ನವದೆಹಲಿ: ಭಾರತೀಯ ಪ್ರಜೆಗಳಿಗೆ (Indian Nationals) ನೀಡಲಾಗುತ್ತಿದ್ದ 30 ದಿನಗಳ ವೀಸಾ ರಹಿತ ಪ್ರವೇಶವನ್ನು ಮಲೇಷ್ಯಾ (Malaysia) ಇದೀಗ ಹಿಂಪಡೆದಿದ್ದು, 2027ರ ಜನವರಿ 1ರಿಂದ ವೀಸಾ ಕಡ್ಡಾಯಗೊಳಿಸಿದೆ.
ಈ ಬಗ್ಗೆ ಮಲೇಷ್ಯಾ ವಲಸೆ ಇಲಾಖೆ (Malaysian Immigration Department) ಪ್ರಕಟಣೆ ಹೊರಡಿಸಿದ್ದು, ಭಾರತೀಯ ಪಾಸ್ಪೋರ್ಟ್ ಹೊಂದಿರುವವರಿಗೆ ನೀಡಲಾಗುತ್ತಿದ್ದ ವೀಸಾ ವಿನಾಯಿತಿ ಸೌಲಭ್ಯವನ್ನು ಕೊನೆಗೊಳಿಸಲು ನಿರ್ಧರಿಸಿದ್ದೇವೆ. ಹೀಗಾಗಿ ಹೊಸ ವರ್ಷದಿಂದ ದೇಶಕ್ಕೆ ಪ್ರವೇಶಿಸುವ ಭಾರತೀಯರು ಆಗಮನಕ್ಕೆ ಮುನ್ನವೇ ಮಾನ್ಯ ವೀಸಾ ಹೊಂದಿರಬೇಕು. ಈ ಸಂಬಂಧ ಡಿಸೆಂಬರ್ 1ರಿಂದ MyVISA ಪೋರ್ಟಲ್ನಲ್ಲಿ ವೀಸಾ ಪಡೆಯಲು ಅರ್ಜಿ ಸಲ್ಲಿಕೆ ಆರಂಭವಾಗಲಿದೆ ಎಂದು ತಿಳಿಸಿದೆ. ಇದನ್ನೂ ಓದಿ: ಆಟೋ, ಟ್ಯಾಕ್ಸಿ ಮುಷ್ಕರದ ಬಿಸಿ – 300 ರೂ. ಇದ್ದ ಕ್ಯಾಬ್ ಪ್ರಯಾಣ ದರ ಏಕಾಏಕಿ 800 ರೂ.ಗೆ ಏರಿಕೆ!
ಉದ್ಯೋಗ ಹುಡುಕಿಕೊಂಡು ಮಲೇಷ್ಯಾಕ್ಕೆ ಪ್ರಯಾಣಿಸಲು ವೀಸಾ ಮುಕ್ತ ಸೌಲಭ್ಯವನ್ನು ದುರುಪಯೋಗಪಡಿಸಿಕೊಳ್ಳದಂತೆ ಎಚ್ಚರಿಸಿ ಕೌಲಾಲಂಪುರದಲ್ಲಿರುವ ಭಾರತದ ಹೈಕಮಿಷನ್ ಸಲಹೆ ನೀಡಿದ ಎರಡು ತಿಂಗಳಲ್ಲಿ ಈ ಬೆಳವಣಿಗೆ ನಡೆದಿದೆ.
ಯಾಕೆ ಈ ನಿರ್ಧಾರ?
ಸೆಪ್ಟೆಂಬರ್ 22ರಂದು ಕೌಲಾಲಂಪುರದಲ್ಲಿರುವ (Kuala Lumpur) ಭಾರತದ ಹೈಕಮಿಷನ್ ಮಲೇಷ್ಯಾಕ್ಕೆ ಪ್ರಯಾಣಿಸುವ ಭಾರತೀಯ ಪ್ರಜೆಗಳಿಗಾಗಿ ಪ್ರತ್ಯೇಕ ಸೂಚನೆಯನ್ನು ಹೊರಡಿಸಿತ್ತು. 30 ದಿನಗಳ ವೀಸಾ ಮುಕ್ತ ಸೌಲಭ್ಯವನ್ನು ಬಳಸಿಕೊಂಡು ಉದ್ಯೋಗ ಹುಡುಕಲು ದೇಶಕ್ಕೆ ಬರುತ್ತಿರುವ ಭಾರತೀಯರ ಸಂಖ್ಯೆಯಲ್ಲಿ ಗಮನಾರ್ಹ ಏರಿಕೆಯಾಗುತ್ತಿದೆ. ಹೀಗಾಗಿ ವೀಸಾ ಮುಕ್ತ ಸೌಲಭ್ಯ ಬಳಸಿಕೊಂಡು ಮಲೇಷ್ಯಾದಲ್ಲಿ ಉದ್ಯೋಗ ಪಡೆದುಕೊಳ್ಳದಂತೆ ಪ್ರಯಾಣಿಕರಿಗೆ ಎಚ್ಚರಿಕೆ ನೀಡಿತ್ತು.
ಇನ್ನೂ ಕೆಲ ಏಜೆಂಟರ ಸುಳ್ಳು ಉದ್ಯೋಗ ಭರವಸೆಗಳಿಂದ ಕೆಲವು ಭಾರತೀಯ ಪ್ರಜೆಗಳು ದಾರಿ ತಪ್ಪುತ್ತಿದ್ದಾರೆ ಎಂದು ಎಚ್ಚರಿಕೆ ನೀಡಿತ್ತು. ವೀಸಾ ಮುಕ್ತ ಸೌಲಭ್ಯವು ಕೇವಲ ಪ್ರವಾಸೋದ್ಯಮ ಮತ್ತು ಸಾಮಾಜಿಕ ಭೇಟಿಗಳಿಗೆ ಮಾತ್ರವೇ ಹೊರತು ಉದ್ಯೋಗಕ್ಕಲ್ಲ ಎಂದು ಸಲಹೆ ಮೂಲಕ ಸ್ಪಷ್ಟಪಡಿಸಿತ್ತು.ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಪುಡಿರೌಡಿಗಳ ಅಟ್ಟಹಾಸ; ಹಾಡಹಗಲೇ ಲಾಂಗ್-ಮಚ್ಚು ಹಿಡಿದು ಠಾಣೆಯಲ್ಲೇ ಜೀವ ಬೆದರಿಕೆ
