– ಬಸವ ಮಂಟಪ ಕೃತಿ ವಿವಾದ – ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ
– ಕಾನೂನು ಬೆದರಿಕಿಗೆ ನಾನು ಹೆದರುವುದಿಲ್ಲ
– ಈಗಾಗಲೇ ಬರೆದಿರುವ ಕೃತಿಗಳನ್ನು ಉಲ್ಲೇಖಿಸಿ ಬರೆದಿದ್ದೇನೆ
ಬೆಂಗಳೂರು: ತಾವು ಬರೆದಿರುವ ಪುಸ್ತಕದ ಪ್ರತಿಯೊಂದು ವಾಕ್ಯಕ್ಕೂ ವೈಜ್ಞಾನಿಕ ಮತ್ತು ಐತಿಹಾಸಿಕ ಸಾಕ್ಷಿ ಪುರಾವೆಗಳಿವೆ. ತಮ್ಮ ಪುಸ್ತಕ ಮುಟ್ಟುಗೋಲು ಹಾಕಿಕೊಳ್ಳುವ ಅಥವಾ ಕಾನೂನು ಹೋರಾಟ ನಡೆಸುವ ಬೆದರಿಕೆಗಳಿಗೆ ತಾವು ಹೆದರುವುದಿಲ್ಲ ಎಂದು ಅಮೆರಿಕದ ಶಿಕಾಗೊದಲ್ಲಿ ನೆಲೆಸಿರುವ ಲೇಖಕ ರವಿ ಹಂಜ್(Ravi Hanj) ಹೇಳಿದ್ದಾರೆ.
ಬಸವಣ್ಣನವರ ಕುರಿತ ತಮ್ಮ ಬಸವ ಮಂಟಪ(Basava Mantapa) ಕೃತಿ ಮತ್ತು ಸಂದರ್ಶನದ ಕುರಿತು ಎದ್ದಿರುವ ವಿವಾದಗಳಿಗೆ ಸಂಬಂಧಿಸಿದಂತೆ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ಅವರು, ಸುಪ್ರೀಂ ಕೋರ್ಟ್ವರೆಗೂ ಹೋಗಿ ಗೆದ್ದು ಬರುವ ವಿಶ್ವಾಸವಿದೆ. ಅಲ್ಲದೆ, ಅಖಂಡ ವೀರಶೈವ ಲಿಂಗಾಯತ ಒಂದೇ ಎಂಬ ತಮ್ಮ ನಿಲುವಿಗಾಗಿ ಜೈಲಿಗೆ ಹೋಗಲು ಮತ್ತು ಗಲ್ಲಿಗೇರಲೂ ತಾವು ಸಿದ್ಧರಿರುವುದಾಗಿ ತಿಳಿಸಿದ್ದಾರೆ.
ರವಿ ಹಂಜ್ ಹೇಳಿದ್ದೇನು?
ಸುಮಾರು 90 ನಿಮಿಷಗಳ ಸುದೀರ್ಘ ಸಂದರ್ಶನದಲ್ಲಿ ಕೇವಲ 1-1.5 ನಿಮಿಷಗಳ ಭಾಗವನ್ನು ಮಾತ್ರ ಸಂದರ್ಭದಿಂದ ಹೊರತುಪಡಿಸಿ ತೆಗೆದುಕೊಂಡು, ತಾವು ಬಸವಣ್ಣನವರಿಗೆ ಕಳ್ಳ ಅಥವಾ ಕೊಲೆಗಡುಕ ಎಂದು ಅವಮಾನ ಮಾಡಿದ್ದೇನೆ ಎಂದು ಸುಳ್ಳು ಪ್ರಚಾರ ಮಾಡಲಾಗುತ್ತಿದೆ. ತಾವು ಸಂದರ್ಶನದಲ್ಲಿ ಬಸವಣ್ಣನವರನ್ನು ಆ ರೀತಿ ಕರೆದಿಲ್ಲ.
ಬಸವಣ್ಣನವರು ಬಿಜ್ಜಳನ ಖಜಾನೆಯನ್ನು ದೋಚಿದರು ಮತ್ತು ಬಿಜ್ಜಳನ ಹತ್ಯೆಗೆ ಕಾರಣರಾದರು ಎಂಬುದು ತಮ್ಮ ಸ್ವಂತ ಮಾತಲ್ಲ. 12ನೇ–13ನೇ ಶತಮಾನದ ಪ್ರಮುಖ ವೀರಶೈವ ಕವಿ ಪಾಲ್ಕುರಿಕೆ ಸೋಮನಾಥನ ‘ಬಸವ ಪುರಾಣ’, ಹರಿಹರನ ‘ಬಸವರಾಜ ದೇವರ ರಗಳೆ’, ಜೈನ ಪುರಾಣಗಳು ಹಾಗೂ ಬಿ.ಎಲ್. ರೈಸ್ ಅವರ ‘ಮೈಸೂರು ಗೆಜೆಟಿಯರ್’ ಮತ್ತು ‘ಬಾಂಬೆ ಗೆಜೆಟಿಯರ್’ನಂತಹ ಐತಿಹಾಸಿಕ ಗ್ರಂಥಗಳಲ್ಲಿಯೇ ಈ ಉಲ್ಲೇಖಗಳಿವೆ. ಈ ಗ್ರಂಥಗಳನ್ನು ನಂಬುವುದಿಲ್ಲ ಎಂದಾದರೆ ಬಸವಣ್ಣನವರ ಇತಿಹಾಸವೇ ಶೂನ್ಯವಾಗುತ್ತದೆ.
ವಚನಗಳಲ್ಲಿ ಪರಸ್ಪರ ವೈರುಧ್ಯ ಮತ್ತು ದ್ವಂದ್ವಗಳಿವೆ. ಅವು ಕೇವಲ ಸಾಂದರ್ಭಿಕ ಸನ್ನಿವೇಶಗಳಲ್ಲಿ ಹೇಳಿದ ಮಾತುಗಳು ಹಾಗೂ ಚರ್ಚಾಗೋಷ್ಠಿಯ ದಾಖಲಾತಿಗಳೇ ಹೊರತು ಧರ್ಮ ಗ್ರಂಥಗಳಾಗಲು ಯೋಗ್ಯವಲ್ಲ. ಬದಲಾಗಿ ಕರಣಹಸುಗೆ, ಮಂತ್ರಗೋಪ್ಯ, ಸಿದ್ಧಾಂತ ಶಿಖಾಮಣಿ, ಶಕ್ತಿ ವಿಶಿಷ್ಟಾದ್ವೈತ ಮತ್ತು ಅಕ್ಕಮಹಾದೇವಿಯ ಸೃಷ್ಟಿ ವಚನಗಳುಈ ಐದು ಗ್ರಂಥಗಳು ವೀರಶೈವ ಲಿಂಗಾಯತ ಧರ್ಮ ಗ್ರಂಥಗಳಾಗಲು ಅರ್ಹವಾಗಿವೆ.
ಸಚಿವ ಎಂ.ಬಿ. ಪಾಟೀಲ್ ಅವರು ಪೂರ್ಣ ವಿಡಿಯೋವನ್ನು ನೋಡದೆ, ತಮ್ಮ ಪಕ್ಕದಲ್ಲಿರುವ ಜೆ.ಎಸ್. ಪಾಟೀಲ್ ಮತ್ತು ಎಸ್.ಎಂ. ಜಾಮದಾರ್ ಅವರ ಮಾತು ಕೇಳಿ ತಮ್ಮ ವಿರುದ್ಧ ಆರೋಪ ಮಾಡಿದ್ದಾರೆ. ಎಸ್.ಎಂ. ಜಾಮದಾರ್ ಅವರು ಈ ಹಿಂದೆ ಯಡಿಯೂರು ಸಿದ್ದಲಿಂಗೇಶ್ವರರನ್ನು ‘ಭ್ರಷ್ಟ’ ಎಂದು ಕರೆದಿದ್ದಾರೆ ಮತ್ತು ಶಿರಸಂಗಿ ದೇಸಾಯಿಯವರನ್ನು ಅವಮಾನಿಸಿದ್ದಾರೆ; ಸಮಾಜದಲ್ಲಿ ಸ್ವಾಸ್ಥ್ಯ ಕೆಡಿಸುವ ಕೆಲಸವನ್ನು ಅವರೇ ಮಾಡುತ್ತಿದ್ದಾರೆ
ತಾವು ಕ್ಷಮೆ ಕೇಳಿರುವುದು ‘ಧರ್ಮ ಭಂಜಕ’ರಿಗಾಗಲಿ ಅಥವಾ ತಮ್ಮ ಪುಸ್ತಕ ಮತ್ತು ವಿಡಿಯೋ ತಪ್ಪು ಎಂಬ ಕಾರಣಕ್ಕಾಗಲಿ ಅಲ್ಲ. ವಿರೋಧಿಗಳು ವಿಡಿಯೋವನ್ನು ತಿರುಚಿ ಹಬ್ಬಿಸಿದ ಕಾರಣ, ‘ಅಖಂಡ ವೀರಶೈವ ಲಿಂಗಾಯತ ಒಂದೇ’ ಎಂದು ನಂಬುವ ಮುಗ್ಧ ಬಸವ ಭಕ್ತರ ಭಾವನೆಗಳಿಗೆ ನೋವಾಗಿದ್ದರೆ ಅದಕ್ಕಾಗಿ ನೈತಿಕ ಹೊಣೆ ಹೊತ್ತು ವಿಷಾದ ಮತ್ತು ಕ್ಷಮೆ ಕೇಳಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.
