- ಒಡಿಶಾದಲ್ಲಿ 50,000 ಜನರ ಸ್ಥಳಾಂತರ
ಅಮರಾವತಿ: ಬಂಗಾಳ ಕೊಲ್ಲಿಯ ಪಶ್ಚಿಮ-ಮಧ್ಯ ಭಾಗದಲ್ಲಿ ಅಕ್ವಾನ್ ಚಂಡಮಾರುತದ (Cyclone Akvan) ಪ್ರಭಾವ ಮುಂದುವರಿದಿದ್ದು, ನವೆಂಬರ್ 20 (ಶುಕ್ರವಾರ) ರಂದು ಆಂಧ್ರಪ್ರದೇಶ ಕರಾವಳಿಗೆ ಅಪ್ಪಳಿಸುವ ನಿರೀಕ್ಷೆ ಇದೆ. ಇದರ ಪರಿಣಾಮ ಬೆಂಗಳೂರಲ್ಲೂ (Bengaluru) ಮಳೆಯಾಗುವ (Rain) ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಅಕ್ವಾನ್ ಚಂಡಮಾರುತದ ಹಿನ್ನೆಲೆಯಲ್ಲಿ ಆಂಧ್ರಪ್ರದೇಶ ಮತ್ತು ಒಡಿಶಾ ಕರಾವಳಿಯಲ್ಲಿ ಕಟ್ಟೆಚ್ಚರ ಘೋಷಿಸಲಾಗಿದೆ. ಕರಾವಳಿ ಭಾಗಗಳಲ್ಲಿ ಅಧಿಕಾರಿಗಳು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದಾರೆ. ಚಂಡಮಾರುತದ ಪರಿಣಾಮ ಮೂರು ರೈಲುಗಳ ಸಂಚಾರ ವೇಳಾಪಟ್ಟಿಯಲ್ಲಿ ಬದಲಾವಣೆ ಸಹ ಮಾಡಲಾಗಿದೆ. ಇದನ್ನೂ ಓದಿ: ಹೆನ್ನಂಗಿಯಲ್ಲಿ ಕಾಡಾನೆ ದಾಳಿಗೆ ರೈತ ಬಲಿ – ಎನ್ಆರ್ಪುರ ಸಂಪೂರ್ಣ ಬಂದ್
ಬಂಗಾಳಕೊಲ್ಲಿಯಲ್ಲಿ ರೂಪುಗೊಂಡಿರುವ ಅಕ್ವಾನ್ ತೀವ್ರ ಚಂಡಮಾರುತವಾಗಿ ಬಲವರ್ಧನೆಗೊಳ್ಳುತ್ತಿದೆ. ಶುಕ್ರವಾರ ಮಧ್ಯಾಹ್ನ ಆಂಧ್ರಪ್ರದೇಶದ ನರಸಾಪುರ ಮತ್ತು ಒಡಿಶಾದ ಪುರಿ ನಡುವಿನ ಕರಾವಳಿಗೆ ಚಂಡಮಾರುತ ಅಪ್ಪಳಿಸುವ ಸಾಧ್ಯತೆಯಿದೆ. ಗಂಟೆಗೆ 90 – 100 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ. ಗಾಳಿಯ ವೇಗ 110 ಕಿ.ಮೀ. ತಲುಪುವ ಸಾಧ್ಯತೆ ಸಹ ಇದೆ.
ಚಂಡಮಾರುತದ ಪರಿಣಾಮ ಒಡಿಶಾದ 13 ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಅಲ್ಲದೇ 6 ಜಿಲ್ಲೆಗಳಿಗೆ ನ.19 ರಿಂದ 21ರ ವರೆಗೆ ಶಾಲೆ, ಅಂಗನವಾಡಿ ಕೇಂದ್ರಗಳಿಗೆ ರಜೆ ಘೋಷಿಸಲಾಗಿದೆ.
ಮುನ್ನೆಚ್ಚರಿಕಾ ಕ್ರಮವಾಗಿ ಕರಾವಳಿ ಮತ್ತು ತಗ್ಗು ಪ್ರದೇಶದ 50,000 ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗಿದೆ. 448 ಪರಿಹಾರ ಕೇಂದ್ರಗಳನ್ನು ಒಡಿಶಾ ಸರ್ಕಾರ ಸಜ್ಜುಗೊಳಿಸಿದೆ. ಯಾವುದೇ ಸಾವು ನೋವುಗಳಿಲ್ಲದೇ ಪರಿಸ್ಥಿತಿ ನಿಭಾಯಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
ಭಾರೀ ಮಳೆ ಸಾಧ್ಯತೆ
ಅಕ್ವಾನ್ ಚಂಡಮಾರುತವು ಪ್ರಬಲವಾಗುವ ನಿರೀಕ್ಷೆ ಇದ್ದು, ಇದು ಆಂಧ್ರಪ್ರದೇಶದ ಕರಾವಳಿ ಭಾಗದಲ್ಲಿ ಭಾರೀ ಮಳೆ, ಪ್ರವಾಹ ಮತ್ತು ಬಿರುಗಾಳಿ ತರಲಿದೆ. ನವೆಂಬರ್ 19 ಮತ್ತು 20ರಂದು ಕರಾವಳಿ ಆಂಧ್ರಪ್ರದೇಶದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ರಾಯಲಸೀಮೆಯ ಕೆಲವು ಭಾಗಗಳಲ್ಲಿ ಹಾಗೂ ನವೆಂಬರ್ 20 ಮತ್ತು 21ರಂದು ಪೂರ್ವ ತೆಲಂಗಾಣದಲ್ಲಿ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಎಚ್ಚರಿಕೆ ನೀಡಿದೆ. ಕರ್ನಾಟಕ ರಾಜಧಾನಿ ಬೆಂಗಳೂರಿಗೂ ಅಕ್ವಾನ್ ಚಂಡಮಾರುತದ ಪರಿಣಾಮವಾಗಿ ಮಳೆಯಾಗುವ ಸಾಧ್ಯತೆ ಇದೆ. ಇದನ್ನೂ ಓದಿ: ನರಹಂತಕ ಜೋಡಿ ಸಲಗಗಳ ಸೆರೆಗೆ ಮುಂದುವರಿದ ಕಾರ್ಯಾಚರಣೆ
