– ಸ್ಯಾಂಡ್ಪೇಪರ್ ವಿವಾದಕ್ಕೆ ಹೊಸ ತಿರುವು
ಮೆಲ್ಬೋರ್ನ್: ಕ್ರಿಕೆಟ್ ಜಗತ್ತನ್ನು ಬೆಚ್ಚಿಬೀಳಿಸಿದ್ದ 2018ರ ಸ್ಯಾಂಡ್ಪೇಪರ್ಗೇಟ್ (Ball Tampering) ಹಗರಣಕ್ಕೆ ಈಗ ಮತ್ತೊಂದು ಸ್ಫೋಟಕ ತಿರುವು ಸಿಕ್ಕಿದೆ. ದಕ್ಷಿಣ ಆಫ್ರಿಕಾ(South Africa) ವಿರುದ್ಧದ ಕೇಪ್ ಟೌನ್ ಟೆಸ್ಟ್ ಪಂದ್ಯದ ವೇಳೆ ಚೆಂಡನ್ನು ವಿರೂಪಗೊಳಿಸುವ ಸಂಚಿನ ಬಗ್ಗೆ ಇಡೀ ಆಸ್ಟ್ರೇಲಿಯಾ(Australia) ತಂಡಕ್ಕೆ ತಿಳಿದಿತ್ತು ಎಂಬ ಉಸ್ಮಾನ್ ಖವಾಜಾ ಅವರ ಆರೋಪವನ್ನು ಆರಂಭಿಕ ಆಟಗಾರ ಕ್ಯಾಮರೂನ್ ಬ್ಯಾಂಕ್ರಾಫ್ಟ್(Cameron Bancroft) ಬೆಂಬಲಿಸಿದ್ದಾರೆ.
‘ದಿ ವೆಸ್ಟ್ ಆಸ್ಟ್ರೇಲಿಯನ್’ ಪತ್ರಿಕೆಗಾಗಿ ಬರೆದಿರುವ 4,000 ಪದಗಳ ಸುದೀರ್ಘ ಲೇಖನದಲ್ಲಿ ಬ್ಯಾಂಕ್ರಾಫ್ಟ್ ಈ ಸ್ಫೋಟಕ ಸತ್ಯಗಳನ್ನು ಬಿಚ್ಚಿಟ್ಟಿದ್ದಾರೆ. ಇತ್ತೀಚೆಗೆ ಉಸ್ಮಾನ್ ಖವಾಜಾ ತಮ್ಮ ಆತ್ಮಚರಿತ್ರೆ ಸಬ್ರ್ನಲ್ಲಿ(Sabr) ಬಾಲ್ ಟ್ಯಾಂಪರಿಂಗ್ ಯೋಜನೆಯ ಬಗ್ಗೆ ತಂಡದ ಪ್ರತಿಯೊಬ್ಬ ಸದಸ್ಯನಿಗೂ ಅರಿವಿತ್ತು ಎಂದು ಉಲ್ಲೇಖಿಸಿದ್ದರು.
ಈ ವಿಚಾರವನ್ನು ಸಂಪೂರ್ಣವಾಗಿ ಸಮರ್ಥಿಸಿಕೊಂಡಿರುವ ಬ್ಯಾಂಕ್ರಾಫ್ಟ್, “ದಕ್ಷಿಣ ಆಫ್ರಿಕಾದಲ್ಲಿ ನಾನು ಚೆಂಡಿಗೆ ಸ್ಯಾಂಡ್ಪೇಪರ್(Sandpaper) ಉಜ್ಜುತ್ತಿದ್ದ ವಿಷಯ ಕೇವಲ ಸ್ಟೀವ್ ಸ್ಮಿತ್, ಡೇವಿಡ್ ವಾರ್ನರ್ ಮತ್ತು ನನಗೆ ಮಾತ್ರ ತಿಳಿದಿರಲಿಲ್ಲ. ಅದು ಇಡೀ ತಂಡಕ್ಕೆ ತಿಳಿದಿತ್ತು” ಎಂದು ಬರೆದುಕೊಂಡಿದ್ದಾರೆ.
2018ರಲ್ಲಿ ಕ್ರಿಕೆಟ್ ಆಸ್ಟ್ರೇಲಿಯಾ ನಡೆಸಿದ ಪ್ರಾಥಮಿಕ ತನಿಖೆಯ ವೇಳೆ ತಾವು ಸಂಪೂರ್ಣ ಮತ್ತು ಸತ್ಯವಾದ ಮಾಹಿತಿಯನ್ನು ನೀಡಿರಲಿಲ್ಲ ಎಂದು ಬ್ಯಾಂಕ್ರಾಫ್ಟ್ ಒಪ್ಪಿಕೊಂಡಿದ್ದಾರೆ. ಸಹ ಆಟಗಾರರನ್ನು ರಕ್ಷಿಸುವ ಉದ್ದೇಶದಿಂದ ಪ್ರಮುಖ ವಿವರಗಳನ್ನು ಮುಚ್ಚಿಟ್ಟಿದ್ದಾಗಿ ಅವರು ಹೇಳಿದ್ದಾರೆ.
ಪಂದ್ಯದ ವೇಳೆ ವೇಗದ ಬೌಲರ್ಗಳೊಂದಿಗೆ ನಡೆದ ಸಂಭಾಷಣೆಯನ್ನು ನೆನಪಿಸಿಕೊಂಡಿರುವ ಅವರು, “ಚೆಂಡು ಸರಿಯಾಗಿ ರಿವರ್ಸ್ ಸ್ವಿಂಗ್ ಆಗುತ್ತಿದೆಯೇ ಎಂದು ನಾನು ವೇಗದ ಬೌಲರ್ಗಳಾದ ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟಾರ್ಕ್, ಜೋಶ್ ಹ್ಯಾಜಲ್ವುಡ್ ಮತ್ತು ಮಿಚೆಲ್ ಮಾರ್ಷ್ ಅವರೊಂದಿಗೆ ಮಾತನಾಡಿದ್ದೆ. ಚೆಂಡಿನ ಮೇಲೆ ನಾನು ಮಾಡುತ್ತಿದ್ದ ಕೆಲಸ ಫಲ ನೀಡುತ್ತಿದೆಯೇ ಎಂಬ ಬಗ್ಗೆ ಎಲ್ಲಾ ಬೌಲರ್ಗಳು ನನಗೆ ಪ್ರತಿಕ್ರಿಯೆ ನೀಡುತ್ತಿದ್ದರು. ʼಚೆಂಡು ಇನ್ನೂ ಸ್ವಿಂಗ್ ಆಗುತ್ತಿಲ್ಲ, ಇನ್ನಷ್ಟು ಉಜ್ಜಬೇಕು’ ಎಂದು ಅವರು ಹೇಳುತ್ತಿದ್ದರು. ಅದರಂತೆ ನಾನು ಚೆಂಡಿಗೆ ಮತ್ತಷ್ಟು ಸ್ಯಾಂಡ್ಪೇಪರ್ ಬಳಸುತ್ತಿದ್ದೆ” ಎಂದು ಗಂಭೀರ ಆರೋಪ ಮಾಡಿದ್ದಾರೆ.
2018ರ ಆ ಪಂದ್ಯದಲ್ಲಿ ಸ್ಯಾಂಡ್ಪೇಪರ್ ಬಳಸುತ್ತಿದ್ದಾಗ ಕ್ಯಾಮೆರಾ ಕಣ್ಣಿಗೆ ಸಿಕ್ಕಿಬಿದ್ದಿದ್ದ ಬ್ಯಾಂಕ್ರಾಫ್ಟ್ ಅವರಿಗೆ 9 ತಿಂಗಳು ಹಾಗೂ ನಾಯಕ ಸ್ಟೀವ್ ಸ್ಮಿತ್ ಮತ್ತು ಉಪನಾಯಕ ಡೇವಿಡ್ ವಾರ್ನರ್ ಅವರಿಗೆ ತಲಾ 12 ತಿಂಗಳು ನಿಷೇಧ ಹೇರಲಾಗಿತ್ತು. ಆದರೆ, ಕ್ರಿಕೆಟ್ ಆಸ್ಟ್ರೇಲಿಯಾದ ತನಿಖೆಯಲ್ಲಿ ಬೇರೆ ಯಾವ ಆಟಗಾರರ ಹೆಸರೂ ಕೇಳಿಬಂದಿರಲಿಲ್ಲ.
ಕಮಿನ್ಸ್ ವಿರುದ್ಧ ಅಸಮಾಧಾನ:
ಕಳೆದ ವಾರ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್ ಸುದ್ದಿಗೋಷ್ಠಿ ನಡೆಸಿ, ಸ್ಯಾಂಡ್ಪೇಪರ್ ಯೋಜನೆಯ ಬಗ್ಗೆ ತಮಗೆ ಏನೂ ತಿಳಿದಿರಲಿಲ್ಲ ಎಂದು ಹೇಳಿದ್ದರು ಹಾಗೂ ಖವಾಜಾ ಅವರ ಆತ್ಮಚರಿತ್ರೆಯ ಆರೋಪಗಳನ್ನು ಸಾರಾಸಗಟಾಗಿ ತಳ್ಳಿಹಾಕಿದ್ದರು. ಕಮಿನ್ಸ್ ಅವರ ಈ ಹೇಳಿಕೆಯಿಂದ ತಮಗೆ ದ್ರೋಹ ಬಗೆದಂತಾಗಿದೆ ಎಂದು ಬ್ಯಾಂಕ್ರಾಫ್ಟ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಘಟನೆಗಳ ನೈಜ ಸತ್ಯಾಂಶ ಕೊನೆಗೂ ಹೊರಬಂದಿರುವುದು ವೈಯಕ್ತಿಕವಾಗಿ ನನಗೆ ದೊಡ್ಡ ನಿರಾಳತೆ ತಂದಿದೆ. ಇಷ್ಟು ವರ್ಷ ನಾನು ಹೊತ್ತಿದ್ದ ಭಾರ ಇಳಿದಂತಾಗಿದೆ. ಆದರೆ, ಪ್ಯಾಟ್ ಕಮಿನ್ಸ್ ಅವರ ಸುದ್ದಿಗೋಷ್ಠಿಯು ನಾನು ಈ ಲೇಖನ ಬರೆಯಲು ಮುಖ್ಯ ಕಾರಣವಾಯಿತು. ಅವರ ಮಾತುಗಳು ನನಗೆ ಕೋಪ, ದ್ರೋಹ ಮತ್ತು ಒಂಟಿತನದ ಭಾವನೆ ಮೂಡಿಸಿದವು ಎಂದು ಬ್ಯಾಂಕ್ರಾಫ್ಟ್ ನೋವು ತೋಡಿಕೊಂಡಿದ್ದಾರೆ.
ಇಡೀ ಘಟನೆಯ ಹೊಣೆಯನ್ನು ತಮ್ಮ ಮೇಲೆ ಮಾತ್ರ ಹೊರಿಸಲಾಯಿತು ಎಂದಿರುವ ಬ್ಯಾಂಕ್ರಾಫ್ಟ್”ಕೊನೆಗೆ ನಾನು ಇಡೀ ತಂಡದ ಪರವಾಗಿ ಬಲಿಪಶುವಾದೆ” ಎಂದು ತಮ್ಮ ಲೇಖನವನ್ನು ಮುಗಿಸಿದ್ದಾರೆ.
🚨SANDPAPER INCIDENT IS NOW COMING BACK SO LET’S REVISIT IT👀
Main Incident Video – Bancroft uses Sandpaper to tamper the ball and tries to hide it. Full Clip. https://t.co/4NNkUEmVsN
— Footvoski (@CRICBALLY) November 18, 2026
ಸ್ವತಂತ್ರ ವೇದಿಕೆ ಸ್ಥಾಪನೆ:
ಆಟಗಾರರ ನಡುವಿನ ವಾಕ್ಸಮರ ತೀವ್ರಗೊಂಡ ಹಿನ್ನೆಲೆಯಲ್ಲಿ ಕ್ರಿಕೆಟ್ ಆಸ್ಟ್ರೇಲಿಯಾ (CA) ಒಂದು ಮಹತ್ವದ ನಿರ್ಧಾರ ಪ್ರಕಟಿಸಿದೆ. 2018ರ ಘಟನೆಯಲ್ಲಿ ಭಾಗಿಯಾಗಿದ್ದ ಆಟಗಾರರು ಮತ್ತು ಸಿಬ್ಬಂದಿ ತಮ್ಮ ನಿಜವಾದ ಅನುಭವಗಳನ್ನು ಹಂಚಿಕೊಳ್ಳಲು ಒಂದು ‘ಸ್ವತಂತ್ರ ವೇದಿಕೆ’ಯನ್ನು ಸ್ಥಾಪಿಸುವುದಾಗಿ ಮಂಡಳಿ ತಿಳಿಸಿದೆ.
ಬೆಳಕಿಗೆ ಬಂದಿದ್ದು ಹೇಗೆ?
2018ರ ಕೇಪ್ ಟೌನ್ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾದ ಆಟಗಾರರು ಕಳ್ಳಾಟವಾಡಿದ್ದರು. ಪಂದ್ಯದ 3ನೇ ದಿನ ಆಸ್ಟ್ರೇಲಿಯಾ ಬೌಲರ್ಗಳು ಅಸಹಜ ರೀತಿಯಲ್ಲಿ ‘ರಿವರ್ಸ್ ಸ್ವಿಂಗ್’ ಮಾಡುತ್ತಿದ್ದರು. ಇದನ್ನು ಗಮನಿಸಿದ ಕ್ಯಾಮೆರಾ ಮ್ಯಾನ್ಗಳು, ಮೈದಾನದಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಆಸ್ಟ್ರೇಲಿಯಾ ಆಟಗಾರರ ಮೇಲೆ ಹದ್ದಿನ ಕಣ್ಣಿಟ್ಟರು.
ಆಸ್ಟ್ರೇಲಿಯಾದ ಕಿರಿಯ ಆಟಗಾರ ಕ್ಯಾಮರೂನ್ ಬ್ಯಾಂಕ್ರಾಫ್ಟ್ ತಮ್ಮ ಜೇಬಿನಿಂದ ಹಳದಿ ಬಣ್ಣದ ಸಣ್ಣ ವಸ್ತುವನ್ನು ಸ್ಯಾಂಡ್ಪೇಪರ್ ತೆಗೆದು ಚೆಂಡನ್ನು ಉಜ್ಜುತ್ತಿರುವುದು ಸೂಪರ್-ಸ್ಲೋ ಮೋಷನ್ ಕ್ಯಾಮೆರಾದಲ್ಲಿ ಸ್ಪಷ್ಟವಾಗಿ ಸೆರೆಯಾಗಿತ್ತು. ದೃಶ್ಯವನ್ನು ಮೈದಾನದ ದೊಡ್ಡ ಪರದೆಯ ಮೇಲೆ ಪ್ರಸಾರ ಮಾಡಲಾಯಿತು.
ಇದನ್ನು ಗಮನಿಸಿದ ತಕ್ಷಣ ಆಸ್ಟ್ರೇಲಿಯಾ ಕೋಚ್ ಡ್ಯಾರೆನ್ ಲೆಹ್ಮನ್ ವಾಕಿ-ಟಾಕಿ ಮೂಲಕ ಮೈದಾನದಲ್ಲಿದ್ದ ಆಟಗಾರರಿಗೆ ಸಂದೇಶ ಕಳುಹಿಸಿದರು. ಅಂಪೈರ್ಗಳು ಬಂದು ವಿಚಾರಿಸುವಷ್ಟರಲ್ಲಿ ಬ್ಯಾಂಕ್ರಾಫ್ಟ್ ಆ ಹಳದಿ ಕಾಗದವನ್ನು ತಮ್ಮ ಪ್ಯಾಂಟ್ನ ಒಳಗೆ ಬಚ್ಚಿಟ್ಟು, ಜೇಬಿನಲ್ಲಿದ್ದ ಕಪ್ಪು ಬಣ್ಣದ ಕನ್ನಡಕದ ಬಟ್ಟೆಯನ್ನು ತೋರಿಸಿ ಅಂಪೈರ್ಗಳನ್ನು ನಂಬಿಸಲು ಪ್ರಯತ್ನಿಸಿದರು. ಆದರೆ ಅಷ್ಟರಲ್ಲಾಗಲೇ ಅವರ ಕಳ್ಳಾಟ ಇಡೀ ಜಗತ್ತಿಗೆ ಗೊತ್ತಾಗಿತ್ತು.
