ನವದೆಹಲಿ: ಕಳೆದ 12ರಿಂದ 13 ವರ್ಷಗಳ ಅವಧಿಯಲ್ಲಿ ದೇಶದ 50 ಕೋಟಿ ಜನರು ಬಡತನದಿಂದ ಹೊರಬಂದಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ (PM Modi) ಹೇಳಿದ್ದಾರೆ.
ದೆಹಲಿಯ ಭಾರತ್ ಮಂಟಪದಲ್ಲಿ ನಡೆದ ಭಾರತೀಯ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಘದ 100ನೇ ವಾರ್ಷಿಕ ಮಹಾಸಭೆ ಹಾಗೂ ವಾರ್ಷಿಕ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು. ದೇಶ-ವಿದೇಶಗಳ ಉದ್ಯಮಿಗಳು, ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ನೀತಿ ನಿರೂಪಕರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು.
1970ರ ದಶಕದಲ್ಲಿ ದೇಶದಲ್ಲಿ ʻಬಡತನ ನಿರ್ಮೂಲನೆʼ ಘೋಷಣೆ ಮೊಳಗಿದ್ದರೂ, ಆಗಿನ ಸರ್ಕಾರಗಳ ನೀತಿ ಮತ್ತು ಉದ್ದೇಶಗಳಲ್ಲಿ ಕೊರತೆಯಿತ್ತು ಎಂದು ಮೋದಿ ಟೀಕಿಸಿದರು. ಸರಿಯಾದ ಉದ್ದೇಶ ಮತ್ತು ದಿಕ್ಕಿನಲ್ಲಿ ಸರ್ಕಾರ ಕಾರ್ಯನಿರ್ವಹಿಸಿದರೆ ಬದಲಾವಣೆ ಸಾಧ್ಯ ಎಂಬುದಕ್ಕೆ ಕಳೆದ 12–13 ವರ್ಷಗಳಲ್ಲಿ 50 ಕೋಟಿ ಜನರು ಬಡತನದಿಂದ ಹೊರಬಂದಿರುವುದು ಸಾಕ್ಷಿಯಾಗಿದೆ ಎಂದು ಹೇಳಿದರು.
ಕಳೆದ 100 ವರ್ಷಗಳಲ್ಲಿ ಭಾರತದ ಆರ್ಥಿಕತೆ ಹಲವು ಹಂತಗಳನ್ನು ಕಂಡಿದೆ. ಲೈಸೆನ್ಸ್-ಕೋಟಾ ವ್ಯವಸ್ಥೆ, ರಾಷ್ಟ್ರೀಕರಣದ ಪ್ರಯೋಗ ಹಾಗೂ ಒಂದು ಹಂತದಲ್ಲಿ ಜಗತ್ತಿನ ದುರ್ಬಲ ಐದು ಆರ್ಥಿಕತೆಗಳ ಪಟ್ಟಿಯಲ್ಲಿ ಗುರುತಿಸಿಕೊಂಡಿದ್ದ ಭಾರತ, ಕಳೆದ 12 ವರ್ಷಗಳಲ್ಲಿ ಸಾಕಷ್ಟು ಬದಲಾವಣೆ ಕಂಡಿದೆ. ಈ ಪ್ರಗತಿಯಲ್ಲಿ ಯುವಕರು, ರೈತರು, ಕಾರ್ಮಿಕರು ಮತ್ತು ಉದ್ಯಮ ವಲಯದ ಕೊಡುಗೆ ಮಹತ್ವದ್ದಾಗಿದೆ ಎಂದು ಹೇಳಿದರು.ಇದನ್ನೂ ಓದಿ: ಬಸವಣ್ಣನ ವಿರುದ್ಧ ಅವಹೇಳನಕಾರಿ ಬರಹ – ರವಿ ಹಂಜ್ ವಿರುದ್ಧ ಸಿಡಿದ ಎಂಬಿಪಿ, ಲಿಂಗಾಯತ ಮುಖಂಡರು
ಭಾರತೀಯ ಉದ್ಯಮ ವಲಯ ಮುಂದಿನ 20 ವರ್ಷಗಳ ಗುರಿಗಳನ್ನು ಈಗಲೇ ರೂಪಿಸಿಕೊಳ್ಳಬೇಕು. 2047ರ ವೇಳೆಗೆ ಅಭಿವೃದ್ಧಿ ಹೊಂದಿದ ಹಾಗೂ ಸ್ವಾವಲಂಬಿ ಭಾರತ ನಿರ್ಮಿಸುವ ನಿಟ್ಟಿನಲ್ಲಿ ಉದ್ಯಮಿಗಳು ತಮ್ಮ ಕೊಡುಗೆಯನ್ನು ಹೆಚ್ಚಿಸಬೇಕು ಎಂದು ಪ್ರಧಾನಿ ಕರೆ ನೀಡಿದರು.
ದೀರ್ಘಾವಧಿಯ ಹೂಡಿಕೆ ನಿರ್ಧಾರಗಳಲ್ಲಿ ʻಭಾರತ ಮೊದಲುʼ ಎಂಬ ತತ್ವಕ್ಕೆ ಆದ್ಯತೆ ನೀಡಬೇಕು. ವಿದೇಶಿ ಮಾರುಕಟ್ಟೆಗಳಲ್ಲಿ ಬೇಡಿಕೆಯಿರುವ ಉತ್ಪನ್ನಗಳನ್ನು ದೇಶದಲ್ಲೇ ಅಭಿವೃದ್ಧಿಪಡಿಸಿ, ಜಾಗತಿಕ ಮಾರುಕಟ್ಟೆಗೆ ಪೂರೈಸುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು ಎಂದು ಉದ್ಯಮಿಗಳಿಗೆ ಸಲಹೆ ನೀಡಿದರು.
ಭಾರತವನ್ನು ವಿಶ್ವದ ಔಷಧಾಲಯ ಎಂದು ಕರೆಯಲಾಗುತ್ತಿದ್ದರೂ, ಔಷಧ ತಯಾರಿಕೆಗೆ ಅಗತ್ಯವಿರುವ ಕಚ್ಚಾವಸ್ತುಗಳು ಮತ್ತು ಔಷಧ ಮಧ್ಯವರ್ತಿಗಳನ್ನು ಭಾರತ ಇನ್ನೂ ದೊಡ್ಡ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳುತ್ತಿದೆ. ಇಂತಹ ಉತ್ಪನ್ನಗಳನ್ನು ದೇಶದಲ್ಲೇ ತಯಾರಿಸುವ ನಿಟ್ಟಿನಲ್ಲಿ ಔಷಧ ಉದ್ಯಮ ಹೊಸ ತಂತ್ರಜ್ಞಾನ ಮತ್ತು ಉತ್ಪಾದನಾ ಘಟಕಗಳಲ್ಲಿ ಹೂಡಿಕೆ ಮಾಡಬೇಕು ಎಂದು ಹೇಳಿದರು.
ಉದ್ಯಮಿಗಳು ತಮ್ಮ ಸಲಹೆಗಳನ್ನು ಯಾವುದೇ ಹಿಂಜರಿಕೆಯಿಲ್ಲದೆ ಸರ್ಕಾರಕ್ಕೆ ತಿಳಿಸಬೇಕು. ಹಿಂದಿನ ಸರ್ಕಾರಗಳೊಂದಿಗಿನ ಅನುಭವ ಕಹಿಯಾಗಿರಬಹುದು. ಆದರೆ ಈಗ ಇರುವುದು ಉದ್ಯಮ ಸ್ನೇಹಿ ಸರ್ಕಾರ. ಉದ್ಯಮ ವಲಯದ ಸಮಸ್ಯೆಗಳನ್ನು ಮುಕ್ತವಾಗಿ ತಿಳಿಸಿದರೆ ಅಗತ್ಯ ಸುಧಾರಣೆಗಳನ್ನು ಕೈಗೊಳ್ಳಲು ಸರ್ಕಾರ ಸಿದ್ಧವಿದೆ ಎಂದು ಮೋದಿ ಹೇಳಿದರು.
ರೈತರು, ಸಣ್ಣ ಉದ್ಯಮಿಗಳು, ಉದ್ಯಮ ಸಂಸ್ಥೆಗಳು, ಸಂಪತ್ತು ಸೃಷ್ಟಿಸುವವರು ಮತ್ತು ತೆರಿಗೆ ಪಾವತಿದಾರರಿಗೆ ಗೌರವ ನೀಡಿದಾಗ ಮಾತ್ರ ದೇಶ ಅಭಿವೃದ್ಧಿ ಹೊಂದಲು ಸಾಧ್ಯ. ಕಾರ್ಪೊರೇಟ್ ತೆರಿಗೆಯ ಮೂಲ ದರವನ್ನು ಶೇ.30ರಿಂದ ಶೇ.22ಕ್ಕೆ ಇಳಿಸಲಾಗಿದೆ. ತೆರಿಗೆ ಸಲ್ಲಿಕೆ ಮತ್ತು ಮರುಪಾವತಿ ಪ್ರಕ್ರಿಯೆಯನ್ನೂ ಸರಳಗೊಳಿಸಲಾಗಿದೆ ಎಂದು ಪ್ರಧಾನಿ ವಿವರಿಸಿದರು.ಇದನ್ನೂ ಓದಿ: ಹತ್ಯೆ ಬಳಿಕ ಆತ್ಮಗಳ ಭಯದಿಂದ ನಡುಗಿದ್ದ ಹಂತಕ; ತಾಯಿ ಕೊಲೆ ಕಣ್ಣಾರೆ ಕಂಡರೂ ಕಣ್ಣೀರು ಹಾಕದ ಮಗಳು
FICCI 1927ರಲ್ಲಿ ಸ್ಥಾಪನೆಯಾಗಿದ್ದು, 2026–27ನೇ ಸಾಲಿನಲ್ಲಿ ಸಂಸ್ಥೆಯ ಶತಮಾನೋತ್ಸವ ವರ್ಷ ಆಚರಿಸುತ್ತಿದೆ. ಸಂಸ್ಥೆಯು ಸಾರ್ವಜನಿಕ, ಖಾಸಗಿ ಮತ್ತು ಬಹುರಾಷ್ಟ್ರೀಯ ವಲಯಗಳ 2.5 ಲಕ್ಷಕ್ಕೂ ಅಧಿಕ ಕಂಪನಿಗಳನ್ನು ಪ್ರತಿನಿಧಿಸುತ್ತಿದೆ.
