ಬಾಗಲಕೋಟೆ: ಕೌಟುಂಬಿಕ ಕಲಹಕ್ಕೆ ಬೇಸತ್ತು ಪತಿ-ಪತ್ನಿ ಇಬ್ಬರೂ ನೇಣಿಗೆ ಶರಣಾಗಿರುವ ಮನಕಲಕುವ ಘಟನೆ ಬಾಗಲಕೋಟೆ ಜಿಲ್ಲೆಯ (Crime) ಮುಧೋಳ ತಾಲೂಕಿನ ಕುಳಲಿ ಗ್ರಾಮದಲ್ಲಿ (Bagalkot) ನಡೆದಿದೆ.
ಮೃತರನ್ನು 35 ವರ್ಷದ ಅಪ್ಪಾಶಿ ನಡುವಿನಮನಿ ಮತ್ತು 30 ವರ್ಷದ ರಾಜೇಶ್ವರಿ ನಡುವಿನಮನಿ ಎಂದು ಗುರುತಿಸಲಾಗಿದೆ. ಈ ದಂಪತಿ ಹಾಗೂ ಕುಟುಂಬಸ್ಥರ ನಡುವೆ ಕಳೆದ ಹಲವು ವರ್ಷಗಳಿಂದ ಕೌಟುಂಬಿಕ ಕಲಹವಿತ್ತು. ಇದೇ ವಿಚಾರಕ್ಕೆ ಗಂಡ-ಹೆಂಡತಿ ನಡುವೆ ಪ್ರತಿನಿತ್ಯ ಜಗಳ ನಡೆಯುತ್ತಿತ್ತು.
ಈ ನಿರಂತರ ಜಗಳದಿಂದ ಮನನೊಂದ ಪತಿ ಅಪ್ಪಾಶಿ, ಮೊದಲು ಮನೆಯ ದನದ ಕೊಟ್ಟಿಗೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತಿ ನೇಣಿಗೆ ಶರಣಾಗಿರುವುದನ್ನು ಕಂಡ ಪತ್ನಿ ರಾಜೇಶ್ವರಿ ಆಘಾತಕ್ಕೊಳಗಾಗಿದ್ದಾರೆ. ನಂತರ ಪತ್ನಿಯೂ ಕೋಣೆಯೊಳಗೆ ನೇಣು ಹಾಕಿಕೊಂಡು ಪ್ರಾಣ ಬಿಟ್ಟಿದ್ದಾರೆ.ಇದನ್ನೂ ಓದಿ: ಮಂಗಳೂರು ಮೆಡಿಕಲ್ ಕಾಲೇಜು ಆವರಣದಲ್ಲೇ ಕುಟುಂಬಸ್ಥರಿಂದ ವಿದ್ಯಾರ್ಥಿನಿಯ ಕಿಡ್ನಾಪ್!
ಈ ದಂಪತಿಗೆ ಇಬ್ಬರು ಪುಟ್ಟ ಹೆಣ್ಣು ಮಕ್ಕಳಿದ್ದಾರೆ. ಅಪ್ಪ-ಅಮ್ಮನ ಜಗಳದ ನಡುವೆ ಈಗ ಇಬ್ಬರೂ ಪೋಷಕರನ್ನು ಕಳೆದುಕೊಂಡು ಆ ಪುಟ್ಟ ಕಂದಮ್ಮಗಳು ಅನಾಥರಾಗಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.ಇದನ್ನೂ ಓದಿ: ಕರ್ನಾಟಕದಲ್ಲಿ ಬೈಕ್ ಟ್ಯಾಕ್ಸಿಗೆ ಸುಪ್ರೀಂ ಗ್ರೀನ್ ಸಿಗ್ನಲ್ – ರಾಜ್ಯದ ಅರ್ಜಿ ವಜಾ
