– ಆಶಾ ಕಾರ್ಯಕರ್ತೆಯರ ಕಣ್ಣೀರಿಗೆ ಉತ್ತರಿಸಲಾಗದೇ ಕಾಲ್ಕಿತ್ತ ಅಧ್ಯಕ್ಷೆ
ಬೆಂಗಳೂರು: ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಆಶಾ ಕಾರ್ಯಕರ್ತೆಯರ (ASHA workers) ಅಳಲು ಆಲಿಸಲು ಸ್ಥಳಕ್ಕೆ ಭೇಟಿ ನೀಡಿದ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ (Nagalakshmi Choudhary) ಅವರು ಪ್ರತಿಭಟನಾಕಾರರ ಪ್ರಶ್ನೆಗಳಿಗೆ ಉತ್ತರಿಸಲಾಗದೇ ಮುಜುಗರಕ್ಕೀಡಾದ ಘಟನೆ ನಡೆದಿದೆ.
ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ನಾಗಲಕ್ಷ್ಮಿ ಚೌಧರಿ ಅವರ ಮುಂದೆಯೇ ಆಶಾ ಕಾರ್ಯಕರ್ತೆಯರು ತಮ್ಮ ಸಂಕಷ್ಟಗಳನ್ನು ಹೇಳಿಕೊಂಡು ಕಣ್ಣೀರಿಟ್ಟರು. ʻಗಂಡ ಇಲ್ಲ, ಮಕ್ಕಳಿಲ್ಲ, ಕೇವಲ 5 ಸಾವಿರ ರೂಪಾಯಿಯಲ್ಲಿ ಜೀವನ ಹೇಗೆ ಸಾಗಿಸಲಿ?ʼ ಎಂದು ಮಹಿಳೆಯೊಬ್ಬರು ತಮ್ಮ ಅಸಹಾಯಕತೆ ತೋಡಿಕೊಂಡು ಕಣ್ಣೀರಿಟ್ಟರು. ಕಡಿಮೆ ಗೌರವಧನದಲ್ಲಿ ಜೀವನ ನಿರ್ವಹಣೆ ಮಾಡುವುದು ಎಷ್ಟು ಕಷ್ಟ ಎಂಬುದನ್ನು ವಿವರಿಸಿದರು.
ಈ ವೇಳೆ ಶೌಚಾಲಯ ವ್ಯವಸ್ಥೆಯ ವಿಚಾರವಾಗಿ ಅಧ್ಯಕ್ಷರು ನೀಡಿದ್ದ ಹೇಳಿಕೆಗೆ ಆಶಾ ಕಾರ್ಯಕರ್ತೆಯರಿಂದಲೇ ತೀವ್ರ ಆಕ್ಷೇಪ ವ್ಯಕ್ತವಾಯಿತು. ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವತಿಯಿಂದ ಪ್ರತಿಭಟನಾ ಸ್ಥಳದಲ್ಲಿ 15 ಶೌಚಾಲಯಗಳ ವ್ಯವಸ್ಥೆ ಮಾಡಲಾಗಿದೆ ಎಂದು ನಾಗಲಕ್ಷ್ಮಿ ಚೌಧರಿ ಹೇಳಿದ್ದರು. ಆದರೆ, ನಾವೇ ನಮ್ಮ ಹಣವನ್ನ ಹಾಕಿಕೊಂಡು ಶೌಚಾಲಯದ ವ್ಯವಸ್ಥೆ ಮಾಡಿಕೊಂಡಿದ್ದೇವೆ ಎಂದು ಆಶಾ ಕಾರ್ಯಕರ್ತೆಯರು ತಿವಿದರು.
ಇದರಿಂದ ಸ್ಥಳದಲ್ಲಿ ಕೆಲಕಾಲ ಮಾತಿನ ಸಮರ ನಿರ್ಮಾಣವಾಯಿತು. ಜಿಬಿಎ ಅಧಿಕಾರಿಗಳು ನೀಡಿದ ತಪ್ಪು ಮಾಹಿತಿಯ ಆಧಾರದ ಮೇಲೆ ನೀವು ಹೇಳಿಕೆ ನೀಡಿದ್ದೀರಾ? ಪ್ರತಿಭಟನಾ ಸ್ಥಳಕ್ಕೆ ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸದೆ ಇಂತಹ ಹೇಳಿಕೆ ನೀಡಿದ್ದು ಸರಿಯೇ? ಎಂದು ಮಾಧ್ಯಮ ಪ್ರತಿನಿಧಿಗಳು ಪ್ರಶ್ನಿಸಿದರು. ಈ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡಲು ಸಾಧ್ಯವಾಗದೆ ಮಹಿಳಾ ಆಯೋಗದ ಅಧ್ಯಕ್ಷೆ ತಬ್ಬಿಬ್ಬಾದರು.
ಇದೇ ವೇಳೆ ಸ್ಯಾನಿಟರಿ ಪ್ಯಾಡ್, ಆರೋಗ್ಯ ಸೇವೆ ಹಾಗೂ ಶೌಚಾಲಯದ ವ್ಯವಸ್ಥೆಯನ್ನು ಸರ್ಕಾರ ಕಲ್ಪಿಸಿದೆ ಎಂದು ನಾಗಲಕ್ಷ್ಮಿ ಚೌಧರಿ ಸಮರ್ಥಿಸಿಕೊಂಡರು. ಆದರೆ, ಕಳೆದ 3 ದಿನಗಳಿಂದ ಯಾವುದೇ ಸಮರ್ಪಕ ವ್ಯವಸ್ಥೆ ಮಾಡಿಲ್ಲ. ವ್ಯವಸ್ಥೆ ಮಾಡಿದ್ದರೆ ಸ್ಥಳದಲ್ಲೇ ತೋರಿಸಿ ಎಂದು ಆಶಾ ಕಾರ್ಯಕರ್ತೆಯರು ಹಾಗೂ ಮಾಧ್ಯಮದವರು ಪ್ರಶ್ನಿಸಿದರು.
ಆಶಾ ಕಾರ್ಯಕರ್ತೆಯರ ಮೂಲಭೂತ ಸಮಸ್ಯೆಗಳನ್ನು ಆಲಿಸುವ ಸಂದರ್ಭದಲ್ಲಿ ಶೌಚಾಲಯ ವ್ಯವಸ್ಥೆಯ ಕುರಿತ ಹೇಳಿಕೆಯೇ ವಿವಾದಕ್ಕೆ ಕಾರಣವಾಯಿತು. ಪ್ರತಿಭಟನಾ ಸ್ಥಳದಲ್ಲಿ ವಾಸ್ತವ ಸ್ಥಿತಿಯನ್ನು ಪರಿಶೀಲಿಸದೆ ಹೇಳಿಕೆ ನೀಡಿದ ಆರೋಪದ ಹಿನ್ನೆಲೆ ಮಹಿಳಾ ಆಯೋಗದ ಅಧ್ಯಕ್ಷರು ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಮುಜುಗರ ಅನುಭವಿಸಿದರು.
ಸಿಎಂ ಅವರು 2 ಸಾವಿರ ಕೊಡ್ತಿನಿ ಅಂತ ಹೇಳಿದ್ರು
ಇದಕ್ಕೂ ಮುನ್ನ ವೇದಿಕೆಯಲ್ಲಿ ಮಾತನಾಡಿದ್ದ ನಾಗಲಕ್ಷ್ಮಿ ಚೌಧರಿ ಅವರು, ನಾನು ಸರ್ಕಾರದ ಭಾಗವಲ್ಲ, ನಾನು ಸರ್ಕಾರದ ಗಮನಕ್ಕೆ ತರಬಹುದು. ನಾನು ನಿನ್ನೆ ಬೇರೆ ಕಡೆ ಇದ್ದೆ, ರಾಜ್ಯದ ಮೂಲೆ ಮೂಲೆಯಲ್ಲಿ ಸುತ್ತಾಡುತ್ತೇನೆ. ಈಗಾಗ್ಲೆ ಸಿಎಂ ಅವರು 2 ಸಾವಿರ ಕೊಡ್ತಿನಿ ಅಂತ ಹೇಳಿದ್ರು. ಆದರೆ ಹೆಚ್ಚಿಗೆ ಮಾಡಿಲ್ಲ. ನಾನು ಈ ಬಗ್ಗೆ ಸರ್ಕಾರಕ್ಕೆ ಆಗಾಗ ಪತ್ರ ಬರೆದಿದ್ದೇನೆ. ಮಹಿಳಾ ಆಯೋಗ ಯಾವ ಪಕ್ಷದ ಪರ ಇರೋದಿಲ್ಲ. ಯಾವ ಸರ್ಕಾರದ ಪರ ಇರೋದಿಲ್ಲ. ನಾನು ಮಹಿಳೆಯರ ಇದ್ದೇನೆ, ನಾನು ಏನೇ ಕೆಲಸ ಇದ್ರೂ ಅದನ್ನ ಮುಲಾಜಿಲ್ಲದೇ ಕೆಲಸ ಮಾಡುತ್ತೇನೆ. ಸಿಎಂ ಅವರು ಮಹಿಳೆಯರಿಗೆ ವೇತನ ಕೊಡಬೇಕು ಎಂದು ಒತ್ತಾಯಿಸಿದರು.
ನಾನು ನಿಮ್ಮ ಜೊತೆಯಲ್ಲಿಯೇ ಇದ್ದೀನಿ, ನಾನು ಸರ್ಕಾರ ಅಲ್ಲ, ಸರ್ಕಾರಕ್ಕೆ ಪ್ರಶ್ನೆ ಮಾಡುವ ಆಯೋಗದ ಅಧ್ಯಕ್ಷೆ. ಇದು ಸರ್ಕಾರ, ಆರೋಗ್ಯ ಇಲಾಖೆ ಕುಳಿತು ನಿರ್ಧಾರ ಮಾಡ್ಬೇಕಾದ ವಿಷಯ. ನಾನೆಷ್ಟೇ ಸ್ಟ್ರಾಂಗ್ ಇದ್ರೂ, ನಾನು ಕೂಡ ಭಾವನಾತ್ಮಕ ಜೀವಿ. ನನಗೂ ನೋವಾಗುತ್ತೆ, ನಿಮ್ಮ ನೋವು ಅರ್ಥವಾಗುತ್ತೆ. ಪಿರೆಡ್ಸ್ ಆದ ಹೆಣ್ಮಗಳು ಇಲ್ಲಿದ್ರು. ಈ ವಿಚಾರ ಗೊತ್ತಾಗ್ತಿದ್ದಂಗೆ ಕೂಡಲೇ ನಾನು ಡಿಸಿ, ಕಮಿಷನರ್ಗೆ ಮಾತಾಡಿದ್ದೀನಿ. ಮೊದಲು ವಾಶ್ ರೂಂ ಸೌಲಭ್ಯ ಮಾಡಿ ಎಂದು ಹೇಳಿದೆ, 15 ಟಾಯ್ಲೆಟ್ ವ್ಯವಸ್ಥೆ ಮಾಡಿದ್ದಾರೆ. ಎಷ್ಟು ಆಗುತ್ತೋ ಎಷ್ಟು ಸಹಕಾರ ಮಾಡ್ತೀನಿ, ಸರ್ಕಾರಕ್ಕೆ ನಾನು ಒತ್ತಡ ಹಾಕ್ತೀನಿ, ಇಲ್ಲಿಂದ ಮುಖ್ಯಕಾರ್ಯದರ್ಶಿಯನ್ನ ಭೇಟಿಯಾಗ್ತೀನಿ, ನಿಮಗೆ ದಾನ ಧರ್ಮಕ್ಕೆ ಕೊಡ್ತಾ ಇಲ್ಲ, ನಿಮ್ಮ ಕೆಲಸಕ್ಕೆ ಕೇಳ್ತಾ ಇರೋದು ಅಷ್ಟೇ ಎಂದು ಹೇಳಿದರು.

