ಲಕ್ನೋ: ಉತ್ತರ ಪ್ರದೇಶದ ಕಾನ್ಪುರ(Kanpura) ಸೆಂಟ್ರಲ್ ರೈಲ್ವೆ ನಿಲ್ದಾಣದಲ್ಲಿ ಅಚ್ಚರಿಯ ಘಟನೆಯೊಂದು ನಡೆದಿದೆ. ಸಂಬಂಧಿಕರನ್ನು ಬೀಳ್ಕೊಡಲು ವಂದೇ ಭಾರತ್ ಎಕ್ಸ್ಪ್ರೆಸ್ಗೆ(Vande Bharat) ಪ್ರವೇಶಿಸಿದ 12 ಜನ ಸ್ವಯಂಚಾಲಿತ ಬಾಗಿಲುಗಳು ಮುಚ್ಚಿದ್ದರಿಂದ ರೈಲಲ್ಲೇ ಲಾಕ್ ಆಗಿದ್ದಾರೆ. ನಿಗದಿತ ನಿಲ್ದಾಣಗಳಲ್ಲಿ ಮಾತ್ರ ನಿಲುಗಡೆ ಇರುವುದರಿಂದ 140 ಕಿಮೀ ರೈಲಲ್ಲೇ ಅವರೆಲ್ಲ ಪ್ರಯಾಣಿಸಿದ್ದಾರೆ.
ರೈಲಿನಲ್ಲಿ ಸಿಲುಕಿದ್ದ ಅವರನ್ನು ಎಟಾವಾ ಜಂಕ್ಷನ್ನಲ್ಲಿ ರೈಲಿನಿಂದ ಇಳಿಸಲಾಯಿತು. ಬಳಿಕ ಅಧಿಕಾರಿಗಳು ರೈಲು ಏರಿದ್ದ ಪ್ರತಿಯೊಬ್ಬರಿಗೂ ತಲಾ 3000 ರೂ.ನಂತೆ 36,000 ರೂ. ದಂಡ ವಿಧಿಸಿದ್ದಾರೆ.
ರೈಲು ಸಂಖ್ಯೆ 22,415 ವಂದೇ ಭಾರತ್ ರೈಲು ವಾರಣಾಸಿ-ನವದೆಹಲಿ ತೆರಳುತ್ತಿತ್ತು. ಈ ರೈಲಿಗೆ ಕಾನ್ಪುರದ ವಿವಿಧ ಭಾಗಗಳಿಂದ ಬಂದಿದ್ದ 12 ಜನ, ತಮ್ಮ ಸಂಬಂಧಿಕರನ್ನು ರೈಲಿಗೆ ಹತ್ತಿಸಲು, ರೈಲು ಪ್ರವೇಶಿಸಿದ್ದರು. ಈ ವೇಳೆ ರೈಲಿನ ಸ್ವಯಂಚಾಲಿತ ಬಾಗಿಲುಗಳು ಮುಚ್ಚಿಕೊಂಡಿವೆ. ಬಳಿಕ ರೈಲು ಸಂಚಾರ ಆರಂಭಿಸಿತ್ತು. ರೈಲು ಸಂಚಾರ ಆರಂಭವಾಗುತ್ತಿದ್ದಂತೆ ಪ್ಲಾಟ್ಫಾರ್ಮ್ನಲ್ಲಿ ಕಾಯುತ್ತಿದ್ದ ಕುಟುಂಬಸ್ಥರು ಹಾಗೂ ರೈಲು ಏರಿದ್ದವರು ಆತಂಕಕ್ಕೊಳಗಾಗಿದ್ದಾರೆ.
ರೈಲು ಹೊರಡುತ್ತಿದ್ದಂತೆ ಸಿಬ್ಬಂದಿ ಬಳಿ ಬಾಗಿಲು ತೆಗೆಯುವಂತೆ ಮನವಿ ಮಾಡಿದ್ದಾರೆ. ಆದರೆ ರೈಲು ಚಲನೆಯಲ್ಲಿರುವಾಗ ಮತ್ತು ತಾಂತ್ರಿಕ ಕಾರಣಗಳಿಂದ ರೈಲಿನ ಬಾಗಿಲನ್ನು ಸಿಬ್ಬಂದಿ ತೆಗೆಯಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. ಈ ವೇಳೆ ಕೆಲವರು ಆಕ್ರೋಶ ಹೊರಹಾಕಿದ್ದಾರೆ ಎಂದು ವರದಿಯಾಗಿದೆ.
ಈ ಘಟನೆಯ ಬಗ್ಗೆ ರೈಲು ಸಿಬ್ಬಂದಿ ತುಂಡ್ಲಾ ರೈಲ್ವೆ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಿದ್ದರು. ನಿಯಂತ್ರಣ ಕೊಠಡಿಯಿಂದ ಬಂದ ಸೂಚನೆಯಂತೆ ವಂದೇ ಭಾರತ್ ಎಕ್ಸ್ಪ್ರೆಸ್ ರೈಲನ್ನು ಎಟವಾ ಜಂಕ್ಷನ್ನಲ್ಲಿ ನಿಲ್ಲಿಸಲಾಯಿತು.
ರೈಲು ನಿಲ್ಲುತ್ತಿದ್ದಂತೆ ಎಟವಾ ಜಂಕ್ಷನ್ ನಿಲ್ದಾಣದ ಸೂಪರಿಂಟೆಂಡೆಂಟ್ ಪಿ.ಎಂ. ಮೀನಾ, ರೈಲ್ವೆ ರಕ್ಷಣಾ ಪಡೆ (ಆರ್ಪಿಎಫ್) ಇನ್ಸ್ಪೆಕ್ಟರ್ ದಿನೇಶ್ ಕುಮಾರ್ ಸಿಂಗ್ ಮತ್ತು ರೈಲ್ವೆ ಪೊಲೀಸ್ (ಜಿಆರ್ಪಿ) ಇನ್ಸ್ಪೆಕ್ಟರ್ ಯದುವೀರ್ ಸಿಂಗ್ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಆಗಮಿಸಿ 12 ಜನರನ್ನು ಇಳಿಸಿದ್ದಾರೆ. ಬಳಿಕ ಆರ್ಪಿಎಫ್ ಪೋಸ್ಟ್ಗೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ.
ಟಿಕೆಟ್ ಇಲ್ಲದೇ ರೈಲಿಗೆ ಪ್ರವೇಶಿಸಿದ ಮತ್ತು ರೈಲ್ವೆ ನಿಯಮಗಳನ್ನು ಉಲ್ಲಂಘಿಸಿದ್ದಕ್ಕೆ ಎಲ್ಲರಿಗೂ ಸೇರಿ 36,000 ರೂ. ದಂಡ ವಿಧಿಸಲಾಯಿತು. ಬಳಿಕ ಅವರಿಗೆಲ್ಲ ಎಚ್ಚರಿಕೆ ನೀಡಿ ಕಳುಹಿಸಲಾಯಿತು.
ವಂದೇ ಭಾರತ್ನಂತಹ ಆಧುನಿಕ ರೈಲುಗಳಲ್ಲಿ ಪ್ರಯಾಣ ಮತ್ತು ಬೋರ್ಡಿಂಗ್ ನಿಯಮಗಳನ್ನು ಪಾಲಿಸುವ ಮಹತ್ವವನ್ನು ಈ ಘಟನೆ ಎತ್ತಿ ತೋರಿಸಿದೆ. ಸಣ್ಣ ಲೋಪ ಕೂಡ ಭಾರೀ ಯಡವಟ್ಟಿಗೆ ಹಾಗೂ ಭಾರೀ ದಂಡಕ್ಕೆ ಕಾರಣವಾಗಬಹುದು.
