– ನಿರೀಕ್ಷೆಗಿಂತ 2.58 ಕೋಟಿಕ್ಕೂ ಹೆಚ್ಚು ಮತದಾರರ ಸಂಖ್ಯೆ ಕಡಿಮೆ
ಲಕ್ನೋ: ಚುನಾವಣಾ ಆಯೋಗವು (Election Commission) ಮಂಗಳವಾರ ಉತ್ತರ ಪ್ರದೇಶದ ಕರಡು ಮತದಾರರ ಪಟ್ಟಿಯನ್ನ ವಿಶೇಷ ಸಾರಾಂಶ ಪರಿಷ್ಕರಣೆ (SSR) ಅಡಿಯಲ್ಲಿ ಬಿಡುಗಡೆ ಮಾಡಿದ್ದು, ರಾಜ್ಯದ ಒಟ್ಟು ಮತದಾರರ (Voters) ಸಂಖ್ಯೆ 13.58 ಕೋಟಿಗೂ ಹೆಚ್ಚಾಗಿದೆ.
ಕಳೆದ ಏಪ್ರಿಲ್ 10 ರಂದು ಪ್ರಕಟವಾದ ಹಿಂದಿನ ಮತದಾರರ ಪಟ್ಟಿಗೆ ಹೋಲಿಸಿದ್ರೆ ಇತ್ತೀಚಿನ ಪಟ್ಟಿಯು ಹೆಚ್ಚುವರಿ ಸುಮಾರು 18.84 ಲಕ್ಷ ಮತದಾರರು ಸೇರ್ಪಡೆಯಾಗಿರುವುದು ಕಂಡುಬಂದಿದೆ. ಈ ಕುರಿತು ಉತ್ತರ ಪ್ರದೇಶದ (Uttar Pradesh) ಮುಖ್ಯ ಚುನಾವಣಾ ಅಧಿಕಾರಿ ನವದೀಪ್ ರಿನ್ವಾ (Navdeep Rinwa) ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ.
ಯುಪಿಯಲ್ಲಿ ಎಷ್ಟು ಮತದಾರರಿದ್ದಾರೆ?
ಕರಡು ಪರಿಷ್ಕರಣೆ ಪಟ್ಟಿಯ ಪ್ರಕಾರ, ರಾಜ್ಯದಲ್ಲಿ ಈಗ 13,58,68,905 ನೋಂದಾಯಿತ ಮತದಾರರು ಇದ್ದಾರೆ. ಇದರಲ್ಲಿ 7,38,58,510 ಪುರುಷರು ಮತ್ತು 6,20,06,353 ಮಹಿಳಾ ಮತದಾರರು (Women Voters) ಸೇರಿದ್ದಾರೆ. ಪಟ್ಟಿಯಲ್ಲಿ 18-19 ವಯಸ್ಸಿನ 11,83,352 ಮತದಾರರು ಇದ್ದಾರೆ. ಕಳೆದ ಏಪ್ರಿಲ್ 10 ರಂದು ಪ್ರಕಟವಾದ ಮತದಾರರ ಪಟ್ಟಿಯಲ್ಲಿ ಒಟ್ಟು ಮತದಾರರ ಸಂಖ್ಯೆ 13,39,84,792 ಇತ್ತು. ಹೊಸ ಕರಡು ಪರಿಷ್ಕರಣೆ ಪಟ್ಟಿಯಲ್ಲಿ ಮತದಾರರ ಸಂಖ್ಯೆ 13,58,68,905 ರಷ್ಟಾಗಿದ್ದು, ಒಟ್ಟು ಮತದಾರರ ಸಂಖ್ಯೆಯಲ್ಲಿ 18,84,113 ರಷ್ಟು ಹೆಚ್ಚಳವಾಗಿದೆ ಎಂದು ತಿಳಿಸಿದ್ದಾರೆ.
ಜನಸಂಖ್ಯೆಯ ಅಂದಾಜಿನ ಪ್ರಕಾರ, ಉತ್ತರ ಪ್ರದೇಶದಲ್ಲಿ ನಿರೀಕ್ಷೆಗಿಂತ 2.58 ಕೋಟಿ (2,58,16,096) ಕ್ಕೂ ಹೆಚ್ಚು ಮತದಾರರು ಕಡಿಮೆ ಇದ್ದಾರೆ. ರಾಜ್ಯದಲ್ಲಿ ಸುಮಾರು 8.32 ಕೋಟಿ (83,276,000) ಪುರುಷ ಮತದಾರರು ಇರಬೇಕಿತ್ತು, ಆದರೆ ಕರಡು ಮತದಾರರ ಪಟ್ಟಿಯಲ್ಲಿ 94.17 ಲಕ್ಷ (9,417,490) ಪುರುಷ ಮತದಾರರು ಕಡಿಮೆ ಇದ್ದಾರೆ. ಅದೇ ರೀತಿ, ಮಹಿಳಾ ಮತದಾರರ ಅಂದಾಜು ಸಂಖ್ಯೆ 7.84 ಕೋಟಿ (78,409,000) ಇರಬೇಕಿತ್ತು. ಆದರೆ ಕರಡು ಪಟ್ಟಿಯಲ್ಲಿ ಕೇವಲ 6.20 ಕೋಟಿ (62,006,352) ಇದ್ದು, ಇದು ಸರಿಸುಮಾರು 1.64 ಕೋಟಿ ಮಹಿಳಾ ಮತದಾರರ ಕೊರತೆಯನ್ನು ಸೂಚಿಸಿದೆ.
ಅಂತಿಮ ಮತದಾರರ ಪಟ್ಟಿ ಬಿಡುಗಡೆ ಯಾವಾಗ?
ಚುನಾವಣಾ ಆಯೋಗವು ನವೆಂಬರ್ 17 ರಂದು ಕರಡು ಮತದಾರರ ಪಟ್ಟಿಯನ್ನ ಬಿಡುಗಡೆ ಮಾಡಿದೆ. ಮತದಾರರು ನವೆಂಬರ್ 17 ಮತ್ತು ಡಿಸೆಂಬರ್ 16ರ ನಡುವೆ ಹಕ್ಕು ಮತ್ತು ಆಕ್ಷೇಪಣೆಗಳನ್ನ ಸಲ್ಲಿಸಬಹುದು. ಈ ಹಕ್ಕು ಮತ್ತು ಆಕ್ಷೇಪಣೆಗಳನ್ನ ಪರಿಹರಿಸುವ ಪ್ರಕ್ರಿಯೆಯನ್ನು ಡಿಸೆಂಬರ್ 28 ರೊಳಗೆ ಪೂರ್ಣಗೊಳಿಸಲು ನಿರ್ಧರಿಸಲಾಗಿದೆ.
ಅಂತಿಮ ಮತದಾರರ ಪಟ್ಟಿಯನ್ನು 2027ರ ಜನವರಿ 4, 2027 ರಂದು ಪ್ರಕಟಿಸಲು ನಿರ್ಧರಿಸಲಾಗಿದೆ. ಹಕ್ಕು ಮತ್ತು ಆಕ್ಷೇಪಣೆಗಳು ನವೆಂಬರ್ 17 ರಿಂದ ಡಿಸೆಂಬರ್ 16 ರವರೆಗೆ ಸಲ್ಲಿಸಬಹುದಾಗಿದೆ. ಇದನ್ನ ಡಿಸೆಂಬರ್ 28 ರಂದು ನಿರ್ಣಯಿಸಲಾಗುತ್ತದೆ.
ಬಿಜೆಪಿಯಿಂದ ‘ಮತದಾರರ ನೋಂದಣಿ ಅಭಿಯಾನ’
ಇನ್ನೂ ಉತ್ತರ ಪ್ರದೇಶದಲ್ಲಿ ಬಿಜೆಪಿ ತನ್ನ ‘ಮತದಾರರ ನೋಂದಣಿ ಅಭಿಯಾನ’ ಅಥವಾ ‘ಮತದಾರರ ಜೋಡೋ ಅಭಿಯಾನ’ವನ್ನು ಪ್ರಾರಂಭಿಸುವುದರೊಂದಿಗೆ ಕರಡು ಮತದಾರರ ಪಟ್ಟಿಯನ್ನ ಬಿಡುಗಡೆ ಮಾಡಲಾಗಿದೆ. ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ, ಪಕ್ಷವು ನವೆಂಬರ್ 17 ರಿಂದ ಡಿಸೆಂಬರ್ 16 ರವರೆಗೆ ಒಂದು ತಿಂಗಳ ಕಾಲ ಮತದಾರರ ಪಟ್ಟಿಯಲ್ಲಿ ನೋಂದಾಯಿಸದ ಸುಮಾರು 1.27 ಕೋಟಿ ಜನರನ್ನು ನೋಂದಾಯಿಸಲು ಯೋಜಿಸಿದೆ. ರಾಜ್ಯದ 1,73,730 ಮತಗಟ್ಟೆಗಳಲ್ಲಿ ತಲಾ 50 ಹೊಸ ಮತದಾರರನ್ನ ನೋಂದಾಯಿಸುವ ಗುರಿಯನ್ನು ಬಿಜೆಪಿ ಹಾಕಿಕೊಂಡಿದೆ. ಇದು ಸಾಧಿಸಿದ್ರೆ, ಸುಮಾರು 86.86 ಲಕ್ಷ ಹೊಸ ಮತದಾರರ ನೋಂದಣಿಯಾಗುತ್ತದೆ.

