣಕ್ಕೆ ತರಲು ಪೊಲೀಸರು ಆತ್ಮರಕ್ಷಣೆಗಾಗಿ 8 ಸುತ್ತು ಗುಂಡು ಹಾರಿಸಿದ್ದು, ಅದರಲ್ಲಿ 6 ಗುಂಡುಗಳು ಆತನ ಎರಡೂ ಕಾಲುಗಳಿಗೆ ತಗುಲಿವೆ. ಆತನನ್ನು ಚಿಕಿತ್ಸೆಗಾಗಿ ಲೋಕ ನಾಯಕ್ ಆಸ್ಪತ್ರೆಗೆ (LNJP) ದಾಖಲಿಸಲಾಗಿದೆ.
ಗಾಯಗೊಂಡ ಒಂಬತ್ತು ಪೊಲೀಸ್ ಸಿಬ್ಬಂದಿಯಲ್ಲಿ ನಾಲ್ವರಿಗೆ LNJP ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಐವರನ್ನು ಸರ್ ಗಂಗಾ ರಾಮ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ನಬೀಲ್ ಮಾನಸಿಕವಾಗಿ ಸದೃಢನಾಗಿದ್ದಾನೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದು, ಆತ ಮಾನಸಿಕ ಅಸ್ವಸ್ಥ ಎಂಬ ವದಂತಿಗಳನ್ನು ತಳ್ಳಿಹಾಕಿದ್ದಾರೆ. ಇಲ್ಲಿಯವರೆಗೆ ಯಾವುದೇ ವಿಚಾರಣೆ ನಡೆಸಲಾಗಿಲ್ಲ. ಅಲ್ಲದೇ ಆತ ಪೊಲೀಸರ ಮೇಲೆ ದಾಳಿ ಮಾಡಲು ಕಾರಣವೇನು ಎಂದು ತಿಳಿದುಬಂದಿಲ್ಲ.
ನಬೀಲ್ ಈ ಹಿಂದೆ ಕ್ರಿಮಿನಲ್ ದಾಖಲೆಯನ್ನು ಹೊಂದಿದ್ದು, 2022 ರಲ್ಲಿ ದರ್ಯಾ ಗಂಜ್ ಪೊಲೀಸ್ ಠಾಣೆಯಲ್ಲಿ ಅವನ ವಿರುದ್ಧ ಹೊಡೆದಾಟಕ್ಕೆ ಸಂಬಂಧಿಸಿದ ಪ್ರಕರಣ ದಾಖಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ರೌಡಿಶೀಟರ್ಗಳಿಗೆ ಶಾಕ್ ಶಾಕ್ – 100ಕ್ಕೂ ಹೆಚ್ಚು ಮನೆಗಳ ಮೇಲೆ ಪೊಲೀಸರ ದಾಳಿ
