– ಕುಡಿಯುವ ನೀರು, ರಸ್ತೆ, ವಿದ್ಯುತ್ ಇಲ್ಲದೆ ಪರದಾಟ
– ಅನಾರೋಗ್ಯ ಪೀಡಿತರನ್ನ ಬಡಿಗೆಯಲ್ಲಿ ಹೊತ್ತು ಸಾಗಿಸುವ ದುಸ್ಥಿತಿ
ಕೊಡಗು: ಸ್ವಾತಂತ್ರ್ಯ ಬಂದು ದಶಕಗಳೇ ಕಳೆದರೂ ಬುಡಕಟ್ಟು ಸಮುದಾಯದ ಜನರ ಬದುಕಿನಲ್ಲಿ ನಿರೀಕ್ಷಿತ ಸುಧಾರಣೆ ಕಂಡುಬಂದಿಲ್ಲ. ಕೊಡಗು ಜಿಲ್ಲೆಯ ಶ್ರೀಮಂಗಲ ಹೋಬಳಿಯ ಚಪ್ಪಡಿಕೊಲ್ಲಿ ಗಿರಿಜನ ಹಾಡಿಯಲ್ಲಿ ಸುಮಾರು 50 ಕುಟುಂಬಗಳು ಇಂದಿಗೂ ಮೂಲಭೂತ ಸೌಕರ್ಯಗಳಿಲ್ಲದೆ ಸಂಕಷ್ಟದ ಜೀವನ ನಡೆಸುತ್ತಿವೆ. ಕುಡಿಯುವ ನೀರು, ರಸ್ತೆ, ವಿದ್ಯುತ್ ಸೇರಿದಂತೆ ಅಗತ್ಯ ಸೌಲಭ್ಯಗಳ ಕೊರತೆಯಿಂದ ಇಲ್ಲಿನ ನಿವಾಸಿಗಳು ನಿತ್ಯ ಪರದಾಡುವಂತಾಗಿದೆ. ಅನಾರೋಗ್ಯಕ್ಕೆ ತುತ್ತಾದವರನ್ನು ಬಡಿಗೆಯಲ್ಲಿ ಹೊತ್ತು ಸಾಗಿಸಬೇಕಾದ ಪರಿಸ್ಥಿತಿಯೂ ಇಲ್ಲಿದೆ.
ಶ್ರೀಮಂಗಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಪ್ಪಡಿಕೊಲ್ಲಿ ಗಿರಿಜನ ಹಾಡಿಯಲ್ಲಿ ಬಹುತೇಕ ಕುಟುಂಬಗಳು ಜೀತ ಪದ್ಧತಿಯಿಂದ ಮುಕ್ತರಾಗಿ ಸಮಾಜದ ಮುಖ್ಯವಾಹಿನಿಗೆ ಬರಲು ಹಂಬಲಿಸುತ್ತಿವೆ. ಆದರೆ ಸ್ವಂತ ಮನೆ ನಿರ್ಮಿಸಿಕೊಂಡು ನೆಮ್ಮದಿಯ ಬದುಕು ಕಟ್ಟಿಕೊಳ್ಳಲು ಅಗತ್ಯವಾದ ಜಾಗ ಹಾಗೂ ಮೂಲಸೌಕರ್ಯಗಳಿಲ್ಲದೆ ಪರದಾಡುತ್ತಿವೆ. ಸರ್ವೆ ನಂಬರ್ 1/1ರ ವ್ಯಾಪ್ತಿಯಲ್ಲಿ ಸುಮಾರು ಐದು ಎಕರೆ ಸರ್ಕಾರಿ ಜಾಗವಿದ್ದು, ಅದನ್ನು ತಮಗೆ ಮಂಜೂರು ಮಾಡಿ ವಸತಿ ವ್ಯವಸ್ಥೆ ಕಲ್ಪಿಸಬೇಕೆಂಬುದು ಗ್ರಾಮಸ್ಥರ ಪ್ರಮುಖ ಬೇಡಿಕೆಯಾಗಿದೆ.
ಹಾಡಿಯ ನಿವಾಸಿಗಳಿಗೆ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿ ಕಾಡುತ್ತಿದೆ. ಸುಮಾರು 40 ರಿಂದ 50 ಅಡಿ ಆಳದ ಬಾವಿ ತೋಡಿದರೂ ನೀರು ಲಭ್ಯವಾಗುತ್ತಿಲ್ಲ. ಹೀಗಾಗಿ ಕುಡಿಯುವ ನೀರಿಗಾಗಿ ಸುಮಾರು 4 ಕಿಲೋಮೀಟರ್ ದೂರ ಅಲೆದಾಡಬೇಕಾದ ಅನಿವಾರ್ಯತೆ ಇದೆ. ಕೂಲಿ ಕೆಲಸ ಮುಗಿಸಿ ಮನೆಗೆ ಮರಳುವ ಮಹಿಳೆಯರು ಮತ್ತೆ ನೀರು ತರಲು ದೂರದವರೆಗೆ ನಡೆಯಬೇಕಾಗಿದೆ.
ಇನ್ನು ರಸ್ತೆ ಸಂಪರ್ಕದ ಕೊರತೆಯೂ ಇಲ್ಲಿನ ಜನರ ಬದುಕನ್ನು ದುಸ್ತರಗೊಳಿಸಿದೆ. ಯಾರಿಗಾದರೂ ಅನಾರೋಗ್ಯ ಉಂಟಾದರೆ, ಗರ್ಭಿಣಿಯರು, ಮಹಿಳೆಯರು ಹಾಗೂ ವಯೋವೃದ್ಧರನ್ನು ಆಸ್ಪತ್ರೆಗೆ ಕರೆದೊಯ್ಯಲು ವಾಹನ ಸೌಲಭ್ಯವಿಲ್ಲ. ರಸ್ತೆ ಸಂಪರ್ಕವೂ ಇಲ್ಲದ ಕಾರಣ ಬಡಿಗೆ ಹಾಗೂ ಕಂಬಗಳ ಸಹಾಯದಿಂದ ರೋಗಿಗಳನ್ನು ಹೊತ್ತು ಸಾಗಿಸಬೇಕಾದ ದುಸ್ಥಿತಿ ಇದೆ. ಪಬ್ಲಿಕ್ ಟಿವಿ ತಂಡ ಸ್ಥಳಕ್ಕೆ ಭೇಟಿ ನೀಡಿದಾಗ ಈ ಮನಕಲಕುವ ದೃಶ್ಯಗಳು ಕಂಡುಬಂದಿವೆ.
ಇದರ ಜೊತೆಗೆ ಕಾಡಾನೆಗಳ ಹಾವಳಿಯೂ ಗ್ರಾಮಸ್ಥರ ಆತಂಕ ಹೆಚ್ಚಿಸಿದೆ. ಮನೆಗಳ ಮೇಲೆ ಮರಗಳು ಬಿದ್ದು ಗುಡಿಸಲುಗಳಿಗೆ ಹಾನಿಯಾಗಿರುವ ಘಟನೆಗಳೂ ನಡೆದಿವೆ ಎಂದು ನಿವಾಸಿಗಳು ಆರೋಪಿಸಿದ್ದಾರೆ. ಒಂದು ಕಡೆ ಬಿರುನಾಣಿ ಅರಣ್ಯ, ಮತ್ತೊಂದು ಕಡೆ ನಾಗರಹೊಳೆ ಅರಣ್ಯ ಹಾಗೂ ಇನ್ನೊಂದು ಭಾಗದಲ್ಲಿ ಕೇರಳದ ಅರಣ್ಯ ಪ್ರದೇಶವಿರುವುದರಿಂದ ಕಾಡಾನೆ, ಹುಲಿ ಸೇರಿದಂತೆ ವನ್ಯಪ್ರಾಣಿಗಳ ಭೀತಿಯಲ್ಲೇ ಬದುಕು ಸಾಗಿಸುವಂತಾಗಿದೆ.
ಹಾಡಿಯ ಸುಮಾರು 30ರಿಂದ 50 ಮಕ್ಕಳು ಶಾಲೆ ಹಾಗೂ ಅಂಗನವಾಡಿಗೆ ತೆರಳುತ್ತಿದ್ದಾರೆ. ಆದರೆ ಸಾರಿಗೆ ವ್ಯವಸ್ಥೆಯಿಲ್ಲದ ಕಾರಣ ಮಕ್ಕಳ ಶಿಕ್ಷಣಕ್ಕೂ ತೊಂದರೆಯಾಗುತ್ತಿದೆ. ರಾತ್ರಿ ವಿದ್ಯುತ್ ಸೌಲಭ್ಯವಿಲ್ಲದೆ ಮಕ್ಕಳು ಓದಲು ಸಾಧ್ಯವಾಗುತ್ತಿಲ್ಲ. ಕನಿಷ್ಠ ಸೋಲಾರ್ ದೀಪಗಳನ್ನಾದರೂ ಒದಗಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಅಲ್ಲದೆ, ಅಂಗನವಾಡಿಯಿಂದ ದೊರೆಯಬೇಕಾದ ಪೌಷ್ಟಿಕ ಆಹಾರವೂ ಸಮರ್ಪಕವಾಗಿ ಸಿಗುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.
ಮೂಲಸೌಕರ್ಯಗಳ ಕೊರತೆಯಿಂದ ಬೇಸತ್ತಿರುವ ಹಾಡಿಯ ನಿವಾಸಿಗಳು ಮುಂಬರುವ ಚುನಾವಣೆಯಲ್ಲಿ ಮತದಾನ ಬಹಿಷ್ಕರಿಸಲು ನಿರ್ಧರಿಸಿದ್ದಾರೆ. ಕುಡಿಯುವ ನೀರು, ರಸ್ತೆ, ವಿದ್ಯುತ್, ಆರೋಗ್ಯ, ಶಿಕ್ಷಣ ಹಾಗೂ ವಸತಿ ಸೌಲಭ್ಯಗಳನ್ನು ಕಲ್ಪಿಸುವಂತೆ ಆಗ್ರಹಿಸಿದ್ದಾರೆ.
ಅಭಿವೃದ್ಧಿ ಹೊಂದಿದ ಕೊಡಗು ಜಿಲ್ಲೆಯಲ್ಲೇ ಗಿರಿಜನ ಹಾಡಿಯ 50 ಕುಟುಂಬಗಳು ಇಂದಿಗೂ ಕನಿಷ್ಠ ಮೂಲಸೌಕರ್ಯಗಳಿಲ್ಲದೆ ಬದುಕುತ್ತಿರುವುದು ವಿಪರ್ಯಾಸ. ಸಂಬಂಧಪಟ್ಟ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸಿ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಬೇಕಿದೆ.




