ಶ್ರೀನಗರ (ಕುಲ್ಗಾಮ್): ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ (Kulgam) ಜಿಲ್ಲೆಯಲ್ಲಿಂದು ಬೆಳ್ಳಂಬೆಳಗ್ಗೆ ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ ಗುಂಡಿನ ದಾಳಿ (Encounter) ನಡೆದಿದ್ದು, ಈ ಪ್ರದೇಶದಲ್ಲಿ ವ್ಯಾಪಕ ಶೋಧ ಕಾರ್ಯ ಆರಂಭವಾಗಿದೆ.
ಕುಲ್ಗಾಮ್ನಲ್ಲಿ ಓರ್ವ ಉಗ್ರ ಸಾವನ್ನಪ್ಪಿದ 2 ದಿನಗಳ ನಂತರ ಗುಂಡಿನ ಚಕಮಕಿ ನಡೆದಿದ್ದು, ಲಷ್ಕರ್-ಎ-ತೈಬಾ (LeT) ಕಮಾಂಡರ್ ಲತೀಫ್ ಭಟ್ಗಾಗಿ (Lateef Bhat) ಹುಡುಕಾಟ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಟಾಪ್ ಕಮಾಂಡರ್ ಸಿಕ್ಕಿಬಿದ್ದಿರುವ ಶಂಕೆ
ಇತ್ತೀಚಿನ ಭಯೋತ್ಪಾದಕ ದಾಳಿ ನಡೆದ ಸ್ಥಳದಿಂದ ಕೇವಲ 1 ಕಿಲೋಮೀಟರ್ ದೂರದಲ್ಲಿರುವ ಕುಲ್ಗಾಮ್ ಜಿಲ್ಲೆಯ ಜಂಗಲ್ಪೋರಾ ಗ್ರಾಮದಲ್ಲಿ ಹೊಸ ಎನ್ಕೌಂಟರ್ ನಡೆದಿದೆ. ಪೊಲೀಸ್ ಮೂಲಗಳ ಪ್ರಕಾರ, ಕುಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಎಲ್ಇಟಿ ಕಮಾಂಡರ್ಗಾಗಿ (Lashkar Commander) ಹುಡುಕಾಟ ತೀವ್ರಗೊಂಡಿದೆ, ಈ ಮಧ್ಯೆ ಆತ ಸಿಕ್ಕಿಬಿದ್ದಿದಾನೆ ಎಂದೂ ಕೂಡ ನಂಬಲಾಗಿದೆ. ಆದ್ರೆ ಸಿಕ್ಕಿಬಿದ್ದಿರುವ ಬಗ್ಗೆ ಅಧಿಕಾರಿಗಳಿಂದ ಅಧಿಕೃತ ಹೇಳಿಕೆ ಬಿಡುಗಡೆ ಆಗಿಲ್ಲ.

ಕುಲ್ಗಾಮ್ನಲ್ಲಿ ಭಯೋತ್ಪಾದಕರು ಮತ್ತು ಜೆಕೆಪಿ ಮತ್ತು ಎಸ್ಎಫ್ನ ಜಂಟಿ ಗುಂಪುಗಳೊಂದಿಗೆ ಎನ್ಕೌಂಟರ್ ಪ್ರಾರಂಭವಾಯಿತು ಎಂದು ಕಾಶ್ಮೀರ ವಲಯ ಪೊಲೀಸರು ಎಕ್ಸ್ನಲ್ಲಿ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
ಲತೀಫ್ ಭಟ್ಗಾಗಿ ಹುಡುಕಾಟ ತೀವ್ರ
ನವೆಂಬರ್ 11 ರಂದು ಕುಲ್ಗಾಮ್ನಲ್ಲಿ ಸಿಆರ್ಪಿಎಫ್ ಸಿಬ್ಬಂದಿ ಮೇಲೆ ನಡೆದ ದಾಳಿಯಲ್ಲಿ ಭಾಗಿಯಾಗಿದ್ದ ಆರೋಪದ ಮೇಲೆ ಸೋಮವಾರ ಭದ್ರತಾ ಪಡೆಗಳು ಉಮರ್ ನಿಸಾರ್ ದಾರ್ನನ್ನ ಹತ್ಯೆಗೈದಿದ್ದವು. ಆದಾಗ್ಯೂ, ಲಾರು ಬೈಪಾಸ್ ಪ್ರದೇಶದಲ್ಲಿ ಕಾರ್ಯಾಚರಣೆಯ ಸಮಯದಲ್ಲಿ ಮತ್ತೊಬ್ಬ ಉಗ್ರ ಲತೀಫ್ ಭಟ್ ಕಾರ್ಡನ್ನಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದ. ಸದ್ಯ ಲತೀಫ್ ಭಟ್ ಮೋಸ್ಟ್ ವಾಂಟೆಡ್ ಉಗ್ರನಾಗಿದ್ದು, ಕಾಶ್ಮೀರ ಕಣಿವೆಯಲ್ಲಿ ಬದುಕುಳಿದ ಏಕೈಕ ಸ್ಥಳೀಯ ಭಯೋತ್ಪಾದಕ ಎಂದು ಹೇಳಲಾಗಿದೆ.

ಹೀಗಾಗಿ ಭದ್ರತಾ ಪಡೆಗಳು ಲತೀಫ್ ಭಟ್ನ ಪತ್ತೆಗೆ ಎನ್ಕೌಂಟರ್ ಸ್ಥಳದ ಸುತ್ತಮುತ್ತಲಿನ ಪ್ರದೇಶದಲ್ಲಿ ವ್ಯಾಪಕ ಶೋಧ ಕಾರ್ಯಾಚರಣೆ ಮುಂದುವರಿಸಿವೆ. ಅಧಿಕಾರಿಗಳು ಹೇಳುವಂತೆ, ಉಗ್ರ ಲತೀಫ್ ಭಟ್ ಸುಮಾರು 6 ತಿಂಗಳ ಕಾಲ ಕುಲ್ಗಾಮ್ ಪ್ರದೇಶದಲ್ಲಿ ಆಶ್ರಯ ಮತ್ತು ಲಾಜಿಸ್ಟಿಕಲ್ ಬೆಂಬಲ ಪಡೆದಿದ್ದ. ಕಳೆದ ಬುಧವಾರ ಸಿಆರ್ಪಿಎಫ್ ಪೋಸ್ಟ್ ಮೇಲೆ ದಾಳಿ ನಡೆಸುವ ಮೊದಲು ಇಬ್ಬರೂ ಸುತ್ತಾಟ ನಡೆಸಿ, ಪರಿಸ್ಥಿತಿಯನ್ನ ಗಮನಿಸಿದ್ದರು.
