– ಚಿಕ್ಕಮಗಳೂರು, ಶಿವಮೊಗ್ಗ ರೈತರಿಗೆ ಆತಂಕ ಬೇಡ: ಶಿವಲಿಂಗೇಗೌಡ
ಹಾಸನ/ ಬೆಂಗಳೂರು: ಜಿಲ್ಲೆಯ ಬೇಲೂರು ತಾಲೂಕಿನಲ್ಲಿ ಇಬ್ಬರನ್ನು ಬಲಿ ಪಡೆದಿದ್ದ ಪುಂಡಾನೆಗಳನ್ನು(Wild Elephant) ಸೆರೆಹಿಡಿಯುವ ಕಾರ್ಯಾಚರಣೆ ಎರಡನೇ ದಿನವೂ ವಿಫಲವಾಗಿದೆ. ಇನ್ನೊಂದೆಡೆ, ಈ ಆನೆಗಳ ಸ್ಥಳಾಂತರ ವಿಚಾರವಾಗಿ ನೆರೆಯ ಚಿಕ್ಕಮಗಳೂರು(Chikkamagaluru) ಹಾಗೂ ಶಿವಮೊಗ್ಗ(Shivamogga) ಜಿಲ್ಲೆಯ ರೈತರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ. ಶಿವಲಿಂಗೇಗೌಡ ಅಭಯ ನೀಡಿದ್ದಾರೆ.
ಬೇಲೂರಿನ ಕಾನಹಳ್ಳಿ ಗ್ರಾಮದ ಬಳಿ ಇಬ್ಬರ ಸಾವಿಗೆ ಕಾರಣವಾಗಿದ್ದ ಎರಡು ಸಲಗಗಳು ಇದೀಗ ಹಿಂಡಿನಿಂದ ಬೇರ್ಪಟ್ಟಿವೆ. ಡ್ರೋನ್ ಕ್ಯಾಮೆರಾ(Drone Camera) ಮೂಲಕ ಅವುಗಳ ಚಲನವಲನ ಪತ್ತೆ ಹಚ್ಚಿದ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಪಶುವೈದ್ಯರು, ಕುಮ್ಕಿ (ಸಾಕಾನೆ) ಆನೆಗಳ ನೆರವಿನೊಂದಿಗೆ ಅರವಳಿಕೆ ಚುಚ್ಚುಮದ್ದು ನೀಡಲು ಮುಂದಾದರು. ಆದರೆ, ಸಾಕಾನೆಗಳು ಸಮೀಪಿಸುತ್ತಿದ್ದಂತೆಯೇ ಎರಡೂ ಸಲಗಗಳು ಕಾಡಿನೊಳಗೆ ಓಡಿಹೋಗಿವೆ. ಹೀಗಾಗಿ ಅನಿವಾರ್ಯವಾಗಿ ಇಂದಿನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ.
ಮುಂದುವರಿದ ಗಜಪಡೆ ಹಾವಳಿ:
ಆಲೂರು ತಾಲ್ಲೂಕಿನ ಬಿಳಗರವಳ್ಳಿ ಗ್ರಾಮದ ಜಾನ್ ಕ್ರಿಸ್ತಾನ್ ಎಂಬುವವರ ತೋಟಕ್ಕೆ ಲಗ್ಗೆ ಇಟ್ಟ ಎರಡು ಕಾಡಾನೆಗಳು, ಭತ್ತದ ಗದ್ದೆಗಳಿಗೆ ದಾಂಗುಡಿ ಇಟ್ಟು ಅಪಾರ ಪ್ರಮಾಣದ ಬೆಳೆ ನಾಶಪಡಿಸಿವೆ.
ಸಕಲೇಶಪುರ ತಾಲ್ಲೂಕಿನ ಬಾಳ್ಳುಪೇಟೆಯ ಪೆಟ್ರೋಲ್ ಬಂಕ್ನ ಸಮೀಪವೇ ದೈತ್ಯಾಕಾರದ ಒಂಟಿಸಲಗವೊಂದು ಕಾಣಿಸಿಕೊಂಡಿದ್ದು, ಸ್ಥಳೀಯರಲ್ಲಿ ಭೀತಿ ಮೂಡಿಸಿದೆ.
ಚಿಕ್ಕಮಗಳೂರು ತಾಲ್ಲೂಕಿನ ಮತ್ತಾವರ ಹಾಗೂ ದಂಬದಹಳ್ಳಿ ವ್ಯಾಪ್ತಿಯಲ್ಲಿ ಕಾಫಿ ಕೊಯ್ಲು ನಡೆಯುತ್ತಿರುವ ಸಂದರ್ಭದಲ್ಲೇ ಕಾಡಾನೆಗಳು ಪ್ರತ್ಯಕ್ಷವಾಗಿದ್ದು, ಬೆಳೆಗಾರರು ಹಾಗೂ ಕಾರ್ಮಿಕರು ತೋಟಕ್ಕೆ ತೆರಳಲು ಹಿಂದೇಟು ಹಾಕುವಂತಾಗಿದೆ.
ಅರಣ್ಯ ನಾಶ ಕಾರಣ:
ಕಾರ್ಯಾಚರಣೆ ಕುರಿತು ಪ್ರತಿಕ್ರಿಯಿಸಿರುವ ಸಚಿವ ರಾಮಲಿಂಗಾರೆಡ್ಡಿ, *”ಬೇಲೂರಿನಲ್ಲಿ ಹಿಂದೆ ದಟ್ಟ ಅರಣ್ಯ ಪ್ರದೇಶವಿತ್ತು. ಆದರೆ ಈಗ ಅರಣ್ಯ ನಾಶವಾಗಿರುವುದರಿಂದ ಆನೆಗಳು ಆಹಾರ ಅರಸಿ ಜನರ ತೋಟಗಳತ್ತ ಬರುತ್ತಿವೆ. ಬೇಲೂರಿನಿಂದ ಆನೆಗಳನ್ನು ಸ್ಥಳಾಂತರಿಸುವಾಗ ಚಿಕ್ಕಮಗಳೂರಿನ ಜನರಿಗೆ ಯಾವುದೇ ತೊಂದರೆಯಾಗದಂತೆ ಯೋಜನೆ ರೂಪಿಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ರೈತರಿಗೆ ಆತಂಕ ಬೇಡ:
ಕಾಡಾನೆಗಳ ಸ್ಥಳಾಂತರ ವಿಚಾರವಾಗಿ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ. ಶಿವಲಿಂಗೇಗೌಡ, ನಮ್ಮ ಕಾರ್ಯಾಚರಣೆಯ ಉದ್ದೇಶ ಕಾಡಾನೆ ಸಮಸ್ಯೆಯನ್ನು ಒಂದು ಜಿಲ್ಲೆಯಿಂದ ಮತ್ತೊಂದು ಜಿಲ್ಲೆಗೆ ವರ್ಗಾಯಿಸುವುದಲ್ಲ; ಬದಲಾಗಿ ವನ್ಯಜೀವಿ-ಮಾನವ ಸಂಘರ್ಷಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವುದಾಗಿದೆ ಎಂದು ತಿಳಿಸಿದ್ದಾರೆ.
ಬೇಲೂರು ಭಾಗದಲ್ಲಿ 10 ಪುಂಡಾನೆಗಳು ಹಾವಳಿಯಿಟ್ಟಿದ್ದು, ಇಬ್ಬರು ಮೃತಪಟ್ಟಿರುವ ಹಿನ್ನೆಲೆಯಲ್ಲಿ ತಕ್ಷಣದ ಅಪಾಯ ತಡೆಯಲು ಸೆರೆ ಕಾರ್ಯಾಚರಣೆ ಅನಿವಾರ್ಯವಾಗಿದೆ. ಭದ್ರಾ ಅಭಯಾರಣ್ಯದ ಜೊತೆಗೆ ಸತ್ಯಮಂಗಲ, ಬಂಡೀಪುರ, ನಾಗರಹೊಳೆ, ವಯನಾಡು ಹಾಗೂ ಬಿಳಿಗಿರಿರಂಗನಬೆಟ್ಟದ ಅಭಯಾರಣ್ಯಗಳಿಗೆ ಆನೆಗಳನ್ನು ಸ್ಥಳಾಂತರಿಸುವ ಬಗ್ಗೆಯೂ ಚಿಂತನೆ ನಡೆದಿದೆ.
ಆನೆಗಳ ಸಹಜ ಸಂಚಾರ ಮಾರ್ಗ, ಅರಣ್ಯದಲ್ಲಿ ವರ್ಷವಿಡೀ ಲಭ್ಯವಾಗುವ ಮೇವು-ನೀರು ಹಾಗೂ ಸುತ್ತಲಿನ ಗ್ರಾಮಗಳ ಸುರಕ್ಷತೆಯನ್ನು ಪರಿಗಣಿಸಿಯೇ ಸ್ಥಳಾಂತರದ ನಿರ್ಧಾರ ಕೈಗೊಳ್ಳಲಾಗುವುದು. ಆನೆಗಳ ಚಲನವಲನ ಪತ್ತೆಹಚ್ಚಿ ಗ್ರಾಮಸ್ಥರಿಗೆ ಮುಂಚಿತವಾಗಿ ಎಚ್ಚರಿಕೆ ನೀಡಲು ಡ್ರೋನ್, ರೇಡಿಯೋ ಕಾಲರ್ ಹಾಗೂ ಎಐ (AI) ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗುವುದು.
ವನ್ಯಜೀವಿ ತಜ್ಞರು, ಪಶುವೈದ್ಯರು ಹಾಗೂ ಅರಣ್ಯಾಧಿಕಾರಿಗಳೊಂದಿಗೆ ಸಮಾಲೋಚಿಸಿ ಶೀಘ್ರದಲ್ಲೇ ವಿಶೇಷ ಸಭೆ ನಡೆಸಲಾಗುವುದು. ಆನೆಗಳು ಕಾಡಿನಿಂದ ಹೊರಬರದಂತೆ ತಡೆಯಲು ಅರಣ್ಯದೊಳಗೇ ಸ್ಥಳೀಯ ಮೇವು ಸಸ್ಯಗಳ ಪುನರುಜ್ಜೀವನ ಮತ್ತು ನೈಸರ್ಗಿಕ ಜಲಮೂಲಗಳ ಸಂರಕ್ಷಣೆಗೆ ಆದ್ಯತೆ ನೀಡಲಾಗುವುದು ಎಂದು ಸಚಿವರು ಭರವಸೆ ನೀಡಿದ್ದಾರೆ.

