– ಟಿಕ್ಟಾಕ್ ನಿಷೇಧಿಸಿದ ಸರ್ಕಾರ ಓಲಾ, ಉಬರ್, ರ್ಯಾಪಿಡೊ ಏಕೆ ನಿಷೇಧಿಸಲ್ಲ? ಅಂತಾ ಪ್ರಶ್ನೆ
– ಆಟೋ ಮತ್ತು ಟ್ಯಾಕ್ಸಿ ದರ ಪರಿಷ್ಕರಣೆಗೆ ಆಗ್ರಹ
ನವದೆಹಲಿ: ದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳು ಸೇರಿದಂತೆ ಪಂಜಾಬ್ ಮತ್ತು ಹರಿಯಾಣದಲ್ಲಿ ಸಾರಿಗೆ ಒಕ್ಕೂಟಗಳು ನಡೆಸಿದ ಮುಷ್ಕರದ ಪರಿಣಾಮ ಗುರುವಾರ ಬೆಳಗ್ಗೆ ಪ್ರಯಾಣಿಕರು ತೀವ್ರ ಸಂಕಷ್ಟ ಅನುಭವಿಸಿದ್ದಾರೆ. ಆಟೋ ಮತ್ತು ಟ್ಯಾಕ್ಸಿ ದರ ಏರಿಕೆ ಸೇರಿದಂತೆ ವಿವಿಧ ಬೇಡಿಕೆಗಳನ್ನ ಮುಂದಿಟ್ಟುಕೊಂಡು ಚಾಲಕರು ಪ್ರತಿಭಟನೆ ನಡೆಸಿದ್ದು, ಇದರ ಪರಿಣಾಮ ಕ್ಯಾಬ್ ಪ್ರಯಾಣದ ದರಗಳು ಏಕಾಏಕಿ ಗಗನಕ್ಕೇರಿವೆ. ಸಾಮಾನ್ಯವಾಗಿ 300 ರೂ. ಆಗುತ್ತಿದ್ದ ಕ್ಯಾಬ್ ಪ್ರಯಾಣಕ್ಕೆ ಕೆಲವರು 800 ರೂ. ಪಾವತಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ದಕ್ಷಿಣ ದೆಹಲಿಯ ಗ್ರೇಟರ್ ಕೈಲಾಶ್ನಿಂದ ನೋಯ್ಡಾದ ಫಿಲ್ಮ್ ಸಿಟಿವರೆಗಿನ ಪ್ರಯಾಣಕ್ಕೆ ಓಲಾ ಮತ್ತು ರ್ಯಾಪಿಡೋ ಕ್ಯಾಬ್ ಸೇವೆಗಳಲ್ಲಿ ಸಾಮಾನ್ಯವಾಗಿ 300 ರೂ. ದರ ಇರುತ್ತದೆ. ಆದರೆ ಗುರುವಾರ (ಇಂದು) ಬೆಳಗ್ಗೆ 9 ಗಂಟೆಯ ವೇಳೆಗೆ ಇದೇ ಪ್ರಯಾಣದ ದರ 400 ರೂ. ದಾಟಿತ್ತು. ಬೆಳಗ್ಗೆ 10 ಗಂಟೆಯ ವೇಳೆಗೆ ಕಚೇರಿಗಳಿಗೆ ತೆರಳುವವರ ಸಂಖ್ಯೆ ಹೆಚ್ಚಾದಂತೆ ದರ 500ಕ್ಕೂ ಅಧಿಕವಾಗಿದೆ. ಇದೇ ಮಾರ್ಗದಲ್ಲಿ ಒಬ್ಬ ಪ್ರಯಾಣಿಕರು ಬರೋಬ್ಬರಿ 800 ರೂ. ಪಾವತಿಸಿದ್ದಾರೆ ಎಂದು ವರದಿ ತಿಳಿಸಿದೆ.
ದೆಹಲಿ ರಾಮ್ಲೀಲಾ ಮೈದಾನದಲ್ಲಿ ಭಾರತೀಯ ಮಜ್ದೂರ್ ಸಂಘ (BMS) ಸಂಯೋಜಿತ ಸಾರಿಗೆ ಒಕ್ಕೂಟಗಳು ಪ್ರತಿಭಟನೆ ಆಯೋಜಿಸಿದ್ದವು. ಆಟೋ ಮತ್ತು ಟ್ಯಾಕ್ಸಿ ದರಗಳನ್ನ ಪರಿಷ್ಕರಿಸಬೇಕು, ಖಾಸಗಿ ಬೈಕ್ ಟ್ಯಾಕ್ಸಿ ಸೇವೆಗಳನ್ನು ನಿಷೇಧಿಸಬೇಕು ಹಾಗೂ ಆಟೋರಿಕ್ಷಾಗಳಿಗೆ ಸಂಬಂಧಿಸಿದ ಕೆಲವು ಫಿಟ್ನೆಸ್ ನಿಯಮಗಳನ್ನ ಹಿಂಪಡೆಯಬೇಕು ಎಂಬಿತ್ಯಾದಿ ಬೇಡಿಕೆಗಳನ್ನ ಆಗ್ರಹಿಸಿ ಒಕ್ಕೂಟಗಳು ಪ್ರತಿಭಟನೆ ನಡೆಸಿದವು. ಇದರ ಜೊತೆಗೆ ಚಾಲಕರು ತಮ್ಮ ಜೀವನೋಪಾಯ, ಕೆಲಸದ ಪರಿಸ್ಥಿತಿ ಮತ್ತು ಸುರಕ್ಷತೆ ಬಗ್ಗೆಯೂ ಕಳವಳ ವ್ಯಕ್ತಪಡಿಸಿದ್ದಾರೆ.
ಪ್ರತಿಭಟನೆಯ ದಿನ ಕ್ಯಾಬ್ ಚಲಾಯಿಸುತ್ತಿದ್ದ ದೆಹಲಿ ಮೂಲದ ಚಾಲಕರೊಬ್ಬರು ಮಾಧ್ಯಮದೊಂದಿಗೆ ಮಾತನಾಡಿ, ʻಸರ್ಕಾರ ಟಿಕ್ಟಾಕ್ ಅನ್ನು ನಿಷೇಧಿಸಲು ಸಾಧ್ಯವಾದ್ರೆ, ಓಲಾ, ಉಬರ್ ಮತ್ತು ರ್ಯಾಪಿಡೊ ನಿಷೇಧಿಸಲು ಏಕೆ ಸಾಧ್ಯವಿಲ್ಲ? ಬೈಕ್ ಟ್ಯಾಕ್ಸಿ ಉತ್ತಮ ಪರ್ಯಾಯವಾಗಿದ್ದರೂ ಪ್ರಯಾಣಿಕರಲ್ಲಿ ಜನಪ್ರಿಯತೆ ಗಳಿಸಲು ಏಕೆ ವಿಫಲವಾಗಿದೆ? ಎಂದು ಪ್ರಶ್ನೆ ಮಾಡಿದ್ದಾರೆ.
ಪ್ರಯಾಣಿಕರ ಜೇಬಿಗೆ ಕತ್ತರಿ
ಮುಷ್ಕರದ ಪರಿಣಾಮ ಪ್ರಯಾಣಿಕರ ಜೇಬಿಗೂ ಬಿಸಿ ತಟ್ಟಿದೆ. ದಕ್ಷಿಣ ದೆಹಲಿಯ ಗೃಹಿಣಿಯೊಬ್ಬರು ನೀಡಿದ ಮಾಹಿತಿಯ ಪ್ರಕಾರ, ಹೇಮಕುಂಟ್ ಕಾಲೋನಿಯಿಂದ ಕೇಂಬ್ರಿಡ್ಜ್ ಶಾಲೆಯವರೆಗಿನ ಸುಮಾರು 3 ಕಿ.ಮೀ. ಆಟೋ ಪ್ರಯಾಣಕ್ಕೆ ಉಬರ್ನಲ್ಲಿ 90-92 ರೂಪಾಯಿ ತೋರಿಸಲಾಗುತ್ತಿತ್ತು. ಆದರೆ ಸಾಮಾನ್ಯವಾಗಿ ಇದೇ ಪ್ರಯಾಣಕ್ಕೆ 75-80 ರೂ. ಮಾತ್ರ ವೆಚ್ಚವಾಗುತ್ತಿತ್ತು. ಅದೇ ರೀತಿ, 10 ಕಿ.ಮೀ. ಮಿತಿಯೊಳಗೆ 1 ಗಂಟೆಯ ಕ್ಯಾಬ್ ಬಾಡಿಗೆ ಸಾಮಾನ್ಯವಾಗಿ 325 ರೂ. ಇರುತ್ತಿತ್ತು. ಮುಷ್ಕರದ ದಿನ ಇದೇ ದರ 406 ರೂ.ಗಳಿಗೆ ಏರಿಕೆಯಾಗಿದೆ. ಸಾಮಾನ್ಯ ಕ್ಯಾಬ್ ಪ್ರಯಾಣದ ದರದಲ್ಲೂ 10-15 ರೂ. ಹೆಚ್ಚಳವಾಗಿತ್ತು ಎಂದು ಅವರು ತಿಳಿಸಿದ್ದಾರೆ.
ದೀರ್ಘ ಪ್ರಯಾಣದಿಂದ ಲಾಭವಿಲ್ಲ
ಇನ್ನೊಂದೆಡೆ, ಚಾಲಕರ ಪ್ರಕಾರ ಸಮಸ್ಯೆ ಕೇವಲ ಪೀಕ್ ಅವರ್ನಲ್ಲಿ ದರ ಹೆಚ್ಚಳವಾಗುವುದಕ್ಕೆ ಸೀಮಿತವಾಗಿಲ್ಲ. ಕ್ಯಾಬ್ ಸೇವೆಗಳನ್ನು ಒದಗಿಸುವ ಆ್ಯಪ್ಗಳ ಪಾವತಿ ವ್ಯವಸ್ಥೆಯೇ ದೀರ್ಘ ಪ್ರಯಾಣಗಳನ್ನ ಲಾಭದಾಯಕವಾಗದಂತೆ ಮಾಡುತ್ತಿದೆ. ಓಲಾ ಮತ್ತು ರ್ಯಾಪಿಡೊ ಎರಡರಲ್ಲೂ ಕ್ಯಾಬ್ ಚಲಾಯಿಸುವ ಅನುಪಮ್ ಕುಮಾರ್ ಎಂಬ ಚಾಲಕರು ಈ ಬಗ್ಗೆ ಮಾತನಾಡಿದ್ದಾರೆ. ಕ್ಯಾಬ್ ಹೈರಿಂಗ್ ಆ್ಯಪ್ಗಳು ಮೊದಲ 3 ಕಿ.ಮೀ. ಪ್ರಯಾಣಕ್ಕೆ ಸುಮಾರು 104 ರೂ. ನಿಂದ 114 ರೂ. ವರೆಗೆ ನಿಗದಿತ ಹಣ ಚಾಲಕರಿಗೆ ನೀಡುತ್ತವೆ. ಈ ಮೊತ್ತ ಕಡಿಮೆ ದೂರದ ಪ್ರಯಾಣಕ್ಕೆ ಸಮಾಧಾನಕರವಾಗಿ ಕಂಡರೂ, ದೂರ ಹೆಚ್ಚಾದಂತೆ ಪ್ರತಿ ಕಿಲೋಮೀಟರ್ಗೆ ಸಿಗುವ ಹಣ ಕಡಿಮೆಯಾಗುತ್ತಾ ಹೋಗುತ್ತದೆ ಎಂದಿದ್ದಾರೆ.
ಈ ಮೇಲಿನ ಎಲ್ಲಾ ಕಾರಣಗಳನ್ನ ಉಲ್ಲೇಖಿಸಿ, ಬೈಕ್ ಟ್ಯಾಕ್ಸಿ ಸೇವೆಗಳನ್ನ ನಿಷೇಧಿಸುವಂತೆ ಆಗ್ರಹಿಸಿದ್ದಾರೆ.


