– ಗೋಡೌನ್ಗಳ ಮೇಲೆ ಆಹಾರ ಇಲಾಖೆ ರೇಡ್
ಬೆಂಗಳೂರು: ಸರ್ಕಾರದ ಪ್ರಮುಖ ಗ್ಯಾರಂಟಿಯಾದ ಅನ್ನಭಾಗ್ಯ ಅಕ್ಕಿಗೆ ಬೆಂಗಳೂರಲ್ಲಿ (Bengaluru) ಖದೀಮರು ಕನ್ನ ಹಾಕಿದ್ದು, ಬಡವರ ಅಕ್ಕಿ, ರಾಗಿ ಸಂಗ್ರಹಿಸಿದ್ದ ಖಾಸಗಿ ಗೋದಾಮಿನ ಮೇಲೆ ಆಹಾರ ಇಲಾಖೆ (Food Department) ಅಧಿಕಾರಿಗಳು ದಾಳಿ ಮಾಡಿದ್ದಾರೆ. ಇದರ ಜೊತೆಗೆ ಗರ್ಭಿಣಿ ಮತ್ತು ಮಕ್ಕಳಿಗೆ ನೀಡೋ ಅಂಗನವಾಡಿಯ ಪುಷ್ಟಿ ಆಹಾರ ಕದ್ದಿರೋದು ಆತಂಕಕಾರಿಯಾಗಿದೆ.
ದಿನದಿಂದ ದಿನಕ್ಕೆ ಅಕ್ಕಿ, ರಾಗಿ ಮೊದಲಾದ ಆಹಾರ ಪದಾರ್ಥಗಳ ಬೆಲೆ ಗಗನಕ್ಕೇರುತ್ತಿದೆ. ಹೀಗಾಗಿ ಬಡ ಹಾಗೂ ಮಧ್ಯಮ ವರ್ಗದ ಜನ ಸರ್ಕಾರ ಉಚಿತವಾಗಿ ನೀಡೋ ಅನ್ನಭಾಗ್ಯ ಅಕ್ಕಿ (Annabhagya Rice), ರಾಗಿ ಮೊದಲಾದ ಆಹಾರ ಧಾನ್ಯಗಳ ಮೇಲೆ ಅವಲಂಬನೆಯಾಗಿದ್ದಾರೆ. ಆದ್ರೆ ಈ ಅನ್ನಭಾಗ್ಯ ಅಕ್ಕಿ ಬಡವರಿಗಿಂತಲೂ ಅಕ್ರಮ ಸಾಗಾಟಗಾರರ ಹೊಟ್ಟೆ ಸೇರುತ್ತಿದೆ.

ಅನ್ನಭಾಗ್ಯ ದಾಸ್ತಾನುಗಳು ಕಾಳಸಂತೆ ಸೇರುವುದನ್ನು ತಡೆಯುವ ನಿಟ್ಟಿನಲ್ಲಿ ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಶ್ರೀಕೃಷ್ಣ ನೇತೃತ್ವದಲ್ಲಿ ಕಾರ್ಯಚರಣೆ ನಡೆದಿದೆ. ನಿನ್ನೆ ಬೆಂಗಳೂರಲ್ಲಿ ಎರಡು ಕಡೆ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಲಗ್ಗೆರೆಯ ಕೆಂಪೇಗೌಡ ಲೇಔಟ್ನಲ್ಲಿ ಶೆಡ್ವೊಂದ್ರಲ್ಲಿ ಸಂಗ್ರಹಿಸಿದ್ದ ಹಾಗೂ ಸಾಗಾಣಿಕೆಗೆ ತಂದಿದ್ದ ಮಿನಿ ಟಾಟಾ ಎಸಿಯನ್ನ ವಶಪಡಿಸಿಕೊಳ್ಳಲಾಗಿದೆ. ಸುಮಾರು ಆರೇಳು ತಿಂಗಳ ಹಿಂದೆ ಕಟ್ಟಲಾದ ಶೆಡ್ನಲ್ಲಿ 60-70 ಕ್ವಿಂಟಾಲ್ ರಾಗಿ, 30-40 ಕ್ವಿಂಟಾಲ್ ಅಕ್ಕಿ ಹಾಗೂ ಗರ್ಭಿಣಿ, ಮಕ್ಕಳಿಗೆ ನೀಡೋ ಪುಷ್ಟಿ ಪೌಡರ್ ಹಾಗೂ ಲಾಡು ಪೌಡರ್ ಪ್ಯಾಕೇಟ್ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಇನ್ನೂ ಯಶವಂತಪುರ ಮತ್ತು ವಿಜಯನಗರದ ಗೋಡೌನ್ನಲ್ಲಿ ರೇಡ್ ನಡೆದಿದೆ. ರೇಡ್ ವೇಳೆ ಅಕ್ಕಿ ಹಾಗೂ ರಾಗಿಯಲ್ಲಿ ವ್ಯತ್ಯಾಸ ಕಂಡುಬಂದಿದೆ. ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಶ್ರೀಕೃಷ್ಣ ಅನ್ನಭಾಗ್ಯ ಅಕ್ಕಿ ಕಳ್ಳರ ವಿರುದ್ಧ ಕಠಿಣ ಕ್ರಮ ಜರುಗಿಸುವ ಭರವಸೆ ನೀಡಿದ್ದಾರೆ.

ಒಟ್ಟಿನಲ್ಲಿ ಅನ್ನಭಾಗ್ಯ ಅಕ್ಕಿಯ ಕಾಳಸಂತೆಕೋರರಿಗೆ ಸರ್ಕಾರ ಸರಿಯಾಗಿ ಬಿಸಿ ಮುಟ್ಟಿಸಬೇಕಿದೆ. ಬೆಂಗಳೂರು ಸೇರಿದಂತೆ ಹಲವಡೆ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿ ಇದೇ ರೀತಿ ಕಾರ್ಯಾಚರಣೆ ನಡೆಸಬೇಕಿದೆ.
