ನಿರ್ದೇಶಕ ದಯಾಳ್ ಪದ್ಮನಾಭ್ ಅವರು ‘ನರಿ ಕಥೆ’ (Nari Kathe) ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಮರಳುತ್ತಿದ್ದಾರೆ. ಡಿ ಪಿಕ್ಚರ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಅವರೇ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ‘ಆ ಕರಾಳ ರಾತ್ರಿ’ ಚಿತ್ರದ ಬಳಿಕ ಸುಮಾರು ಮೂರು ವರ್ಷಗಳ ನಂತರ ಅವರು ಕನ್ನಡ ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ್ದಾರೆ.
ವಿಭಿನ್ನ ಕಥಾಹಂದರ ಹಾಗೂ ಪಾತ್ರಗಳಿಗೆ ಹೆಚ್ಚಿನ ಮಹತ್ವ ನೀಡಿರುವ ‘ನರಿ ಕಥೆ’ ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ಬೆಂಗಳೂರಿನ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ನೆರವೇರಿತು. ಬಿ. ಸುರೇಶ್, ಮಿತ್ರಾ, ವೀಣಾ ಸುಂದರ್, ಬಿಂಬಶ್ರೀ, ಸುಭಾಷ್ ಪಾರ್ಥ ಹಾಗೂ ಪ್ರಿಯಾ ಗೌಡ ಸೇರಿದಂತೆ ಹಲವು ಕಲಾವಿದರು ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.
‘ನರಿ ಕಥೆ’ ಸಂಪೂರ್ಣವಾಗಿ ಪಾತ್ರಾಧಾರಿತ ಸಿನಿಮಾವಾಗಿದೆ. ಇಲ್ಲಿ ನಾಯಕ, ನಾಯಕಿಗಿಂತ ಕಥೆ ಮತ್ತು ಪಾತ್ರಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಸುಮಾರು ಐದಾರು ವರ್ಷಗಳ ಹಿಂದೆಯೇ ಚಿತ್ರದ ಚಿತ್ರಕಥೆ ಸಿದ್ಧವಾಗಿತ್ತು. ಆದರೆ ಹಲವು ಕಾರಣಗಳಿಂದ ಸಿನಿಮಾ ಆರಂಭವಾಗಿರಲಿಲ್ಲ.
ಈಗ ದೇವರ ಆಶೀರ್ವಾದದಿಂದ ಚಿತ್ರವನ್ನು ಕೈಗೆತ್ತಿಕೊಂಡಿದ್ದೇನೆ. ಇದು ನನ್ನ ನಿರ್ದೇಶನದ ವೃತ್ತಿಜೀವನದ 23ನೇ ಚಿತ್ರವಾಗಿದ್ದು, ಕನ್ನಡದಲ್ಲಿ 19ನೇ ಸಿನಿಮಾವಾಗಿದೆ. ಸಂಖ್ಯಾಶಾಸ್ತ್ರದ ಪ್ರಕಾರ ಐದು ನನ್ನ ಅದೃಷ್ಟದ ಸಂಖ್ಯೆ. ಈ ಸಿನಿಮಾದ ಬಗ್ಗೆಯೂ ವಿಶೇಷ ನಿರೀಕ್ಷೆ ಮತ್ತು ವಿಶ್ವಾಸವಿದೆ. ವಿಭಿನ್ನ ಕಥೆ ಹಾಗೂ ತೀವ್ರ ಭಾವನೆಗಳನ್ನು ಒಳಗೊಂಡ ಸುಂದರ ಚಿತ್ರವಾಗಿ ‘ನರಿ ಕಥೆ’ ಮೂಡಿಬರಲಿದೆ ಎಂದು ನಿರ್ದೇಶಕ ದಯಾಳ್ ಪದ್ಮನಾಭ್ ತಿಳಿಸಿದ್ದಾರೆ.
ಎಲ್ಲವೂ ಅಂದುಕೊಂಡಂತೆ ನಡೆದರೆ 2027ರ ಮಾರ್ಚ್ 6ರಂದು ಮಹಾಶಿವರಾತ್ರಿಯ ಶುಭದಿನದಂದು ಚಿತ್ರವನ್ನು ಬಿಡುಗಡೆ ಮಾಡುವ ಯೋಜನೆ ಇದೆ. ಅದಕ್ಕಾಗಿ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಚಿತ್ರದ ಕಥೆ ಕೇಳಿದ ತಕ್ಷಣವೇ ಸಂತೋಷವಾಯಿತು. ಇಂತಹ ಪಾತ್ರದಲ್ಲಿ ಅಭಿನಯಿಸಬೇಕು ಎಂಬ ಆಸೆ ಮೂಡಿತು. ನಾನು ಇಷ್ಟಪಟ್ಟಂತಹ ಪಾತ್ರವೇ ಈ ಸಿನಿಮಾದಲ್ಲಿ ಸಿಕ್ಕಿದೆ. ಕಥೆಗೆ ಮಹತ್ವವಿರುವ ಪಾತ್ರ ಇದಾಗಿದ್ದು, ದಯಾಳ್ ಅವರೊಂದಿಗೆ ಹಾಗೂ ಇಡೀ ಚಿತ್ರತಂಡದ ಜೊತೆ ಕೆಲಸ ಮಾಡುತ್ತಿರುವುದು ಖುಷಿಯ ವಿಚಾರ ಎಂದು ನಟ ಬಿ. ಸುರೇಶ್ ಹೇಳಿದ್ದಾರೆ.
‘ನರಿ ಕಥೆ’ ಚಿತ್ರದಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿರುವುದು ಸಂತೋಷ ತಂದಿದೆ ಎಂದು ನಟಿ ಮಿತ್ರಾ ಹೇಳಿದ್ದಾರೆ. ತಮ್ಮನ್ನು ಸಿನಿಮಾ ಮುಖ್ಯವಾಹಿನಿಗೆ ಪರಿಚಯಿಸಿದವರು ದಯಾಳ್ ಪದ್ಮನಾಭ್. ಗಣೇಶ್ ಅವರ ಮೂಲಕ ತಮ್ಮನ್ನು ಗುರುತಿಸಿ ಅವಕಾಶ ನೀಡಿದ್ದರು. ಇದೀಗ ಅವರ ನಿರ್ದೇಶನದಲ್ಲಿ ಮತ್ತೊಮ್ಮೆ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿರುವುದು ಖುಷಿಯ ವಿಚಾರ. ಒಳ್ಳೆಯ ಕಥೆ ಮತ್ತು ಪ್ರತಿಭಾವಂತ ಕಲಾವಿದರ ತಂಡದೊಂದಿಗೆ ಕೆಲಸ ಮಾಡುತ್ತಿರುವುದು ಸಂತೋಷ ತಂದಿದೆ ಎಂದಿದ್ದಾರೆ.ಇದನ್ನೂ ಓದಿ: ಧರ್ಮದ ಆಧಾರದ ಮೇಲೆ ಯಾವುದೇ ದಾಖಲೆಗಳಿಲ್ಲ – ಹಿಂದೂಗಳು ನಾಪತ್ತೆ ಎಂಬ ಯೋಗಿ ಹೇಳಿಕೆಗೆ ಯುಪಿ ಸಿಇಒ ಕೌಂಟರ್
ಮೊದಲ ಬಾರಿಗೆ ಕಥೆ ಕೇಳಿದಾಗಲೇ ಬಹಳ ಇಷ್ಟವಾಯಿತು. ಅದರಲ್ಲೂ ಕಥೆಯ ಎರಡನೇ ಭಾಗ ತುಂಬಾ ಚೆನ್ನಾಗಿದೆ. ದಯಾಳ್ ಪದ್ಮನಾಭ್ ಅವರ ನಿರ್ದೇಶನದಲ್ಲಿ ಕೆಲಸ ಮಾಡುವುದು ಉತ್ತಮ ಅನುಭವ. ಅವರು ಒಬ್ಬ ಪರ್ಫೆಕ್ಷನಿಸ್ಟ್. ಕಲಾವಿದರಿಂದ ಯಾವ ರೀತಿಯ ಅಭಿನಯ ಬೇಕು ಎಂಬುದನ್ನು ಸ್ಪಷ್ಟವಾಗಿ ವಿವರಿಸುತ್ತಾರೆ. ಸಿನಿಮಾಕ್ಕೆ ಅಗತ್ಯವಿರುವಷ್ಟು ಮಾತ್ರ ಚಿತ್ರೀಕರಣ ಮಾಡುವ ಅವರ ಶಿಸ್ತು ಮತ್ತು ಕಾರ್ಯವೈಖರಿ ಮೆಚ್ಚುವಂತದ್ದು ಎಂದು ನಟಿ ವೀಣಾ ಸುಂದರ್ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ನಟ ಸುಭಾಷ್ ಪಾರ್ಥ, ನಟಿಯರಾದ ಬಿಂಬಶ್ರೀ ಮತ್ತು ಪ್ರಿಯಾ ಗೌಡ ಕೂಡ ಉಪಸ್ಥಿತರಿದ್ದು, ಚಿತ್ರದ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡರು. ಕ್ರಿಯೇಟಿವ್ ಹಾಗೂ ಕಾರ್ಯಕಾರಿ ನಿರ್ಮಾಪಕ ಅವಿನಾಶ್ ಯು. ಶೆಟ್ಟಿ ಮಾತನಾಡಿ, ಚಿತ್ರಕ್ಕೆ ಎಲ್ಲರ ಪ್ರೋತ್ಸಾಹ ಮತ್ತು ಬೆಂಬಲ ಕೋರಿದರು. ಛಾಯಾಗ್ರಾಹಕ ಅಮರ್ ಗೌಡ ಕೂಡ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.ಇದನ್ನೂ ಓದಿ: ʻತಂದೆಯ ತೊಡೆ ಮೇಲೆ ತಾಯಿ ಕುಳಿತಿರುತ್ತಿದ್ದರುʼ ಹೇಳಿಕೆಗೆ ಬಿಜೆಪಿ ವ್ಯಂಗ್ಯ; ಶಿವ-ಪಾರ್ವತಿ ಫೋಟೋ ಹಾಕಿ ರಾಹುಲ್ ತಿರುಗೇಟು
