ನವದೆಹಲಿ: ಬೇಲೂರು (Beluru) ಭಾಗದಲ್ಲಿ ಆನೆ ದಾಳಿ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಆನೆಗಳನ್ನು ಭದ್ರಾ ಮೇಲ್ದಂಡೆ ಪ್ರದೇಶಕ್ಕೆ ಸ್ಥಳಾಂತರಿಸುವುದಾಗಿ ಸಚಿವ ಶಿವಲಿಂಗೇಗೌಡ ನೀಡಿರುವ ಹೇಳಿಕೆಗೆ ಸಂಸದ ಕೋಟಾ ಶ್ರೀನಿವಾಸ ಪೂಜಾರಿ (Kota Srinivas Poojary) ಕಳವಳ ವ್ಯಕ್ತಪಡಿಸಿದ್ದಾರೆ.
ಮಲೆನಾಡು ಭಾಗದಲ್ಲಿ ಆನೆಗಳನ್ನು (Elephants) ತಂದು ಬಿಡುವುದು ಸೂಕ್ತವಲ್ಲ. ಸಚಿವರ ಹೇಳಿಕೆಯಿಂದ ಸ್ಥಳೀಯ ಜನರಲ್ಲಿ ಆತಂಕ ಉಂಟಾಗಿದೆ ಎಂದು ಅವರು ಹೇಳಿದ್ದಾರೆ.

ನವದೆಹಲಿಯಲ್ಲಿ ಮಾತನಾಡಿದ ಕೋಟಾ ಶ್ರೀನಿವಾಸ ಪೂಜಾರಿ, ನಮ್ಮ ಭಾಗದಲ್ಲಿ ಈವರೆಗೆ ಆನೆ ದಾಳಿಯಿಂದ 25 ಮಂದಿ ಸಾವನ್ನಪ್ಪಿದ್ದಾರೆ. ಜನರು ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಈಗಾಗಲೇ 50 ರಿಂದ 60 ಆನೆಗಳನ್ನು ಸ್ಥಳಾಂತರಿಸಲಾಗಿದೆ ಎಂದು ಹೇಳಲಾಗುತ್ತಿದೆ. ಮತ್ತೆ ಅದೇ ಪ್ರಮಾಣದ ಆನೆಗಳನ್ನು ಅದೇ ಪ್ರದೇಶಕ್ಕೆ ತಂದು ಬಿಡುವ ನಿರ್ಧಾರ ಎಷ್ಟು ಸೂಕ್ತ? ಎಂದು ಪ್ರಶ್ನಿಸಿದರು.
ಸಚಿವ ಶಿವಲಿಂಗೇಗೌಡರು ಯಾವ ಅರ್ಥದಲ್ಲಿ ಈ ಹೇಳಿಕೆ ನೀಡಿದ್ದಾರೆ ಎಂಬುದು ತಿಳಿದಿಲ್ಲ. ಆನೆಗಳ ಸ್ಥಳಾಂತರದ ವಿಚಾರದಲ್ಲಿ ಅರಣ್ಯ ಸಚಿವ ರಾಮಲಿಂಗ ರೆಡ್ಡಿ ಅವರು ವಿಶೇಷ ಗಮನ ಹರಿಸಬೇಕು. ಚಿಕ್ಕಮಗಳೂರು ಜಿಲ್ಲೆಯ ಜನರ ಹಿತವನ್ನು ಕಾಪಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಮನವಿ ಮಾಡಿದ್ದಾರೆ.
