– ಎಸ್ಐಟಿ ತನಿಖೆಗೆ ಮತ್ತಷ್ಟು ಕಾನೂನು ಬಲ
ಬೆಂಗಳೂರು: ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಬಹುಚರ್ಚಿತ ‘ಬುರುಡೆ ಪ್ರಕರಣ’ದ (Dharmasthala Case) (ಕ್ರೈಂ ನಂಬರ್ 39/2026) ತನಿಖೆಯನ್ನ ರದ್ದುಪಡಿಸುವಂತೆ ಕೋರಿ, ಪ್ರಕರಣದ ಪ್ರಮುಖ ಆರೋಪಿತರಲ್ಲಿ ಒಬ್ಬರಾದ ಗಿರೀಶ್ ಮಟ್ಟಣ್ಣನವರ್ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ (Karnataka High Court) ವಜಾಗೊಳಿಸಿದೆ. ನ್ಯಾಯಾಲಯದ ಈ ತೀರ್ಪಿನಿಂದ ವಿಶೇಷ ತನಿಖಾ ತಂಡದ (SIT) ತನಿಖೆಗೆ ಮತ್ತಷ್ಟು ಕಾನೂನು ಬಲ ಸಿಕ್ಕಂತಾಗಿದೆ.
ಪ್ರಕರಣದ ಹಿನ್ನೆಲೆ ಏನು?
ಧರ್ಮಸ್ಥಳ (Dharmasthala) ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಾವಿರಾರು ಶವಗಳನ್ನು ಹೂಳಲಾಗಿದೆ ಎಂಬ ಗಂಭೀರ ಆರೋಪದೊಂದಿಗೆ ಮುಸುಕುಧಾರಿ ವ್ಯಕ್ತಿಯೊಬ್ಬ ನೀಡಿದ್ದ ಹೇಳಿಕೆಯ ಆಧಾರದ ಮೇಲೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅನಾಮಿಕ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಾಗಿತ್ತು. ರಾಜ್ಯಾದ್ಯಂತ ಭಾರೀ ಸಂಚಲನ ಮೂಡಿಸಿದ್ದ ಈ ಪ್ರಕರಣದ ಗಂಭೀರತೆಯನ್ನ ಪರಿಗಣಿಸಿದ ರಾಜ್ಯ ಸರ್ಕಾರ, ಸಮಗ್ರ ತನಿಖೆಗಾಗಿ ವಿಶೇಷ ತನಿಖಾ ತಂಡವನ್ನು (SIT) ರಚಿಸಿತ್ತು.
SIT ತನಿಖೆಯಲ್ಲಿ ಷಡ್ಯಂತ್ರ ಬಯಲು
ತನಿಖೆ ಕೈಗೆತ್ತಿಕೊಂಡ SIT ಅಧಿಕಾರಿಗಳು, ಮುಸುಕುಧಾರಿ ವ್ಯಕ್ತಿ ನೀಡಿದ್ದ ಹೇಳಿಕೆಗಳು, ಪತ್ತೆಯಾದ ತಲೆಬುರುಡೆ ಹಾಗೂ ಇತರ ಸಾಕ್ಷ್ಯಗಳ ಮೂಲ ಮತ್ತು ಘಟನೆಗಳ ಹಿನ್ನೆಲೆಯನ್ನ ಕೂಲಂಕಷವಾಗಿ ಪರಿಶೀಲಿಸಿದ್ದರು. ತನಿಖೆಯ ವೇಳೆ ಮೂಲ ದೂರುದಾರನಾಗಿದ್ದ ಚಿನ್ನಯ್ಯನ ಹೇಳಿಕೆಗಳಲ್ಲಿ ಮಹತ್ವದ ಬದಲಾವಣೆಗಳು ಕಂಡುಬಂದಿವೆ.
ಧರ್ಮಸ್ಥಳದಲ್ಲಿ ಸಾವಿರಾರು ಶವಗಳನ್ನು ಹೂಳಲಾಗಿದೆ ಎಂಬ ಆರೋಪದ ಹಿಂದೆ ವ್ಯವಸ್ಥಿತ ಷಡ್ಯಂತ್ರ ನಡೆದಿದೆ ಎಂಬ ಅಂಶ ತನಿಖೆಯಲ್ಲಿ ಬಯಲಾಗಿರುವುದಾಗಿ SIT ನ್ಯಾಯಾಲಯಕ್ಕೆ ಸಲ್ಲಿಸಿದ ವರದಿಯಲ್ಲಿ ಉಲ್ಲೇಖಿಸಿದೆ. ಈ ಸಂಬಂಧ ಚಿನ್ನಯ್ಯ ಅಲಿಯಾಸ್ ಚಿನ್ನ, ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣ, ಜಯಂತ್ ಟಿ., ವಿಠಲ ಗೌಡ ಹಾಗೂ ಸುಜಾತಾ ಭಟ್ ಸೇರಿದಂತೆ ಒಟ್ಟು 6 ಮಂದಿಯ ವಿರುದ್ಧ ಸುಳ್ಳು ಸಾಕ್ಷ್ಯ ಸೃಷ್ಟಿ, ನಕಲಿ ದಾಖಲೆ ತಯಾರಿಕೆ ಹಾಗೂ ಇತರ ಅಪರಾಧಗಳಿಗೆ ಸಂಬಂಧಿಸಿದಂತೆ SIT ವರದಿಯಲ್ಲಿ ಗಂಭೀರ ಆರೋಪಗಳನ್ನು ಪ್ರಸ್ತಾಪಿಸಲಾಗಿದೆ.
ನ್ಯಾಯಾಲಯದ ಕಾನೂನು ಪ್ರಕ್ರಿಯೆ
ತನಿಖೆಯು ತಮ್ಮ ವಿರುದ್ಧವೇ ತಿರುಗುತ್ತಿರುವ ಹಿನ್ನೆಲೆ, ಪ್ರಕರಣವನ್ನು ರದ್ದುಪಡಿಸುವಂತೆ ಕೋರಿ ಗಿರೀಶ್ ಮಟ್ಟಣ್ಣ 2025ರ ನವೆಂಬರ್ನಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯದ ಮೊರೆ ಹೋಗಿದ್ದರು. ಅಂದು ನ್ಯಾಯಾಲಯವು ಪ್ರಕರಣವನ್ನು ರದ್ದುಪಡಿಸದೆ, ತನಿಖೆಯ ವೇಳೆ ಅರ್ಜಿದಾರರಿಗೆ ಕಿರುಕುಳ ನೀಡದಂತೆ SITಗೆ ಸೂಚಿಸಿತ್ತು ಹಾಗೂ ಈ ಹಿಂದೆ ನೀಡಲಾಗಿದ್ದ ಮಧ್ಯಂತರ ತಡೆಯಾಜ್ಞೆಯನ್ನು ತೆರವುಗೊಳಿಸಿತ್ತು.
ಇದೀಗ ಇದೇ ಪ್ರಕರಣವನ್ನು ರದ್ದುಪಡಿಸುವಂತೆ ಕೋರಿ ಮತ್ತೆ ಸಲ್ಲಿಸಲಾಗಿದ್ದ ರಿಟ್ ಅರ್ಜಿಯನ್ನ ಉಚ್ಚ ನ್ಯಾಯಾಲಯವು ಸಂಪೂರ್ಣವಾಗಿ ವಜಾಗೊಳಿಸಿದೆ. ಆರೋಪಗಳ ಸತ್ಯಾಸತ್ಯತೆ ಮತ್ತು ಸಾಕ್ಷ್ಯಗಳ ವಿಶ್ವಾಸಾರ್ಹತೆಯನ್ನ ಬಯಲಿಗೆಳೆಯುತ್ತಿರುವ SIT ತನಿಖೆಗೆ ಈ ತೀರ್ಪು ಮಹತ್ವದ ಮೈಲಿಗಲ್ಲಾಗಿದ್ದು, ಮುಂದಿನ ಕಾನೂನು ಪ್ರಕ್ರಿಯೆಗಳಿಗೆ ವೇಗ ನೀಡಲಿದೆ.


