– ಭಾರತದ ಮಾನಹಾನಿ ಮಾಡಲು ರಾಹುಲ್ಗೆ ಹಣ ನೀಡಲಾಗಿದೆ: ಬಿಜೆಪಿ ಟೀಕೆ
ನವದೆಹಲಿ: ಚೀನಾದಲ್ಲಿ ನಡೆದ ಅಮೆರಿಕ, ರಷ್ಯಾ ಮತ್ತು ಚೀನಾ ಅಧ್ಯಕ್ಷರ ಐತಿಹಾಸಿಕ ತ್ರಿಪಕ್ಷೀಯ ಸಭೆಯ ಫೋಟೋ ಹಂಚಿಕೊಂಡಿರುವ ವಿಪಕ್ಷ ನಾಯಕ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ (PM Modi) ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಈ ಹೈ-ಪ್ರೊಫೈಲ್ ಸಭೆಯ ಫೋಟೋವನ್ನು ಶುಕ್ರವಾರ ತಮ್ಮ ‘ಎಕ್ಸ್’ ಖಾತೆಯಲ್ಲಿ ಪೋಸ್ಟ್ ಮಾಡಿರುವ ರಾಹುಲ್ ಗಾಂಧಿ, “ಕಾಂಗ್ರೆಸ್ ಅಧಿಕಾರದಲ್ಲಿದ್ದರೆ ಭಾರತದ ಪ್ರಧಾನಿಯೂ ಈ ಮೇಜಿನ ಬಳಿ ಕುಳಿತುಕೊಳ್ಳುತ್ತಿದ್ದರು. ಆದರೆ ರಾಜಿ ಮಾಡಿಕೊಂಡ ಪ್ರಧಾನಿ ಎಂದಿಗೂ ಈ ಮೇಜಿನ ಬಳಿ ಕುಳಿತುಕೊಳ್ಳಲು ಸಾಧ್ಯವಿಲ್ಲ” ಎಂದು ಮೋದಿಯವರ ವಿದೇಶಾಂಗ ನೀತಿಯನ್ನು ಟೀಕಿಸಿದ್ದಾರೆ.
ಗುರುವಾರ ಚೀನಾದ ಶೆನ್ಜೆನ್ನಲ್ಲಿ (Shenzhen) ನಡೆದ ಏಷ್ಯಾ-ಪೆಸಿಫಿಕ್ ಆರ್ಥಿಕ ಸಹಕಾರ (APEC) ಶೃಂಗಸಭೆಯ ನಡುವೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಹಾಗೂ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಮೊದಲ ಬಾರಿಗೆ ಒಟ್ಟಾಗಿ ಕುಳಿತು ಮಹತ್ವದ ಮಾತುಕತೆ ನಡೆಸಿದ್ದರು.
ಶೆನ್ಜೆನ್ನ ಕೈಲಿನ್ ವಿಲ್ಲಾದಲ್ಲಿ ಸುಮಾರು 80 ರಿಂದ 90 ನಿಮಿಷಗಳ ಕಾಲ ನಡೆದ ಈ ಸಭೆಯನ್ನು ಡೊನಾಲ್ಡ್ ಟ್ರಂಪ್ “ಇತಿಹಾಸ ನಿರ್ಮಿಸುವ ಕ್ಷಣ” ಎಂದು ಬಣ್ಣಿಸಿದ್ದಾರೆ. ವಿಶ್ವದ ಈ ಮೂರು ಬಲಿಷ್ಠ ರಾಷ್ಟ್ರಗಳ ನಾಯಕರು ಸಭೆಯ ಬಳಿಕ ‘ಜಂಟಿ ಶಾಂತಿ ಘೋಷಣೆ’ (Joint Declaration of Peace) ಹೊರಡಿಸಿದ್ದು, ಪರಮಾಣು ಅಪಾಯ ತಗ್ಗಿಸುವಿಕೆ, ವಿಶ್ವಸಂಸ್ಥೆ ಸುಧಾರಣೆ ಮತ್ತು ತೈಲ ಪೂರೈಕೆ ಹೆಚ್ಚಳದ ಕುರಿತು ನಾಯಕರು ಚರ್ಚಿಸಿದ್ದಾರೆ.ಇದನ್ನೂ ಓದಿ: ವಿಶ್ವದ ಪ್ರಭಾವಿ ತ್ರಿಮೂರ್ತಿಗಳು ಮೊದಲ ಬಾರಿಗೆ ಮುಖಾಮುಖಿ – ಅಣ್ವಸ್ತ್ರ ನಿಶಸ್ತ್ರೀಕರಣದ ಬಗ್ಗೆ ಮಾತುಕತೆ
If Congress were in power, India’s Prime Minister would be sitting at this table.
A compromised PM can never sit at this table. https://t.co/EpGZVnJPYq
— Rahul Gandhi (@RahulGandhi) November 20, 2026
ಬಿಜೆಪಿ ತಿರುಗೇಟು
ಇತ್ತ ರಾಹುಲ್ ಗಾಂಧಿಯವರ ‘ರಾಜಿ ಮಾಡಿಕೊಂಡ ಪ್ರಧಾನಿ’ ಪೋಸ್ಟ್ಗೆ ಬಿಜೆಪಿ ನಾಯಕರು ಪ್ರತಿಕ್ರಿಯಿಸಿದ್ದಾರೆ. ಹಿಂದಿನ ಕಾಂಗ್ರೆಸ್ ಸರ್ಕಾರಗಳೇ ದೇಶದ ಹಿತಾಸಕ್ತಿಯನ್ನು ಬಲಿಕೊಟ್ಟಿದ್ದವು ಎಂದು ಬಿಜೆಪಿ ವಕ್ತಾರ ತುಹಿನ್ ಸಿನ್ಹಾ ಆರೋಪಿಸಿದ್ದು, ʼಭಾರತದ ಮಾನಹಾನಿ ಮಾಡಲು ರಾಹುಲ್ ಗಾಂಧಿಗೆ ಹಣ ನೀಡಲಾಗಿದೆʼ ಎಂದು ಕಿಡಿಕಾರಿದ್ದಾರೆ.ಇದನ್ನೂ ಓದಿ: ಮಲಗಿದ್ದ ಸಿಂಹವನ್ನು ಎಬ್ಬಿಸಬೇಡಿ: ರವಿ ಹಂಜ್ ವಿರುದ್ಧ ಹೋರಾಟದ ಎಚ್ಚರಿಕೆ ನೀಡಿದ ಬಸವ ಧರ್ಮ ಪೀಠ
