ಡಿಯರ್ ತುಂಟ
ಅವತ್ತು ನೀನು ಪ್ರೀತಿಯಿಂದ (Love) ನನ್ನ ಕತ್ತಿನ ಮೇಲೆ ಮೂಡಿಸಿದ ಆ ಪುಟ್ಟ ಗುರುತನ್ನು (Love Bite) ಕನ್ನಡಿಯ ಮುಂದೆ ನಿಂತು ನೋಡಿದಾಗ ಅದೆಷ್ಟು ನಗು ಬಂತು ಗೊತ್ತಾ? ನಿನಗದು ಪ್ರೀತಿಯ ಸಿಹಿ ನೆನಪಾಗಿದ್ದರೆ, ನನಗದು ಇಡೀ ದಿನ ಮುಚ್ಚಿಡಬೇಕಾದ ಗುಟ್ಟಾಗಿತ್ತು! ಇಡೀ ದಿನ ವೇಲ್ನ್ನ ಕತ್ತಿಗೆ ಸುತ್ತಿಕೊಂಡೇ ಇದ್ದೇ. ಆದ್ರೂ ಯಾರಿಗಾದ್ರೂ ಗೊತ್ತಾಗಿ ಬಿಡುತ್ತಾ ಅಂತ ತುಂಬಾ ಭಯ ಆಗೋದು.
ಆಫೀಸಿನಲ್ಲಿ ಯಾರಾದ್ರೂ ಸ್ವಲ್ಪ ಹತ್ತಿರ ಬಂದು ಮಾತನಾಡಿದ್ರೂ ಸಾಕು, ನನ್ನ ಕೈಗಳು ಅರಿವಿಲ್ಲದೆಯೇ ಕುತ್ತಿಗೆಯತ್ತ ಹೋಗುತ್ತಿದ್ದವು. ಏನಾಯ್ತು ಎಂದು ಯಾರಾದರೂ ಕೇಳಿದರೆ ಏನು ಉತ್ತರಿಸಲಿ ಎಂಬ ಗೊಂದಲ. ಆದರೆ ಆ ಎಲ್ಲ ಮುಜುಗರದ ನಡುವೆಯೂ ಮನಸ್ಸಿನೊಳಗೆ ನಿನ್ನ ತುಟಿಗಳ ತುಂಟಾಟದ್ದೇ ಸಂಭ್ರಮ. ಏಕೆಂದರೆ ಆ ಗುರುತಿನ ಹಿಂದೆ ಇದ್ದಿದ್ದು ನಿನ್ನ ಪ್ರೀತಿ, ನಿನ್ನ ತುಂಟತನ ಮತ್ತು ಆ ಸುಂದರ ಕ್ಷಣಗಳು. ನನಗೆ ನಿನ್ನೆಲ್ಲ ಮುತ್ತುಗಳು ಈ ಪ್ರಥಮ ಮುತ್ತಿನಂತೆ ಅಚ್ಚಾಗಿ ಉಳಿಯಬೇಕು ಅಂತ ಆಸೆ! ಇದನ್ನೂ ಓದಿ: ಪ್ರತಿ ಮಳೆಗೂ ನೀನಿಟ್ಟ ನೆನಪು ಅದೆಷ್ಟು ಶಾಶ್ವತ..!
ಅಷ್ಟೆಲ್ಲ ಸಿಕ್ರೇಟ್ ಮೆಂಟೈನ್ ಮಾಡಿದ್ರೂ, ನನ್ನ ಫ್ರೆಂಡ್ ಕೇಳೇ ಬಿಟ್ಲು.. ಏನೇ ಯಾವಾಗಲೂ ವೇಲ್ ಹಾಕದೇ ಗಂಡು ಬೀರಿ ಥರ ಓಡಾಡ್ತಿರೋಳು ಇವತ್ತೇನು ಗೌರಮ್ಮ ಆಗ್ಬಿಟ್ಟಿದಿಯಾ ಅಂತ. ನನ್ನ ಪುಣ್ಯ ಅಂದ್ರೆ.. ನೀನು ಹಣೆಗೆ ಕುಂಕುಮ ಇಟ್ಟಿದ್ಯಲ್ಲ ಅದು ಬಚಾವ್ ಮಾಡ್ತು! ದೇವಸ್ಥಾನಕ್ಕೆ ಹೋಗಿದ್ದೆ, ಇದೇ ನೋಡು ಪ್ರಸಾದ ಹಚ್ಕೊಂಡಿದಿನಿ, ಈಗೆಲ್ಲ ವೇಲ್ ಹಾಕದೆ ಇದ್ರೆ ಬಿಡಲ್ವಲ್ಲೆ ಒಳಗೆ, ಅದಕ್ಕೆ ಹಾಕಿದಿನಿ ಅಷ್ಟೇ ಅಂತ ಹೇಳ್ಬಿಟ್ಟೆ! ಇದನ್ನೂ ಓದಿ: ಪ್ರೇಮವೆಂದರೆ ನನ್ನ ಪಾಲಿಗೆ ಅವಳ ಸೀರೆಯ ಮೇಲಿದ್ದ ಜಾರಿದ ನವಿಲ ಗರಿ!
ನಿಜ ಹೇಳಬೇಕೆಂದ್ರೆ, ನಾನು ಆ ಗುರುತನ್ನಷ್ಟೇ ಮುಚ್ಚಿಟ್ಟಿದ್ದೆ. ಆದರೆ ಮನಸ್ಸಲ್ಲಿರೋ ಭಯ, ನೆನಪಾದಾಗೆಲ್ಲ ಕಾಡೋ ನಾಚಿಕೆಯ ನಗುವನ್ನು ಮಾತ್ರ ಮುಚ್ಚಿಡಲು ನಾನು ಅದೆಷ್ಟೇ ಪ್ರಯತ್ನಪಟ್ಟರೂ ಸಾಧ್ಯವಾಗುತ್ತಲೇ ಇರಲಿಲ್ಲ. ಅವತ್ತು ನನ್ನನ್ನು ನೋಡಿದವರು ಏನೋ ವಿಶೇಷ ನಡೆದಿದೆ ಎಂದು ಊಹಿಸಿರಬಹುದು. ಆದರೆ ಆ ವಿಶೇಷದ ಕಥೆ ನನಗೆ ಮಾತ್ರ ಗೊತ್ತು. ಆ ಒಂದು ಕ್ಷಣವನ್ನು ನೆನಪಿಸಿಕೊಂಡಾಗಲೆಲ್ಲ ಕೆನ್ನೆ ಕೆಂಪಾಗುತ್ತಿತ್ತು. ತುಟಿಗಳ ಮೇಲೆ ತುಂಟ ನಗು ಅರಳುತ್ತಿತ್ತು.. ಆ ನಗುವಿನ ಒಡೆಯ ನೀನು ಎನಿಸಿದಾಗ ಮನಸ್ಸಿಗೆ ಹಿತ ಎನಿಸುತ್ತದೆ. ಇದನ್ನೂ ಓದಿ: ಅವತ್ತು ನೆಟ್ಟ ಪಾರಿಜಾತ ಗಿಡ ಹೂ ಬಿಟ್ಟಿದೆ ಗೋಪಾಲ…!
ಮುಂದಿನ ಸಲ ಹೀಗೆ ತುಂಟತನ ಮಾಡುವಾಗ ಸ್ವಲ್ಪ ಕರುಣೆ ತೋರಿಸು! ಪ್ರೀತಿಸುವುದಕ್ಕೆ ನನಗೇನೂ ಅಭ್ಯಂತರವಿಲ್ಲ, ಆದರೆ ಅದನ್ನು ಮುಚ್ಚಿಡಲು ನಾನು ಪಡುವ ಪಾಡು ನನಗೆ ಮಾತ್ರ ಗೊತ್ತು! ಇದನ್ನೂ ಓದಿ: ನಾನು ಹೋಗು ಅಂದ ತಕ್ಷಣ ನನ್ನ ಬಿಟ್ಟು ಹೋಗ್ಬಿಟ್ಟೆ ಅಲ್ವಾ.. ನಿನಗೆ ಅದೇ ಬೇಕಿತ್ತೇನೋ..?
ಇಂತಿ
ನಿನ್ನ ಮುತ್ತಿಗೆ ಸೋತವಳು
