– ಕಬ್ಬಿಗೆ ಬೆಂಬಲ ಬೆಲೆ ನೀಡಲು ಕೆಲ ಕಾರ್ಖಾನೆಗಳ ಹಿಂದೇಟು
ಹಾವೇರಿ: ಜಿಲ್ಲೆಯ ಕಬ್ಬು ಬೆಳೆಗಾರರು (Farmers) ಮತ್ತು ಸಕ್ಕರೆ ಕಾರ್ಖಾನೆ (Sugar Factory) ಮಾಲೀಕರ ನಡುವಿನ ದರ ಸಮರ ತಾರಕಕ್ಕೇರಿದೆ. ಪ್ರತಿ ಟನ್ ಕಬ್ಬಿಗೆ 3,600 ರೂಪಾಯಿ ದರ ನಿಗದಿಪಡಿಸಲು ಜಿಲ್ಲೆಯ ಮೂರು ಕಾರ್ಖಾನೆಗಳು ಹಿಂದೇಟು ಹಾಕಿವೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ರೈತ ಸಂಘಟನೆಗಳು ಇಂದು ಸಚಿವ ರುದ್ರಪ್ಪ ಲಮಾಣಿ (Rudrappa Lamani) ಮನೆಯ ಮುಂದೆ ಅಹೋರಾತ್ರಿ ಧರಣಿ ಸತ್ಯಾಗ್ರಹಕ್ಕೆ ಕರೆ ನೀಡಿದ್ದಾರೆ.
ಸಕ್ಕರೆ ಸಚಿವ ರುದ್ರಪ್ಪ ಲಮಾಣಿ ಸ್ವಕ್ಷೇತ್ರದಲ್ಲಿ ಕಬ್ಬುಬೆಳೆಗಾರರ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿದೆ. ಬೆಳಗಾವಿ ಹಾಗೂ ಕಲಬುರಗಿ ಜಿಲ್ಲೆಯ ರೈತರಿಗೆ ನೀಡುತ್ತಿರುವಂತೆ, ಪ್ರತಿ ಟನ್ ಕಬ್ಬಿಗೆ 3,600 ರೂಪಾಯಿ ದರ ಘೋಷಣೆ ಮಾಡಬೇಕು ಅನ್ನೋದು ರೈತರ ಬೇಡಿಕೆಯಾಗಿದೆ. ಆದರೆ, ಜಿಲ್ಲೆಯ ಮೂರು ಸಕ್ಕರೆ ಕಾರ್ಖಾನೆಗಳು ಈ ದರ ನೀಡಲು ಹಿಂದೇಟು ಹಾಕುತ್ತಿವೆ. ಕಬ್ಬಿನ ದರ ನಿಗದಿ ಸಂಬಂಧ ಕಳೆದ ಮೂರು ದಿನಗಳ ಹಿಂದೆ ಡಿಸಿ ಕಚೇರಿಯಲ್ಲಿ ನಡೆದ ದರ ನಿಗದಿ ಸಭೆ ವಿಫಲವಾಗಿದೆ. ಅಷ್ಟೇ ಅಲ್ಲ, ಇದುವರೆಗೂ ಐದು ಬಾರಿ ಸಭೆ ಕರೆದರೂ ಕಾರ್ಖಾನೆ ಮಾಲೀಕರು ಒಂದೇ ಒಂದು ಸಭೆಗೂ ಹಾಜರಾಗಿಲ್ಲ. ಕೇವಲ ಸಿಬ್ಬಂದಿ ಕಳುಹಿಸುವ ಮೂಲಕ ಡಿಸಿ ಹಾಗೂ ಸಚಿವರ ಮಾತಿಗೂ ಕಾರ್ಖಾನೆ ಮಾಲೀಕರು ಕವಡೆ ಕಾಸಿನ ಕಿಮ್ಮತ್ತು ನೀಡಿಲ್ಲ. ಕಾರ್ಖಾನೆ ಮಾಲೀಕರ ಈ ಧೋರಣೆಯಿಂದ ರೊಚ್ಚಿಗೆದ್ದಿರುವ ಹಾವೇರಿ ಜಿಲ್ಲೆಯ ಎಲ್ಲಾ ರೈತ ಸಂಘಟನೆಗಳು ಇಂದು ಬೃಹತ್ ಹೋರಾಟಕ್ಕೆ ಕರೆ ನೀಡಿವೆ. ಇದನ್ನೂ ಓದಿ: ಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಶಾಕ್ – ರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ
ಇಂದು ಹಾವೇರಿಯ ಹುಕ್ಕೇರಿಮಠದಿಂದ ಪಾದಯಾತ್ರೆ ಆರಂಭಿಸಲಿರುವ ಸಾವಿರಾರು ರೈತರು, ನೇರವಾಗಿ ಸಚಿವ ರುದ್ರಪ್ಪ ಲಮಾಣಿ ಅವರ ನಿವಾಸದ ಮುಂದೆ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಲಿದ್ದಾರೆ. ಪ್ರತಿ ಟನ್ ಕಬ್ಬಿಗೆ 3,600 ರೂಪಾಯಿ ದರ ಘೋಷಣೆಯಾಗುವವರೆಗೂ ಹೋರಾಟದಿಂದ ಹಿಂದೆ ಸರಿಯುವ ಮಾತೇ ಇಲ್ಲ ಅಂತ ರೈತರು ಹೇಳಿದ್ದಾರೆ. ಸಕ್ಕರೆ ಸಚಿವ ರುದ್ರಪ್ಪ ಲಮಾಣಿ ನಮ್ಮ ಮತದಿಂದ ಸಚಿವರಾಗಿದ್ದಾರೆ. ಆದರೆ, ನಮಗೆ ವಿಷ ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಜೊತೆಗೆ ಮತ್ತೊಮ್ಮೆ ಚರ್ಚೆ ನಡೆಸುವ ಸಾಧ್ಯತೆ ಇದೆ. ಇದನ್ನೂ ಓದಿ: ರಸ್ತೆ ಸೇರಿ ಗ್ರಾಮೀಣಾಭಿವೃದ್ಧಿಗೆ 16,000 ಕೋಟಿ ರೂ.: ಈಶ್ವರ ಖಂಡ್ರೆ
ರುದ್ರಪ್ಪ ಲಮಾಣಿ ನಿವಾಸದ ಸುತ್ತ ನಿಷೇಧಾಜ್ಞೆ:
ಕಬ್ಬು ಬೆಳೆಗಾರರು ಇಂದು ಸಕ್ಕರೆ ಸಚಿವರ ಮನೆಯ ಮುಂದೆ ಧರಣಿ ಸತ್ಯಾಗ್ರಹಕ್ಕೆ ಕರೆ ನೀಡಿದ್ದಾರೆ. ಕಬ್ಬು ಬೆಳೆಗಾರರ ಪ್ರತಿಭಟನೆ ಹಿನ್ನೆಲೆಯಲ್ಲಿ ಸಕ್ಕರೆ ಸಚಿವ ರುದ್ರಪ್ಪ ಲಮಾಣಿ ನಿವಾಸದ ಸುತ್ತ 250 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಇದನ್ನೂ ಓದಿ: ಬೆಂಗಳೂರಲ್ಲಿ ಅನ್ನಭಾಗ್ಯ ಅಕ್ಕಿ, ರಾಗಿಗೆ ಕನ್ನ – ಅಂಗನವಾಡಿಯ ಪುಷ್ಟಿ ಪೌಡರ್ಗೂ ಕಳ್ಳರ ಕನ್ನ.!
ಸಿಎಂ ಡಿಕೆಶಿಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪತ್ರ:
ಕಬ್ಬು ಬೆಳೆಗಾರರ ಸಮಸ್ಯೆ ಬಗೆಹರಿಸಲು ತಕ್ಷಣವೇ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸಿಎಂ ಡಿಕೆ ಶಿವಕುಮಾರ್ಗೆ ಪತ್ರ ಬರೆದಿದ್ದಾರೆ. ಕೇಂದ್ರ ಸರ್ಕಾರವು ರೈತರು, ಸಕ್ಕರೆ ಕಾರ್ಖಾನೆಗಳ ನಡುವೆ ಸಮತೋಲನ ಕಾಯ್ದುಕೊಂಡಿದೆ. ಇದೇ ನಿಟ್ಟಿನಲ್ಲಿ ರೈತರ ಸಮಸ್ಯೆಗಳನ್ನು ಪರಿಹರಿಸಲು ರಾಜ್ಯ ಸರ್ಕಾರವೂ ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಜಿಬಿಎ ಚುನಾವಣೆ ಮುಂದೂಡಿಕೆಗೆ ಸುಪ್ರೀಂ ಮೊರೆ ಹೋದ ರಾಜ್ಯ ಸರ್ಕಾರ!
