– ಭಾರತದ 2 ಗಡಿಗಳಲ್ಲಿ ಏಕಕಾಲಿಕ ಯುದ್ಧದ ಸಂಭಾವ್ಯತೆ ಆತಂಕ
ವಾಷಿಂಗ್ಟನ್/ನವದೆಹಲಿ: ಕಳೆದ ವರ್ಷ ಭಾರತ ನಡೆಸಿದ ʻಆಪರೇಷನ್ ಸಿಂಧೂರʼ (Operation Sindoor) ಕಾರ್ಯಾಚರಣೆ ವೇಳೆ ಪಾಕಿಸ್ತಾನಕ್ಕೆ ಚೀನಾ ನೀಡಿದ ಮಿಲಿಟರಿ ಬೆಂಬಲವು, ಭಾರತದ ಏಳಿಗೆಯನ್ನು ತಡೆಯುವ ಕಾರ್ಯತಂತ್ರದ ಭಾಗವಾಗಿತ್ತು ಎಂದು ಅಮೆರಿಕ ಸಂಸತ್ ಸಮಿತಿಯ ವರದಿ ಹೇಳಿದೆ.
ಹೌದು. ಅಮೆರಿಕ ಸಂಸತ್ತು ತನ್ನ ಇತ್ತೀಚಿನ ವಾರ್ಷಿಕ ವರದಿಯಲ್ಲಿ ಈ ಸ್ಫೋಟಕ ಅಂಶವನ್ನ ಬಹಿರಂಗಪಡಿಸಿದೆ. ಚೀನಾ (China) ದೇಶವು ಭಾರತದ ಏಳಿಗೆಯನ್ನ ಸಹಿಸುತ್ತಿಲ್ಲ, ಭಾರತವನ್ನ (India) ನಿಯಂತ್ರಣದಲ್ಲಿಡಲು ಬಯಸುತ್ತಿದೆ. ಅದಕ್ಕಾಗಿ ಗಡಿಯಲ್ಲಿ ಮಿಲಿಟರಿ ಒತ್ತಡ ಮತ್ತು ಕೈಗಾರಿಕಾ ಪೂರೈಕೆಗಳ ಮೇಲಿನ ನಿರ್ಬಂಧ ಹಾಗೂ ಸಮುದ್ರ ವಿಸ್ತರಣೆಯನ್ನ ಬಳಸುತ್ತಿದೆ ಎಂದು ಅಮೆರಿಕ ಎಚ್ಚರಿಸಿದೆ.
ಹೀಗಾಗಿ ಚೀನಾದ ಹೆಚ್ಚುತ್ತಿರುವ ಪ್ರಾದೇಶಿಕ ಪ್ರಭಾವ ಎದುರಿಸಲು ಅಮೆರಿಕ ಮತ್ತು ಭಾರತದ ನಡುವೆ ಗುಪ್ತಚರ, ಕಡಲ ಮತ್ತು ಉತ್ಪಾದನಾ ಕ್ಷೇತ್ರಗಳಲ್ಲಿ ಆಳವಾದ ಸಹಕಾರಕ್ಕಾಗಿ ಯುಎಸ್-ಚೀನಾ ಆರ್ಥಿಕ ಮತ್ತು ಭದ್ರತಾ ಪರಿಶೀಲನಾ ಆಯೋಗ (USCC) ಕರೆ ನೀಡಿದೆ. ಏಷ್ಯಾದಲ್ಲಿ ಶಕ್ತಿ ಸಮತೋಲನ ರೂಪಿಸುವಲ್ಲಿ ಮತ್ತು ಚೀನಾದ ಕಾರ್ಯತಂತ್ರದ ಮಹತ್ವಾಕಾಂಕ್ಷೆಗಳನ್ನ ಎದುರಿಸುವಲ್ಲಿ ಭಾರತದ ಮಹತ್ವವನ್ನು ಈ ವರದಿಯು ಒತ್ತಿಹೇಳಿದೆ.
ಚೀನಾದ ಅಭಿಯಾನ ಮತ್ತು ಭಾರತ ಅಮೆರಿಕಕ್ಕೆ ಏಕೆ ಮುಖ್ಯ?
ʻಚೀನಾಸ್ ಅದರ್ ಫ್ರಂಟ್: ಇಂಡಿಯಾ ಅಂಡ್ ದಿ ಫ್ಯೂಚರ್ ಆಫ್ ಯುಎಸ್ ಸ್ಟ್ರಾಟಜಿ ಇನ್ ದಿ ಇಂಡೋ-ಪೆಸಿಫಿಕ್ʼ ಎಂಬ ಶೀರ್ಷಿಕೆಯ ಅಧ್ಯಾಯದಲ್ಲಿ, ಪಾಕಿಸ್ತಾನದೊಂದಿಗೆ ಚೀನಾ ವಿಸ್ತರಿಸುತ್ತಿರುವ ಭದ್ರತಾ ಪಾಲುದಾರಿಕೆಯು ಭಾರತಕ್ಕೆ 2 ಗಡಿಗಳಲ್ಲಿ ಏಕಕಾಲಿಕ ಯುದ್ಧದ ಸಂಭಾವ್ಯತೆಯ ಬಗ್ಗೆ ಆತಂಕ ಉಂಟುಮಾಡಿದೆ ಎಂದು ಅಮೆರಿಕದ ಸಂಸದೀಯ ಆಯೋಗವು ಹೇಳಿದೆ.
26 ಜನರನ್ನು ಬಲಿಪಡೆದ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ನಡೆದ ಮೇ 2025ರ ಭಾರತ-ಪಾಕಿಸ್ತಾನ ಸಂಘರ್ಷವನ್ನ ಈ ವರದಿ ಉಲ್ಲೇಖಿಸಿದೆ. ಪ್ರಮುಖ ವಿಷಯ ಏನಂದ್ರೆ ʻಯುದ್ಧದಲ್ಲಿ ನೇರವಾಗಿ ಭಾಗವಹಿಸದೆಯೇ ಬಿಕ್ಕಟ್ಟಿನ ಸಮಯದಲ್ಲಿ ಚೀನಾ ಪಾಕಿಸ್ತಾನವನ್ನ ಹೇಗೆ ಬೆಂಬಲಿಸಬಹುದು ಎಂಬುದನ್ನು ಭಾರತದ ‘ಆಪರೇಷನ್ ಸಿಂಧೂರ್’ (Operation Sindoor) ವೇಳೆ ತೋರಿಸಿಕೊಟ್ಟಿದೆʼ ಎಂದು ಈ ವರದಿ ಉಲ್ಲೇಖಿಸಿದೆ.
ಆಯೋಗದ ಪ್ರಕಾರ, ಪಾಕಿಸ್ತಾನದೊಂದಿಗಿನ ಯಾವುದೇ ಭವಿಷ್ಯದ ಮುಖಾಮುಖಿಯಲ್ಲಿ ಇಂತಹ ಬೆಂಬಲವು ಭಾರತದ ಸೇನಾ ಯೋಜನೆಗಳನ್ನು ಸಂಕೀರ್ಣಗೊಳಿಸಬಹುದು. ಪಾಕಿಸ್ತಾನದೊಂದಿಗೆ ಚೀನಾದ ವಿಕಸನಗೊಳ್ಳುತ್ತಿರುವ ಸೇನಾ ಪಾಲುದಾರಿಕೆಯು ಭಾರತದ ಎರಡೂ ಗಡಿಯ ಸನ್ನಿವೇಶವನ್ನು ಹೆಚ್ಚು ನಿರ್ಣಾಯಕ ಆತಂಕವನ್ನಾಗಿ ಮಾಡಿದೆ ಎಂದು ವರದಿ ಎಚ್ಚರಿಸಿದೆ.
ಭಾರತದ ಏಳಿಗೆಯೇ ಚೀನಾಗೆ ತಲೆನೋವು!
ಆಪರೇಷನ್ ಸಿಂಧೂರ ಕಾರ್ಯಾಚರಣೆ ಬಳಿಕ ಹೆಚ್ಚುತ್ತಿರುವ ಭಾರತದ ಏಳಿಗೆಯನ್ನ ಚೀನಾ ಸವಾಲಾಗಿ ನೋಡುತ್ತಿದೆ. ಆದ್ದರಿಂದ ಬೆಳೆಯುತ್ತಿರುವ ದೇಶದ ಪ್ರಭಾವವನ್ನು ಕುಗ್ಗಿಸಲು ಚೀನಾ, ಮಿಲಿಟರಿ, ಆರ್ಥಿಕ ಮತ್ತು ಕಡಲ ಒತ್ತಡವನ್ನ ಬಳಸುತ್ತದೆ. ಏಕೆಂದ್ರೆ ಚೀನಾದೊಂದಿಗಿನ ದೀರ್ಘಕಾಲೀನ ಶಕ್ತಿ ಸಮತೋಲನದ ಮೇಲೆ ಗಮನಾರ್ಹವಾಗಿ ಪ್ರಭಾವ ಬೀರಬಲ್ಲ ಜನಸಂಖ್ಯಾ, ಆರ್ಥಿಕ, ಸೇನಾ ಮತ್ತು ಭೌಗೋಳಿಕ ಸಾಮರ್ಥ್ಯವನ್ನು ಹೊಂದಿರುವ ಕೆಲವೇ ದೇಶಗಳಲ್ಲಿ ಭಾರತವೂ ಒಂದಾಗಿದೆ. ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರ, ಅತಿದೊಡ್ಡ ಪ್ರಜಾಪ್ರಭುತ್ವ, ಪರಮಾಣು ಶಸ್ತ್ರಾಸ್ತ್ರ ಹೊಂದಿರುವ ದೇಶ ಮತ್ತು ವಿಶ್ವದ ಅತಿದೊಡ್ಡ ಸೇನೆಗಳಲ್ಲಿ ಒಂದನ್ನು ಹೊಂದಿರುವ ರಾಷ್ಟ್ರವಾಗಿ ಭಾರತದ ಸ್ಥಾನವನ್ನು ಎತ್ತಿ ತೋರಿಸಿರುವ ವರದಿಯು, ಚೀನಾದೊಂದಿಗಿನ ಅದರ 2,100-ಮೈಲಿ ವಿವಾದಿತ ಗಡಿ ಮತ್ತು ಚೀನಾದ ಹೆಚ್ಚಿನ ಪ್ರಮಾಣದ ಇಂಧನ ಹಾಗೂ ವ್ಯಾಪಾರವನ್ನ ಸಾಗಿಸುವ ಪ್ರಮುಖ ಹಿಂದೂ ಮಹಾಸಾಗರದ ಸಮುದ್ರ ಮಾರ್ಗಗಳಲ್ಲಿನ ಭಾರತದ ಆಯಕಟ್ಟಿನ ಸ್ಥಾನದ ಕಡೆಗೆ ಬೊಟ್ಟು ಮಾಡಿದೆ.
ಆದಾಗ್ಯೂ, ಚೀನಾದ ಬಗೆಗಿನ ಭಾರತದ ನಿಲುವು ಅದರ ಸ್ವಂತ ಕಾರ್ಯತಂತ್ರದ ಹಿತಾಸಕ್ತಿಗಳು ಮತ್ತು “ಕಾರ್ಯತಂತ್ರದ ಸ್ವಾಯತ್ತತೆ”ಯ (strategic autonomy) ಬದ್ಧತೆಯಿಂದ ರೂಪುಗೊಂಡಿದೆ ಎಂದೂ ಸಮಿತಿಯು ಎಚ್ಚರಿಸಿದೆ.

