ನವದೆಹಲಿ: ಕೇಂದ್ರ ಸರ್ಕಾರದ ‘ಮೋಟಾರು ವಾಹನ ಅಗ್ರಿಗೇಟರ್ ಮಾರ್ಗಸೂಚಿ (MVAG) 2025’ ರ ಅಡಿಯಲ್ಲಿ, ಎಲ್ಲಾ ಸಾರಿಗೆಯೇತರ ದ್ವಿಚಕ್ರ ವಾಹನಗಳಿಗೆ (Non-transport motorcycles) ಅಗ್ರಿಗೇಟರ್ ಪ್ಲಾಟ್ಫಾರ್ಮ್ಗಳ ಮೂಲಕ ಪ್ರಯಾಣಿಕರ ಸೇವೆ (Bike Tax) ಒದಗಿಸಲು ಅನುಮತಿ ನೀಡುವಂತೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ(Nitin Gadkari) ಅವರು ಎಲ್ಲಾ ರಾಜ್ಯ ಸರ್ಕಾರಗಳಿಗೆ ಮನವಿ ಮಾಡಿದ್ದಾರೆ.
ದೆಹಲಿಯಲ್ಲಿ ಆಯೋಜಿಸಲಾಗಿದ್ದ ‘ರೈಡ್: ಅಗ್ರಿಗೇಟರ್ ಮತ್ತು ಡೆಲಿವರಿ ಸೇವೆಗಳ ಪ್ರದರ್ಶನ’ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ಕ್ರಮದಿಂದ ದೇಶದಲ್ಲಿ 15 ರಿಂದ 20 ಕೋಟಿ ಜನರಿಗೆ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿದ್ದು, ಇದು ಅಪಾರ ಆರ್ಥಿಕ ಬೆಳವಣಿಗೆಗೆ ಕಾರಣವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಈ ಕುರಿತು ಮಾತನಾಡಿದ ಸಚಿವ ನಿತಿನ್ ಗಡ್ಕರಿ, ನಾನು ಇಂದು ಎಲ್ಲಾ ರಾಜ್ಯಗಳ ಸಾರಿಗೆ ಆಯುಕ್ತರ ಸಭೆ ಕರೆದು, ತಮ್ಮ ತಮ್ಮ ರಾಜ್ಯಗಳಲ್ಲಿ ಅಗ್ರಿಗೇಟರ್ ಆ್ಯಪ್ಗಳ ಮೂಲಕ ಪ್ರಯಾಣಿಕರನ್ನು ಕರೆದೊಯ್ಯಲು ಎಲ್ಲಾ ಖಾಸಗಿ ಬೈಕ್ಗಳಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ವಿನಂತಿಸಿದ್ದೇನೆ ಎಂದು ತಿಳಿಸಿದ್ದಾರೆ. ಅಲ್ಲದೆ, ಈ ಸಂಬಂಧ ಎಲ್ಲಾ ರಾಜ್ಯ ಸರ್ಕಾರಗಳಿಗೂ ಅಧಿಕೃತವಾಗಿ ಪತ್ರ ಬರೆದಿರುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ‘ಮೋಟಾರು ವಾಹನ ಅಗ್ರಿಗೇಟರ್ ಮಾರ್ಗಸೂಚಿ 2025’, ಭಾರತದ ಹಂಚಿಕೆಯ ಸಂಚಾರ ಕ್ಷೇತ್ರಕ್ಕೆ ಬಹುನಿರೀಕ್ಷಿತ ಕಾನೂನು ಸ್ಪಷ್ಟತೆಯನ್ನು ಒದಗಿಸಿದೆ. ಈ ಮಾರ್ಗಸೂಚಿಯು ರಾಜ್ಯ ಸರ್ಕಾರಗಳಿಗೆ ವೈಟ್-ಬೋರ್ಡ್ (ಖಾಸಗಿ) ಬೈಕ್ಗಳನ್ನು ಬೈಕ್ ಟ್ಯಾಕ್ಸಿಗಳಾಗಿ ಬಳಸಲು ಅಧಿಕೃತವಾಗಿ ಅನುಮತಿ ನೀಡುವ ಅಧಿಕಾರವನ್ನು ನೀಡುತ್ತದೆ.
ಬೈಕ್ ಟ್ಯಾಕ್ಸಿ ಕಂಪನಿಗಳಿಗೆ ರಿಲೀಫ್:
ಇಷ್ಟು ದಿನ ಕಾನೂನಿನ ಅಸ್ಪಷ್ಟತೆಯ ನಡುವೆ ಕಾರ್ಯನಿರ್ವಹಿಸುತ್ತಿದ್ದ ರ್ಯಾಪಿಡೋ (Rapido) ಮತ್ತು ಉಬರ್ (Uber) ನಂತಹ ಬೈಕ್ ಟ್ಯಾಕ್ಸಿ ಕಂಪನಿಗಳಿಗೆ ಕೇಂದ್ರದ ಈ ನಿರ್ಧಾರ ದೊಡ್ಡ ನಿರಾಳತೆ ತಂದಿದೆ. ವಿಶೇಷವಾಗಿ ಬೈಕ್ ಟ್ಯಾಕ್ಸಿ ನಿಷೇಧದಿಂದಾಗಿ ತೀವ್ರ ಸಂಘರ್ಷ ಮತ್ತು ಪ್ರತಿಭಟನೆಗಳಿಗೆ ಸಾಕ್ಷಿಯಾಗಿದ್ದ ಕರ್ನಾಟಕದಲ್ಲಿ ಈ ಮಾರ್ಗಸೂಚಿ ಮಹತ್ವದ ಬದಲಾವಣೆಗೆ ದಾರಿ ಮಾಡಿಕೊಡಲಿದೆ. ಇದನ್ನೂ ಓದಿ: ರೈಡ್ಗೂ ಮುನ್ನವೇ ಹಣ ಪಾವತಿ – ಓಲಾಗೆ ಬಿತ್ತು ಭಾರೀ ದಂಡ
ಕಾನೂನಿನಲ್ಲಿ ಏನಿದೆ?
ಮಾರ್ಗಸೂಚಿಗಳ ಪ್ರಕಾರ, ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 67ರ ಉಪ-ವಿಭಾಗ (3) ರ ಅಡಿಯಲ್ಲಿ ತಮಗಿರುವ ಅಧಿಕಾರವನ್ನು ಬಳಸಿಕೊಂಡು ರಾಜ್ಯ ಸರ್ಕಾರಗಳು ಪ್ರಯಾಣಿಕರ ಪ್ರಯಾಣಕ್ಕಾಗಿ ಖಾಸಗಿ ಬೈಕ್ಗಳ ಬಳಕೆಗೆ ಅನುಮತಿ ನೀಡಬಹುದಾಗಿದೆ.
ದೇಶದಲ್ಲಿ ಬೈಕ್-ಶೇರಿಂಗ್, ಎಲೆಕ್ಟ್ರಿಕ್ ವಾಹನಗಳು (EV) ಮತ್ತು ಆಟೋ-ರಿಕ್ಷಾ ಸೇವೆಗಳಂತಹ ವೈವಿಧ್ಯಮಯ ಹಾಗೂ ಸುಲಭ ಸಂಚಾರ ಸೇವೆಗಳಿಗೆ ಬೇಡಿಕೆ ಹೆಚ್ಚಾದಂತೆ ಗ್ರಾಹಕರ ವ್ಯಾಪ್ತಿಯೂ ವಿಸ್ತರಿಸಿದೆ. ಈ ಬೆಳವಣಿಗೆಗಳಿಗೆ ಪೂರಕವಾಗಿ 2020ರ ಹಳೆಯ ಮಾರ್ಗಸೂಚಿಯನ್ನು ಪರಿಷ್ಕರಿಸಿ 2025ರ ಹೊಸ ಮಾರ್ಗಸೂಚಿಯನ್ನು ತರಲಾಗಿದೆ. ಪ್ರಯಾಣಿಕರ ಸುರಕ್ಷತೆ ಹಾಗೂ ಚಾಲಕರ ಕಲ್ಯಾಣವನ್ನು ಖಾತ್ರಿಪಡಿಸುವುದರ ಜೊತೆಗೆ, ಸರಳ ನಿಯಂತ್ರಣ ವ್ಯವಸ್ಥೆಯನ್ನು ಒದಗಿಸುವುದು ಈ ಹೊಸ ಮಾರ್ಗಸೂಚಿಯ ಪ್ರಮುಖ ಉದ್ದೇಶವಾಗಿದೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ತಿಳಿಸಿದೆ.
