ನವದೆಹಲಿ: ಭಾರತದ ಪೌರತ್ವ ಪಡೆಯುವ ಮೊದಲೇ ಸೋನಿಯಾ ಗಾಂಧಿ (Sonia Gandhi) ಅವರ ಹೆಸರು ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗಿತ್ತು ಎಂಬ ಆರೋಪಕ್ಕೆ ಸಂಬಂಧಿಸಿದ ದೂರಿನ ಬಗ್ಗೆ ದೆಹಲಿ ನ್ಯಾಯಾಲಯವು (Delhi Court) ಪೊಲೀಸರಿಂದ ವರದಿ ಕೇಳಿದೆ.
ಈ ಸಂಬಂಧ ಸಲ್ಲಿಕೆಯಾಗಿರುವ ದೂರಿನ ಕುರಿತು ತನಿಖೆ ನಡೆಸಿ, ಪ್ರಕರಣದ ಸ್ಥಿತಿಗತಿ ಕುರಿತು ವರದಿ ಸಲ್ಲಿಸುವಂತೆ ನ್ಯಾಯಾಲಯವು ಪೊಲೀಸರಿಗೆ ಸೂಚಿಸಿದೆ.
ದೂರುದಾರ ವಿಕಾಸ್ ತ್ರಿಪಾಠಿ ಅವರು ಸೋನಿಯಾ ಗಾಂಧಿ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. 1980ರಲ್ಲಿ ನವದೆಹಲಿ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಸೋನಿಯಾ ಗಾಂಧಿ ಅವರ ಹೆಸರು ಸೇರ್ಪಡೆಯಾಗಿತ್ತು. ಆದರೆ ಅವರು 1983ರ ಏಪ್ರಿಲ್ನಲ್ಲಿ ಭಾರತೀಯ ಪೌರತ್ವ ಪಡೆದಿದ್ದರು ಎಂಬುದು ದೂರುದಾರರ ವಾದವಾಗಿದೆ.
1980ರಲ್ಲಿ ಮತದಾರರ ಪಟ್ಟಿಗೆ ಸೇರ್ಪಡೆಯಾಗಿದ್ದ ಹೆಸರು 1982ರಲ್ಲಿ ತೆಗೆದುಹಾಕಲಾಗಿತ್ತು. ಬಳಿಕ 1983ರಲ್ಲಿ ಮತ್ತೆ ಸೇರ್ಪಡೆಯಾಗಿತ್ತು ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ. ಈ ಪ್ರಕ್ರಿಯೆಯಲ್ಲಿ ನಕಲಿ ದಾಖಲೆಗಳನ್ನು ಬಳಸಲಾಗಿದೆ ಎಂಬುದು ದೂರುದಾರರ ಮತ್ತೊಂದು ಆರೋಪವಾಗಿದೆ.
ಈ ಹಿಂದೆ 2025ರ ಸೆಪ್ಟೆಂಬರ್ 11ರಂದು ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಎಫ್ಐಆರ್ ದಾಖಲಿಸುವಂತೆ ಕೋರಿ ಸಲ್ಲಿಸಿದ್ದ ದೂರನ್ನು ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ವಿಕಾಸ್ ತ್ರಿಪಾಠಿ ಸೆಷನ್ಸ್ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದರು.ಇದನ್ನೂ ಓದಿ: ಕಂಟೋನ್ಮೆಂಟ್ ಪಶು ಆಸ್ಪತ್ರೆಗೆ ಸಚಿವ ಪುಟ್ಟರಂಗ ಶೆಟ್ಟಿ ದಿಢೀರ್ ಭೇಟಿ: ಕರ್ತವ್ಯಕ್ಕೆ ಗೈರಾದ ಅಧಿಕಾರಿಗೆ ನೋಟಿಸ್ ಬಿಸಿ
2026ರ ಸೆಪ್ಟೆಂಬರ್ 21ರಂದು ಸೆಷನ್ಸ್ ನ್ಯಾಯಾಧೀಶ ವಿಶಾಲ್ ಗೋಗೆ ಅವರು ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಹಿಂದಿನ ಆದೇಶವನ್ನು ರದ್ದುಗೊಳಿಸಿ, ಪ್ರಕರಣವನ್ನು ಮರುಪರಿಶೀಲನೆಗಾಗಿ ಹಿಂದಿರುಗಿಸಿದ್ದರು. ದೂರುದಾರ ಮತ್ತು ಪೊಲೀಸರ ವಾದ ಆಲಿಸಿ, ಸೂಕ್ತ ಕಾರಣಗಳೊಂದಿಗೆ ಹೊಸ ಆದೇಶ ನೀಡುವಂತೆ ಸೂಚಿಸಿದ್ದರು.
ಇದೀಗ ರೋಸ್ ಅವೆನ್ಯೂ ನ್ಯಾಯಾಲಯದ ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ವಿನೋದ್ ಜೋಶಿ ಅವರು ದೆಹಲಿ ಪೊಲೀಸರಿಂದ ಕ್ರಮ ಕೈಗೊಂಡ ವರದಿ (ಎಟಿಆರ್) ಕೇಳಿದ್ದಾರೆ. ನವೆಂಬರ್ 28ರಂದು ಪ್ರಕರಣದ ಮುಂದಿನ ವಿಚಾರಣೆ ನಡೆಯಲಿದೆ.
ಆರೋಪಗಳನ್ನು ಸೋನಿಯಾ ಗಾಂಧಿ ನಿರಾಕರಿಸಿದ್ದು, ದೂರು ಆಧಾರರಹಿತ, ರಾಜಕೀಯ ಪ್ರೇರಿತ ಮತ್ತು ಕಾನೂನು ಪ್ರಕ್ರಿಯೆಯ ದುರುಪಯೋಗ ಎಂದು ಆಕ್ಷೇಪಿಸಿದ್ದಾರೆ. ಅಲ್ಲದೆ, ಆರೋಪಗಳಿಗೆ ಯಾವುದೇ ಸಮರ್ಥ ದಾಖಲೆಗಳನ್ನು ಒದಗಿಸಿಲ್ಲ ಎಂದು ವಾದಿಸಿದ್ದಾರೆ.ಇದನ್ನೂ ಓದಿ: ಕಂಟೋನ್ಮೆಂಟ್ ಪಶು ಆಸ್ಪತ್ರೆಗೆ ಸಚಿವ ಪುಟ್ಟರಂಗ ಶೆಟ್ಟಿ ದಿಢೀರ್ ಭೇಟಿ: ಕರ್ತವ್ಯಕ್ಕೆ ಗೈರಾದ ಅಧಿಕಾರಿಗೆ ನೋಟಿಸ್ ಬಿಸಿ
