ಕೋಲ್ಕತ್ತಾ: ಡಾರ್ಜಿಲಿಂಗ್ ಜಿಲ್ಲೆಯ ಸಿಟ್ಟಾಂಗ್ನ ರೆಸಾರ್ಟ್ ಒಂದರಲ್ಲಿ ಬಾರ್ಬಿಕ್ಯೂ ಮಾಡುವಾಗ ಸಂಭವಿಸಿದ್ದ ಅಗ್ನಿ ಅವಘಡದಲ್ಲಿ ಗಾಯಗೊಂಡಿದ್ದ ಮಹಿಳೆ ಎರಡು ತಿಂಗಳ ಬಳಿಕ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.
ಪಶ್ಚಿಮ ಬಂಗಾಳದ ಉತ್ತರ ದಿನಾಜ್ಪುರ ಜಿಲ್ಲೆಯ ಚೋಪ್ರಾ ನಿವಾಸಿ ನಿಕಿತಾ ಸಹಾ ಮೃತ ದುರ್ದೈವಿ. ಸೆ.13 ರಂದು ಅವರು ಪತಿ ಸಮೀರ್ ಜೊತೆ ಹನಿಮೂನ್ಗೆ ಸಿಟ್ಟಾಂಗ್ಗೆ ತೆರಳಿದ್ದರು. ಈ ವೇಳೆ ರೆಸಾರ್ಟ್ ಒಂದರಲ್ಲಿ ನವದಂಪತಿ ಕುಳಿತಿದ್ದರು. ಆಗ ಬಾರ್ಬಿಕ್ಯೂ ಮಾಡುತ್ತಿದ್ದ ಬಾಣಲಿಗೆ ವ್ಯಕ್ತಿಯೊಬ್ಬ ಕ್ಯಾನ್ನಿಂದ ದ್ರವವನ್ನು ಸುರಿದಿದ್ದರು. ಆಗ ಏಕಾಏಕಿ ಭಾರೀ ಬೆಂಕಿಯ ಜ್ವಾಲೆ ಎದ್ದು ಪಕ್ಕದಲ್ಲೇ ಕುಳಿತಿದ್ದ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದರು.
60% ರಷ್ಟು ಸುಟ್ಟ ಗಾಯಗಳಾಗಿದ್ದ ಮಹಿಳೆಯನ್ನು ಆರಂಭದಲ್ಲಿ ಸಿಲಿಗುರಿಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಕೋಲ್ಕತ್ತಾಗೆ ಸ್ಥಳಾಂತರಿಸಲಾಗಿತ್ತು. ನಾಲ್ಕು ದಿನಗಳ ಹಿಂದೆ ಅವರ ಆರೋಗ್ಯ ಪರಿಸ್ಥಿತಿ ತೀವ್ರ ಹದಗೆಟ್ಟಿತ್ತು. ಗುರುವಾರ ಬೆಳಗ್ಗೆ ಅವರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ರೆಸಾರ್ಟ್ ನಿರ್ಲಕ್ಷ್ಯವೇ ದುರಂತಕ್ಕೆ ಕಾರಣ ಎಂದು ಸಮೀರ್ ಆರೋಪಿಸಿದ್ದರು. ಬೆಂಕಿಯ ಬಳಿ ಎಣ್ಣೆ ಡ್ರಮ್ ಬಳಸಿದ್ದೆ ಈ ಅವಘಡಕ್ಕೆ ಕಾರಣ ಎಂದಿದ್ದರು. ಈ ಆರೋಪವನ್ನು ರೆಸಾರ್ಟ್ನ ಆಡಳಿತ ಮಂಡಳಿ ನಿರಾಕರಿಸಿತ್ತು.
ಸಿಸಿಟಿವಿ ದೃಶ್ಯಗಳಲ್ಲಿ ಬೆಂಕಿಗೆ ದ್ರವ ಸುರಿಯುತ್ತಿರುವುದು ನಮ್ಮ ಉದ್ಯೋಗಿಯಲ್ಲ ಎಂದು ಮಾಲೀಕ ನೆಹಾಲ್ ಹೇಳಿದ್ದರು. ದಂಪತಿಗೆ ಬೆಂಕಿ ಹತ್ತಿರ ಕುಳಿತುಕೊಳ್ಳದಂತೆ ಪದೇ ಪದೇ ಎಚ್ಚರಿಕೆ ನೀಡಲಾಗಿತ್ತು ಎಂದು ಅವರು ವಾದಿಸಿದ್ದರು. ಇನ್ನೂ ದಂಪತಿ ಚಳಿ ಎಂದು ಹೇಳಿದ್ದಕ್ಕೆ ಅಪರಿಚಿತ ವ್ಯಕ್ತಿ ಸೀಮೆಎಣ್ಣೆಯನ್ನು ಬೆಂಕಿಗೆ ಸುರಿದಿದ್ದಾನೆ ಎಂದು ಆರೋಪಿಸಲಾಗಿದೆ. ಘಟನೆಯ ನಂತರ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು.
