– ಮಸೀದಿಯೊಳಗಿಂದಲೇ ಗುಂಡಿನ ದಾಳಿ; ಮುಝೆ ಅಲ್ಲಾ ಸೆ ಮುಲಾಕಾತ್ ಕರ್ನಾ ಹೈ ಎಂದ ಉಗ್ರ
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ (Kulgam) ಜಿಲ್ಲೆಯಲ್ಲಿ ಬುಧವಾರ ಬೆಳಗ್ಗೆ ಭದ್ರತಾ ಪಡೆಗಳು ಹಾಗೂ ಉಗ್ರರ ನಡುವೆ ಮತ್ತೆ ಗುಂಡಿನ ಚಕಮಕಿ ಆರಂಭವಾಗಿದೆ. ಈ ವೇಳೆ ಲಷ್ಕರ್-ಎ-ತೊಯ್ಬಾ ಉಗ್ರ ಸಂಘಟನೆಯ ಕಮಾಂಡರ್ ಲತೀಫ್ ಭಟ್ (Lateef Bhat) ಭದ್ರತಾ ಪಡೆಗಳ ಬಲೆಗೆ ಸಿಲುಕಿದ್ದಾನೆ. ಆತ ಸ್ಥಳೀಯ ಮಸೀದಿಯೊಂದರಲ್ಲಿ ಅಡಗಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ನವೆಂಬರ್ 11ರಂದು ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (CRPF) ಚೆಕ್ಪೋಸ್ಟ್ ಮೇಲೆ ನಡೆದ ದಾಳಿಯ ಹಿಂದೆ ಲತೀಫ್ ಭಟ್ ಕೈವಾಡ ಇರೋದು ಕಂಡುಬಂದಿದೆ. ಈ ದಾಳಿಯಲ್ಲಿ ಮೂವರು ಸಿಆರ್ಪಿಎಫ್ ಸಿಬ್ಬಂದಿ ಗಾಯಗೊಂಡಿದ್ದರು.

ಸದ್ಯ ಕುಲ್ಗಾಮ್ನ ಮಸೀದಿಯಲ್ಲಿ ಅಡಗಿರುವ ಉಗ್ರನನ್ನ (Lashkar Terrorist) ಶರಣಾಗುವಂತೆ ಮಾಡಲು ಭದ್ರತಾ ಪಡೆಗಳು ವಿಡಿಯೋ ಕಾಲ್ ಮೂಲಕ ಸಂಪರ್ಕಿಸಿ ಎಚ್ಚರಿಕೆ ನೀಡಿವೆ. ಈ ವೇಳೆ ಅಧಿಕಾರಿಯೊಬ್ಬರು, ಹಮ್ ತುಮ್ಹಾರೆ ಸಾಥ್ ಹೈ (ನಾವು ನಿನ್ನೊಂದಿಗಿದ್ದೇವೆ) ಎಂದು ಹೇಳಿರುವುದು ಕೇಳಿಬಂದಿದೆ. ಆದರೆ, ಶರಣಾಗತಿಗೆ ನಿರಾಕರಿಸಿದ ಲತೀಫ್ ಭಟ್, ʻಮುಝೆ ಅಲ್ಲಾ ಸೆ ಮುಲಾಕಾತ್ ಕರ್ನಾ ಹೈ, ಮೈ ಬಹುತ್ ಖುಷ್ ಹೂಂ (ನಾನು ಅಲ್ಲಾಹನನ್ನು ಭೇಟಿಯಾಗಬೇಕು, ನನಗೆ ತುಂಬಾ ಸಂತೋಷವಾಗಿದೆ)ʼ ಎಂದು ಪ್ರತಿಕ್ರಿಯಿಸಿದ್ದಾನೆ. ಇದು ಆತ ಸಾಯಲು ರೆಡಿಯಾಗಿದ್ದಾನೆ ಎಂಬುದನ್ನು ಸೂಚಿಸುತ್ತೆ.
ಈ ಬಗ್ಗೆ ಮಾಹಿತಿ ನೀಡಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ಮಸೀದಿಯೊಳಗಿನಿಂದ ಲತೀಫ್ ಭಟ್ ಭದ್ರತಾ ಪಡೆಗಳ ಮೇಲೆ ಗುಂಡಿನ ದಾಳಿ ನಡೆಸುತ್ತಿದ್ದಾನೆ. ಬುಧವಾರ ಮುಂಜಾನೆ ಕೂಡ ಗುಂಡಿನ ಸದ್ದು ಕೇಳಿಬಂದಿದ್ದು, ಕುಲ್ಗಾಮ್ನ ಹಲವು ಗ್ರಾಮಗಳಲ್ಲಿ ಭದ್ರತಾ ಪಡೆಗಳು ಕಾರ್ಯಾಚರಣೆ ತೀವ್ರಗೊಳಿಸಿವೆ ಎಂದು ತಿಳಿಸಿದ್ದಾರೆ.

ಎನ್ಕೌಂಟರ್ನಲ್ಲಿ ಉಮರ್ ನಿಸಾರ್ ದಾರ್ ಹತ್ಯೆ
ಲತೀಫ್ ಭಟ್ನ ಸಹಚರ ಉಮರ್ ನಿಸಾರ್ ದಾರ್ ಸೋಮವಾರ ಕುಲ್ಗಾಮ್ನಲ್ಲಿ ನಡೆದ ಎನ್ಕೌಂಟರ್ನಲ್ಲಿ ಹತನಾಗಿದ್ದಾನೆ. ಮಂಗಳವಾರ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನ ಬಿಡುಗಡೆ ಮಾಡಿದ್ದು, ನವೆಂಬರ್ 11ರಂದು ಸಿಆರ್ಪಿಎಫ್ ಚೆಕ್ಪೋಸ್ಟ್ ಮೇಲೆ ದಾಳಿ ನಡೆಸುವ ಮುನ್ನ ಉಮರ್ ದಾರ್ ಮತ್ತು ಲತೀಫ್ ಭಟ್ ಸ್ಥಳಗಳ ಪರಿಶೀಲನೆ ನಡೆಸುತ್ತಿರುವ ದೃಶ್ಯಗಳು ಸೆರೆಯಾಗಿವೆ.
ದಾಳಿಯ ಬಳಿಕ ಪೊಲೀಸರು ವ್ಯಾಪಕ ಶೋಧ ಮತ್ತು ಸುತ್ತುವರಿದ ಕಾರ್ಯಾಚರಣೆ ಆರಂಭಿಸಿದ್ದು, ವಿಚಾರಣೆಗಾಗಿ 500ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ.
ದಾಳಿಗೂ ಮುನ್ನ ಹಲವು ಸ್ಥಳಗಳಲ್ಲಿ ಪರಿಶೀಲನೆ
ನವೆಂಬರ್ 11ರ ದಾಳಿಯ ತನಿಖೆ ವೇಳೆ ಉಮರ್ ನಿಸಾರ್ ದಾರ್ ಸ್ಥಳೀಯ ನಿವಾಸಿಯಾಗಿದ್ದು, ಲತೀಫ್ ಭಟ್ ಜೊತೆಗೆ ಹಲವು ಪ್ರದೇಶಗಳಲ್ಲಿ ಸಂಚರಿಸಿ ದಾಳಿಗೆ ಸೂಕ್ತ ಸ್ಥಳಗಳನ್ನ ಗುರುತಿಸಿದ್ದ ಎಂಬುದು ತನಿಖೆಯಿಂದ ತಿಳಿದುಬಂದಿದೆ. ನವೆಂಬರ್ 10ರಂದು ಉಮರ್ ದಾರ್ ಮತ್ತು ಲಷ್ಕರ್ ಕಮಾಂಡರ್ ಲತೀಫ್ ಭಟ್ ಮಿರ್ ಬಜಾರ್, ಅಖ್ರನ್, ಹಬ್ಲಿಶ್ ಹಾಗೂ ಕಿಲಂ ಸೇರಿದಂತೆ ಹಲವು ಪ್ರದೇಶಗಳಲ್ಲಿ ಸಂಚರಿಸಿ ಭದ್ರತಾ ಪಡೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲು ಸ್ಥಳಗಳ ಪರಿಶೀಲನೆ ನಡೆಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಮರುದಿನ ಅಖ್ರನ್ನಲ್ಲಿರುವ ಸಿಆರ್ಪಿಎಫ್ ಚೆಕ್ಪೋಸ್ಟ್ ಮೇಲೆ ದಾಳಿ ನಡೆಸಿ ಅಲ್ಲಿಂದ ಪರಾರಿಯಾಗಿದ್ದರು. ಬಳಿಕ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ಪೊಲೀಸರು ಇಬ್ಬರ ಗುರುತನ್ನು ಪತ್ತೆಹಚ್ಚಿದ್ದರು. ಉಮರ್ ದಾರ್ ನಾಪತ್ತೆಯಾದ ಹಿನ್ನೆಲೆ ಆತನ ಕುಟುಂಬಸ್ಥರು ಕುಲ್ಗಾಮ್ನ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು. ತನಿಖೆಯ ವೇಳೆ ಕಳೆದ 5-6 ತಿಂಗಳಿನಿಂದ ಉಮರ್ ದಾರ್, ಲತೀಫ್ ಭಟ್ಗೆ ಆಶ್ರಯ ಹಾಗೂ ಇತರ ಅಗತ್ಯ ನೆರವು ಒದಗಿಸುತ್ತಿದ್ದ ಎಂಬುದು ತಿಳಿದುಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.
ಪೊಲೀಸ್ ಸಿಬ್ಬಂದಿ ಹತ್ಯೆ ಪ್ರಕರಣದಲ್ಲೂ ಭಾಗಿ ಆರೋಪ
ಲತೀಫ್ ಭಟ್ ಸ್ಥಳೀಯವಾಗಿ ಉಗ್ರ ಸಂಘಟನೆಗೆ ಸೇರ್ಪಡೆಯಾಗಿದ್ದವನಾಗಿದ್ದು, ಜುಲೈ 22ರಂದು ಅನಂತನಾಗ್ನಲ್ಲಿ ಪೊಲೀಸರ ಮೇಲೆ ನಡೆದ ಉಗ್ರರ ದಾಳಿಯಲ್ಲೂ ಭಾಗಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ. ಆ ದಾಳಿಯಲ್ಲಿ ಓರ್ವ ಪೊಲೀಸ್ ಸಿಬ್ಬಂದಿ ಕರ್ತವ್ಯದ ವೇಳೆ ಮೃತಪಟ್ಟಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
