– 3,100 ರೂ. ನಿಗದಿಗೆ ಮಾಲೀಕರ ಹಠ
ಹಾವೇರಿ: ಕಬ್ಬಿಗೆ ಸೂಕ್ತ ದರ ನಿಗದಿ ಮಾಡುವಂತೆ ಒತ್ತಾಯಿಸಿ ಹಾವೇರಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಕಬ್ಬು ಬೆಳೆಗಾರರು ನಡೆಸುತ್ತಿರುವ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿದೆ.
ಸತತ 6 ಗಂಟೆಗಳ ಕಾಲ ನಡೆದ ಮ್ಯಾರಥಾನ್ ಸಭೆಯಲ್ಲೂ ಸಕ್ಕರೆ ಕಾರ್ಖಾನೆ ಮಾಲೀಕರು ಮತ್ತು ರೈತರ ನಡುವೆ ಒಮ್ಮತ ಮೂಡದ ಕಾರಣ, ಡಿಸಿ ಕಚೇರಿ ಆವರಣ ಅಕ್ಷರಶಃ ರಣರಂಗವಾಗಿ ಮಾರ್ಪಟ್ಟಿದೆ.
ಪ್ರತಿ ಟನ್ ಕಬ್ಬಿಗೆ 3,600 ರೂ. ದರ ನೀಡಲೇಬೇಕು ಎಂದು ರೈತರು ಪಟ್ಟು ಹಿಡಿದಿದ್ದರೆ, ಕಾರ್ಖಾನೆ ಮಾಲೀಕರು 3,000 ದಿಂದ 3,150 ರೂ. ಕೊಡುವುದಾಗಿ ಹೇಳುತ್ತಿದ್ದಾರೆ. ಇದರಿಂದ ರೊಚ್ಚಿಗೆದ್ದ ನೂರಾರು ರೈತರು, ಪೊಲೀಸರ ಭದ್ರತೆಯನ್ನೂ ಲೆಕ್ಕಿಸದೆ ಮುಖ್ಯ ಗೇಟ್ ತಳ್ಳಿ ಜಿಲ್ಲಾಧಿಕಾರಿ ಕಚೇರಿ ಒಳಗೆ ನುಗ್ಗಲು ಯತ್ನಿಸಿದರು. ಪರಿಸ್ಥಿತಿ ಕೈಮೀರುತ್ತಿದ್ದಂತೆ ಖಾಕಿ ಪಡೆ ಕಚೇರಿ ಬಾಗಿಲು ಬಂದ್ ಮಾಡಿ, 250ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಿದೆ.
ಮತ್ತೊಂದೆಡೆ, ಯಾವೊಬ್ಬ ಅಧಿಕಾರಿಯೂ ಕಚೇರಿಯಿಂದ ಹೊರಗೆ ಹೋಗದಂತೆ ರೈತರು ಡಿಸಿ ಕಚೇರಿಯ ಎರಡೂ ಗೇಟ್ಗಳನ್ನು ಬಂದ್ ಮಾಡಿದ್ದರು. ಅಲ್ಲದೆ, ರಸ್ತೆಗೆ ಕಲ್ಲು, ಕಟ್ಟಿಗೆ ಮತ್ತು ಮುಳ್ಳಿನ ಬೇಲಿ ಹಾಕಿ ಜಿಲ್ಲಾಧಿಕಾರಿ ನಿವಾಸಕ್ಕೆ ಹೋಗುವ ರಸ್ತೆಯನ್ನೂ ತಡೆದಿದ್ದಾರೆ. ಇದರಿಂದ ಸಂಜೆ ಕೆಲಸ ಮುಗಿಸಿ ಮನೆಗೆ ಹೋಗಲು ಕಚೇರಿ ಸಿಬ್ಬಂದಿ ಪರದಾಡುವಂತಾಗಿದೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪೂರ್ವ ವಲಯ ಐಜಿಪಿ ಎನ್. ಸತೀಶ್ ಕುಮಾರ್ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸುತ್ತಿದ್ದಾರೆ.ಇದನ್ನೂ ಓದಿ: ಉಡಾನ್ 6.0 ಯೋಜನೆಗೆ ಶಿವಮೊಗ್ಗ ಏರ್ಪೋರ್ಟ್ ಸೇರ್ಪಡೆ: ಬಿವೈಆರ್
ಸಭೆಯಲ್ಲಿ ಸಚಿವ ರುದ್ರಪ್ಪ ಲಮಾಣಿ, ಜಿಲ್ಲಾಧಿಕಾರಿ ಹಾಗೂ ರೈತ ಮುಖಂಡ ಚೂನಪ್ಪ ಪೂಜೇರಿ ಭಾಗಿಯಾಗಿದ್ದರು. ರಾಜ್ಯದ ಬೇರೆ ಕಾರ್ಖಾನೆಗಳಂತೆ ಇಲ್ಲಿಯೂ ಮೊದಲ ಕಂತಿನಲ್ಲಿ 3,500 ರೂ. ಹಾಗೂ ನಂತರ 100 ರೂ. ಸೇರಿ ಒಟ್ಟು 3,600 ರೂ. (ಕೊನೆ ಪಕ್ಷ 3,400 ರೂ. ಆದರೂ) ಘೋಷಿಸಬೇಕು ಎಂದು ಚೂನಪ್ಪ ಪೂಜೇರಿ ಆಗ್ರಹಿಸಿದರು. ಆದರೆ ಜಿ.ಎಂ. ಶುಗರ್ಸ್ ಮತ್ತು ಹೆಬ್ಬಾರ್ ಕಾರ್ಖಾನೆ ಮಾಲೀಕರು 3,100 ರೂ.ಗಿಂತ ಹೆಚ್ಚು ನೀಡಲು ಒಪ್ಪದ ಕಾರಣ ಮಾತುಕತೆ ವಿಫಲವಾಗಿದೆ.
ಸಕ್ಕರೆ ಸಚಿವರ ಕ್ಷೇತ್ರದಲ್ಲೇ ಕಬ್ಬಿಗೆ ಸರಿಯಾದ ಬೆಲೆ ಸಿಗುತ್ತಿಲ್ಲ ಎಂದು ಆಕ್ರೋಶ ಹೊರಹಾಕಿರುವ ರೈತರು, ಸೂಕ್ತ ದರ ಘೋಷಣೆಯಾಗುವವರೆಗೂ ಡಿಸಿ ಕಚೇರಿ ಮುಂದೆಯೇ ಅಹೋರಾತ್ರಿ ಧರಣಿ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.ಇದನ್ನೂ ಓದಿ: ದೇಶದ ಚಿನ್ನ ಆಮದು ಶೇ.40 ರಷ್ಟು ಇಳಿಕೆ: ಮದುವೆ ಸೀಸನ್ನಲ್ಲಿ ಗ್ರಾಹಕರಿಗೆ ನಿರಾಳ
