ಮೈಸೂರು: ಕಾಡಿನ ರಸ್ತೆಯಲ್ಲಿ ಶಾಂತವಾಗಿ ಸಾಗುತ್ತಿದ್ದ ಕಾಡಾನೆಯ ಮೇಲೆ ಕಲ್ಲು ಎಸೆದು ವಿಕೃತಿ ಮೆರೆದಿದ್ದ ಇಬ್ಬರು ಕಿಡಿಗೇಡಿ ಯುವಕರಿಗೆ ಅರಣ್ಯ ಇಲಾಖೆ ತಕ್ಕ ಪಾಠ ಕಲಿಸಿದೆ. ಘಟನೆಗೆ ಸಂಬಂಧಿಸಿದಂತೆ ಇಬ್ಬರು ಯುವಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಅಧಿಕಾರಿಗಳು, ಕೃತ್ಯಕ್ಕೆ ಬಳಸಿದ್ದ ಸ್ಕೂಟರ್ ಅನ್ನು ವಶಕ್ಕೆ ಪಡೆದಿದ್ದಾರೆ.
ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಡಿ.ಬಿ. ಕುಪ್ಪೆ ವಲಯದ ವ್ಯಾಪ್ತಿಗೆ ಬರುವ ಮೈಸೂರು–ವಯನಾಡು ಅಂತರರಾಜ್ಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿತ್ತು. ದ್ವಿಚಕ್ರ ವಾಹನದಲ್ಲಿ ಬಂದಿದ್ದ ಇಬ್ಬರು ಯುವಕರು, ರಸ್ತೆ ಬದಿಯಲ್ಲಿ ಸಾಗುತ್ತಿದ್ದ ಒಂಟಿ ಸಲಗವನ್ನು ಕೆಣಕಿ ಕಲ್ಲು ಎಸೆದಿದ್ದರು. ಯುವಕರ ಈ ಬೇಜವಾಬ್ದಾರಿ ಮತ್ತು ವಿಕೃತ ವರ್ತನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ಪ್ರಾಣಿಪ್ರಿಯರು ಹಾಗೂ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ಈ ವಿಡಿಯೋವನ್ನು ಗಂಭೀರವಾಗಿ ಪರಿಗಣಿಸಿದ ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಅವರು, ಕಿಡಿಗೇಡಿಗಳ ವಿರುದ್ಧ ತಕ್ಷಣ ಕಠಿಣ ಕಾನೂನು ಕ್ರಮ ಕೈಗೊಂಡು ವರದಿ ಸಲ್ಲಿಸುವಂತೆ ಅರಣ್ಯ ಪಡೆ ಮುಖ್ಯಸ್ಥರಿಗೆ ಖಡಕ್ ಸೂಚನೆ ನೀಡಿದ್ದರು. ಇದನ್ನೂ ಓದಿ: ಪ್ರತಿ ವಾಕ್ಯಕ್ಕೂ ಐತಿಹಾಸಿಕ ಸಾಕ್ಷಿ ಪುರಾವೆಗಳಿವೆ, ಜೈಲಿಗೆ ಹೋಗಲು ಸಿದ್ಧ: ಲೇಖಕ ರವಿ ಹಂಜ್
