– 2065 ರಲ್ಲಿ ಅಮೆರಿಕ ಕ್ರಿಶ್ಚಿಯನ್ ದೇಶವಾಗಿರಲ್ಲ
– ಭಾರತದಲ್ಲಿ ಹಿಂದೂಗಳ ಸಂಖ್ಯೆ ಹೆಚ್ಚಳವಾದರೂ ಶೇ. ಪ್ರಮಾಣದಲ್ಲಿ ಇಳಿಕೆ
– ಅಮೆರಿಕದ ಪ್ರತಿಷ್ಠಿತ ಪ್ಯೂ ಸಂಶೋಧನಾ ವರದಿ
ವಾಷಿಂಗ್ಟನ್: 2035ರ ವೇಳೆಗೆ ಇಸ್ಲಾಂ(Islam) ಧರ್ಮವು ಕ್ರೈಸ್ತ(Christianity) ಧರ್ಮವನ್ನು ಹಿಂದಿಕ್ಕಿ ವಿಶ್ವದ ಅತಿದೊಡ್ಡ ಧರ್ಮವಾಗಿ ಹೊರಹೊಮ್ಮಲಿದೆ ಎಂದು ಅಮೆರಿಕದ ಪ್ರತಿಷ್ಠಿತ ಪ್ಯೂ ರಿಸರ್ಚ್ ಸೆಂಟರ್ (Pew Research Center) ತನ್ನ ಹೊಸ ಅಧ್ಯಯನ ವರದಿಯಲ್ಲಿ ತಿಳಿಸಿದೆ.
2020-2025ರ ಅವಧಿಯಲ್ಲಿ ಮುಸ್ಲಿಂ ಮಹಿಳೆಯರ ಫಲವತ್ತತೆ ದರ 3.1ರಷ್ಟಿದ್ದರೆ, ಕ್ರೈಸ್ತ ಮಹಿಳೆಯರ ದರ 2.5ರಷ್ಟಿದೆ. ಮತಾಂತರಕ್ಕಿಂತ ಹೆಚ್ಚಾಗಿ ಜನನ ಪ್ರಮಾಣವೇ ಧಾರ್ಮಿಕ ಜನಸಂಖ್ಯೆ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಪ್ಯೂ ಹಿರಿಯ ಜನಸಂಖ್ಯಾಶಾಸ್ತ್ರಜ್ಞ ಕಾನ್ರಾಡ್ ಹ್ಯಾಕೆಟ್ ಹೇಳಿದ್ದಾರೆ.
2020ರಲ್ಲಿ ವಿಶ್ವದಲ್ಲಿ 227 ಕೋಟಿ ಕ್ರೈಸ್ತರು ಮತ್ತು 202 ಕೋಟಿ ಮುಸ್ಲಿಮರಿದ್ದರು. 2035ರ ವೇಳೆಗೆ ಮುಸ್ಲಿಮರ ಸಂಖ್ಯೆ 257 ಕೋಟಿಗೆ ತಲುಪಿದರೆ, ಕ್ರೈಸ್ತರ ಸಂಖ್ಯೆ 252 ಕೋಟಿಯಷ್ಟಿರಲಿದೆ. 2070ರ ವೇಳೆಗೆ ಮುಸ್ಲಿಮರ ಸಂಖ್ಯೆ 360 ಕೋಟಿ ದಾಟಲಿದ್ದು, ಕ್ರೈಸ್ತರ ಸಂಖ್ಯೆ 300 ಕೋಟಿಗಿಂತ ಸ್ವಲ್ಪ ಕಡಿಮೆ ಇರಲಿದೆ.
ಪ್ರಸ್ತುತ ಶೇ. 62ರಷ್ಟು ಕ್ರೈಸ್ತರನ್ನು ಹೊಂದಿರುವ ಅಮೆರಿಕವು 2065ರ ವೇಳೆಗೆ ತನ್ನ ಕ್ರೈಸ್ತ ಬಹುಮತವನ್ನು ಕಳೆದುಕೊಳ್ಳಲಿದೆ. 2070ರ ವೇಳೆಗೆ ಅಮೆರಿಕದ ಜನಸಂಖ್ಯೆಯಲ್ಲಿ ಶೇ. 41ರಷ್ಟು ಜನರು ಯಾವುದೇ ಧರ್ಮಕ್ಕೆ ಸೇರದವರಾಗಿರುತ್ತಾರೆ. ನೆರೆಯ ಕೆನಡಾದಲ್ಲೂ 2030ರ ವೇಳೆಗೆ ಕ್ರೈಸ್ತರ ಪ್ರಮಾಣ ಅರ್ಧಕ್ಕಿಂತ ಕಡಿಮೆಯಾಗಲಿದ್ದು, 2070ರ ವೇಳೆಗೆ ನಾಸ್ತಿಕರು ಅಥವಾ ಯಾವುದೇ ಧರ್ಮಕ್ಕೆ ಸೇರದವರ ಸಂಖ್ಯೆ ಕ್ರೈಸ್ತರನ್ನು ಮೀರಿಸಲಿದೆ ಎಂದು ವರದಿ ಭವಿಷ್ಯ ನುಡಿದಿದೆ.
ಹಿಂದೂಗಳ ಸಂಖ್ಯೆ 17.6 ಕೋಟಿ ಹೆಚ್ಚಳ
2020 ಮತ್ತು 2070ರ ನಡುವೆ ಭಾರತದ(India) ಹಿಂದೂ ಜನಸಂಖ್ಯೆಯು ಬರೋಬ್ಬರಿ 17.6 ಕೋಟಿ ಹೆಚ್ಚಾಗುವ ನಿರೀಕ್ಷೆಯಿದೆ. ಆದಾಗ್ಯೂ, ಮುಸ್ಲಿಂ ಸಮುದಾಯದಲ್ಲಿ ಹೆಚ್ಚಿನ ಫಲವತ್ತತೆ ದರ (Fertility Rate) ಮುಂದುವರಿಯಲಿರುವುದರಿಂದ ದೇಶದ ಒಟ್ಟು ಜನಸಂಖ್ಯೆಯಲ್ಲಿ ಹಿಂದೂಗಳ(Hindu) ಶೇಕಡಾವಾರು ಪಾಲು ಅಲ್ಪ ಪ್ರಮಾಣದಲ್ಲಿ ಕಡಿಮೆಯಾಗಲಿದೆ
ಜನಸಂಖ್ಯಾ ಪ್ರಮಾಣದಲ್ಲಿ ಈ ಬದಲಾವಣೆಯಾದರೂ, 2070ರ ವೇಳೆಗೆ ಭಾರತದ ಒಟ್ಟು ಜನಸಂಖ್ಯೆಯ ನಾಲ್ಕನೇ ಮೂರಕ್ಕಿಂತ (ಶೇ.75) ಹೆಚ್ಚಿನ ಭಾಗ ಹಿಂದೂಗಳೇ ಆಗಿರಲಿದ್ದಾರೆ ಎಂದು ವರದಿ ಸ್ಪಷ್ಟಪಡಿಸಿದೆ.
2020ರಿಂದ 2070ರ ಅವಧಿಯಲ್ಲಿ ಜಾಗತಿಕ ಹಿಂದೂ ಜನಸಂಖ್ಯೆಯು 19.9 ಕೋಟಿ ಹೆಚ್ಚಾಗಿ, ಸುಮಾರು 140 ಕೋಟಿಗೆ (1.4 ಬಿಲಿಯನ್) ತಲುಪಲಿದೆ. ಆದರೆ, ವಿಶ್ವದ ಇತರ ಭಾಗಗಳ ಜನಸಂಖ್ಯೆಯು ವೇಗವಾಗಿ ಬೆಳೆಯುತ್ತಿರುವುದರಿಂದ, ಜಾಗತಿಕ ಜನಸಂಖ್ಯೆಯಲ್ಲಿ ಹಿಂದೂಗಳ ಪಾಲು 2020ರಲ್ಲಿದ್ದ ಶೇ. 15ರಿಂದ 2070ರ ವೇಳೆಗೆ ಶೇ. 14ಕ್ಕೆ ಇಳಿಕೆಯಾಗಲಿದೆ.
ಇತ್ತೀಚಿನ ದಶಕಗಳಲ್ಲಿ ಭಾರತದ ಒಟ್ಟಾರೆ ಫಲವತ್ತತೆ ದರವು ವೇಗವಾಗಿ ಕುಸಿದಿದ್ದರೂ, ಹಿಂದೂ ಮಹಿಳೆಯರಿಗೆ ಹೋಲಿಸಿದರೆ ಮುಸ್ಲಿಂ ಮಹಿಳೆಯರು ಸರಾಸರಿ ಹೆಚ್ಚು ಮಕ್ಕಳನ್ನು ಹೊಂದಿದ್ದಾರೆ. ಇದರೊಂದಿಗೆ ಮುಸ್ಲಿಂ ಜನಸಂಖ್ಯೆಯಲ್ಲಿ ಯುವಜನರ ಪ್ರಮಾಣ ಹೆಚ್ಚಿರುವುದರಿಂದ ದೇಶದ ಜನಸಂಖ್ಯೆಯಲ್ಲಿ ಮುಸ್ಲಿಮರ ಪಾಲು ಹೆಚ್ಚಾಗಿ, ಹಿಂದೂಗಳ ಪಾಲು ಅಲ್ಪ ಕಡಿಮೆಯಾಗಲಿದೆ ಎಂದು ಪ್ಯೂ ವರದಿ ವಿಶ್ಲೇಷಿಸಿದೆ.
ಅಮೆರಿಕ, ಆಸ್ಟ್ರೇಲಿಯಾ ಎಂಟ್ರಿ:
2020ರಲ್ಲಿ ಭಾರತವು 110 ಕೋಟಿ ಹಿಂದೂಗಳನ್ನು ಹೊಂದಿದ್ದು, ಇದು ವಿಶ್ವದ ಒಟ್ಟು ಹಿಂದೂ ಜನಸಂಖ್ಯೆಯ ಶೇ. 95ರಷ್ಟಿದೆ. ನಂತರದ ಸ್ಥಾನಗಳಲ್ಲಿ ನೇಪಾಳ (2.4 ಕೋಟಿ), ಬಾಂಗ್ಲಾದೇಶ (1.3 ಕೋಟಿ), ಪಾಕಿಸ್ತಾನ (50 ಲಕ್ಷ) ಮತ್ತು ಇಂಡೋನೇಷ್ಯಾ (40 ಲಕ್ಷ) ಇದ್ದವು.
2070ರ ವೇಳೆಗೆ ಈ ಶ್ರೇಯಾಂಕದಲ್ಲಿ ಬದಲಾವಣೆಯಾಗಲಿದ್ದು, ಅಮೆರಿಕವು ವಿಶ್ವದ 5ನೇ ಅತಿದೊಡ್ಡ ಹಿಂದೂ ಜನಸಂಖ್ಯೆ ಹೊಂದಿರುವ ದೇಶವಾಗಿ ಹೊರಹೊಮ್ಮಲಿದೆ.ಸುಮಾರು 30 ಲಕ್ಷ ಹಿಂದೂಗಳೊಂದಿಗೆ ಆಸ್ಟ್ರೇಲಿಯಾ ಟಾಪ್-10 ಪಟ್ಟಿಯಲ್ಲಿ 9ನೇ ಸ್ಥಾನ ಪಡೆಯಲಿದ್ದು, ಯುಎಇ (UAE) ಈ ಪಟ್ಟಿಯಿಂದ ಹೊರಬೀಳಲಿದೆ.
ಪಾಕಿಸ್ತಾನದ ಹಿಂದೂ ಜನಸಂಖ್ಯೆಯು 2070ರ ವೇಳೆಗೆ ದ್ವಿಗುಣಗೊಂಡು 1 ಕೋಟಿಗೆ ತಲುಪಲಿದ್ದು, 4ನೇ ಸ್ಥಾನವನ್ನು ಕಾಯ್ದುಕೊಳ್ಳಲಿದೆ. ಭಾರತದ ಹೊರತಾಗಿ ಪಾಕಿಸ್ತಾನದಲ್ಲಿ ನೈಸರ್ಗಿಕ ಜನಸಂಖ್ಯಾ ಬೆಳವಣಿಗೆ ಹಾಗೂ ಅಮೆರಿಕದಲ್ಲಿ ವಲಸೆಯು ಹಿಂದೂ ಜನಸಂಖ್ಯೆ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಲಿದೆ.
ವಿವಿಧ ಪ್ರದೇಶಗಳಲ್ಲಿ ಹಿಂದೂ ಜನಸಂಖ್ಯೆ:
ಏಷ್ಯಾ-ಪೆಸಿಫಿಕ್:ವಿಶ್ವದ ಶೇ. 99ರಷ್ಟು ಹಿಂದೂಗಳಿಗೆ ನೆಲೆಯಾಗಿರುವ ಈ ಪ್ರದೇಶದಲ್ಲಿ ಮುಂದಿನ 5 ದಶಕಗಳಲ್ಲಿ 19.1 ಕೋಟಿ ಹಿಂದೂಗಳು ಹೆಚ್ಚಾಗಲಿದ್ದು, ಒಟ್ಟು ಜನಸಂಖ್ಯೆಯಲ್ಲಿ ಇವರ ಪಾಲು ಶೇ. 26ರಿಂದ ಶೇ. 28ಕ್ಕೆ ಏರಲಿದೆ.
ಉತ್ತರ ಅಮೆರಿಕ: ಇಲ್ಲಿ ಹಿಂದೂಗಳ ಸಂಖ್ಯೆ 40 ಲಕ್ಷದಿಂದ 90 ಲಕ್ಷಕ್ಕೆ (ದ್ವಿಗುಣಕ್ಕಿಂತ ಹೆಚ್ಚು) ಏರಿಕೆಯಾಗಲಿದೆ.
ಆಫ್ರಿಕಾ ಮತ್ತು ಲ್ಯಾಟಿನ್ ಅಮೆರಿಕ: ಸಬ್-ಸಹಾರನ್ ಆಫ್ರಿಕಾ ಮತ್ತು ಲ್ಯಾಟಿನ್ ಅಮೆರಿಕದಲ್ಲಿ ಮಾತ್ರ ಹಿಂದೂ ಜನಸಂಖ್ಯೆ ಇಳಿಕೆಯಾಗುವ ಅಂದಾಜಿದೆ.
ವಲಸೆಯೇ ನಿರ್ಣಾಯಕ
ಧಾರ್ಮಿಕ ಬದಲಾವಣೆ (ಮತಾಂತರ) ಹಿಂದೂ ಜನಸಂಖ್ಯೆಯ ಮೇಲೆ ಹೆಚ್ಚಿನ ಪರಿಣಾಮ ಬೀರುವುದಿಲ್ಲ. ಹಿಂದೂಗಳಾಗಿ ಬೆಳೆದ ಶೇ. 99ರಷ್ಟು ಜನರು ವಯಸ್ಕರಾದ ಮೇಲೂ ಅದೇ ಧರ್ಮದಲ್ಲಿ ಮುಂದುವರಿಯುತ್ತಾರೆ (ಮುಸ್ಲಿಮರಲ್ಲೂ ಈ ಪ್ರಮಾಣ ಶೇ. 99ರಷ್ಟಿದ್ದರೆ, ಕ್ರೈಸ್ತರಲ್ಲಿ ಶೇ. 85 ಮತ್ತು ಬೌದ್ಧರಲ್ಲಿ ಶೇ. 83ರಷ್ಟಿದೆ). 2070ರ ವೇಳೆಗೆ ವಲಸೆಯ ಮೂಲಕ ಉತ್ತರ ಅಮೆರಿಕ, ಮಧ್ಯಪ್ರಾಚ್ಯ ಮತ್ತು ಯುರೋಪ್ ದೇಶಗಳಿಗೆ 80 ಲಕ್ಷಕ್ಕೂ ಹೆಚ್ಚು ಹಿಂದೂಗಳು ಸೇರ್ಪಡೆಯಾಗಲಿದ್ದಾರೆ.
