ಬೆಂಗಳೂರು: ಬೈಕ್ ಟ್ಯಾಕ್ಸಿ ಸಂಬಂಧ ಸುಪ್ರೀಂಕೋರ್ಟ್ (Supreme Court) ನೀಡಿರುವ ಆದೇಶದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಾರಿಗೆ ಸಚಿವ ಬೈರತಿ ಸುರೇಶ್ (Byrathi Suresh), ಸುಪ್ರೀಂಕೋರ್ಟ್ ಆದೇಶವನ್ನು ಪಾಲನೆ ಮಾಡಬೇಕಾಗುತ್ತದೆ. ಆದಾಗ್ಯೂ ಈ ಕುರಿತು ಅಡ್ವೋಕೇಟ್ ಜನರಲ್ ಅವರೊಂದಿಗೆ ಇನ್ನೊಮ್ಮೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.
ಸುಪ್ರೀಂಕೋರ್ಟ್ ನಿರ್ದೇಶನದಂತೆ ಬೈಕ್ ಟ್ಯಾಕ್ಸಿ ನಿಷೇಧ ಮಾಡುವ ಬದಲು ಅನೇಕ ನಿಯಮಗಳನ್ನು ರೂಪಿಸಿ ನಿರ್ಬಂಧ ಹೇರುವ ಬಗ್ಗೆ ಗಂಭೀರ ಚಿಂತನೆ ನಡೆಸಿದ್ದೇವೆ. ಈ ಸಂಬಂಧ ನಿಯಮಗಳನ್ನು ರೂಪಿಸುವಂತೆ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕರ್ನಾಟಕದಲ್ಲಿ ಬೈಕ್ ಟ್ಯಾಕ್ಸಿಗೆ ಸುಪ್ರೀಂ ಗ್ರೀನ್ ಸಿಗ್ನಲ್ – ರಾಜ್ಯದ ಅರ್ಜಿ ವಜಾ
ಬೈಕ್ ಟ್ಯಾಕ್ಸಿಯಲ್ಲಿ ಪ್ರಯಾಣ ಮಾಡುವ ಸಹ ಪ್ರಯಾಣಿಕರ ಅದರಲ್ಲೂ ಪ್ರಮುಖವಾಗಿ ಮಹಿಳಾ ಪ್ರಯಾಣಿಕರ ಸುರಕ್ಷತೆ ನಮ್ಮ ಆದ್ಯತೆ. ಈ ಹಿನ್ನೆಲೆ ಬೈಕ್ ಟ್ಯಾಕ್ಸಿ ಚಲಾಯಿಸುವವರ ದಾಖಲೆಗಳು, ಜಿಪಿಎಸ್ ಅಳವಡಿಕೆ, ವಾಹನಕ್ಕೆ ವಿಮೆ ಮತ್ತು ಇತರ ದಾಖಲೆಗಳನ್ನು ಪರಿಶೀಲಿಸಲಾಗುತ್ತದೆ. ಇಂತಹ ಹಲವು ನಿಯಮಗಳನ್ನು ರೂಪಿಸಿ ಬೈಕ್ ಟ್ಯಾಕ್ಸಿಗೆ ಅವಕಾಶ ನೀಡುವ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.
