ಚಿಕ್ಕೋಡಿ: ಕುಡಿದು ವಾಹನ ಚಲಾಯಿಸುವವರ ವಿರುದ್ಧ ಪ್ರಕರಣ ದಾಖಲಿಸಿ ಬುದ್ಧಿ ಹೇಳಬೇಕಾದ ಸಂಚಾರಿ ಪೊಲೀಸ್(Traffic Police) ಪೇದೆಯೇ ಸ್ವತಃ ಮದ್ಯದ ಅಮಲಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಆರೋಪ ಕೇಳಿಬಂದಿದ್ದು, ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಬೆಳಗಾವಿ(Belagavi) ಜಿಲ್ಲೆಯ ಚಿಕ್ಕೋಡಿ ಪಟ್ಟಣದ ಕೆ.ಸಿ. ರಸ್ತೆಯಲ್ಲಿ ಈ ಘಟನೆ ನಡೆದಿದೆ. ಚಿಕ್ಕೋಡಿ ಸಂಚಾರಿ ಪೊಲೀಸ್ ಠಾಣೆಯ ಪೇದೆ ವೈ.ಎಂ. ಪಾಟೀಲ್ ಅವರು ಕೆ.ಸಿ. ರಸ್ತೆಯಲ್ಲಿ ವಾಹನ ತಪಾಸಣೆ ನಡೆಸುತ್ತಾ, ಸವಾರರ ವಿರುದ್ಧ ಡ್ರಿಂಕ್ ಆಂಡ್ ಡ್ರೈವ್ (Drink and Drive) ಪ್ರಕರಣ ದಾಖಲಿಸುತ್ತಿದ್ದರು ಎನ್ನಲಾಗಿದೆ.
ಈ ವೇಳೆ ಪೇದೆಯ ಅಸಹಜ ವರ್ತನೆ ಮತ್ತು ನಡೆಯನ್ನು ಗಮನಿಸಿದ ಸ್ಥಳೀಯರು ಹಾಗೂ ವಾಹನ ಸವಾರರು ಅನುಮಾನಗೊಂಡು ಅವರನ್ನು ಪ್ರಶ್ನಿಸಿದ್ದಾರೆ. “ನೀವೇ ಕುಡಿದ ಅಮಲಿನಲ್ಲಿದ್ದುಕೊಂಡು ಇತರರ ವಿರುದ್ಧ ಡ್ರಿಂಕ್ ಆಂಡ್ ಡ್ರೈವ್ ಕೇಸ್ ಹಾಕುತ್ತಿದ್ದೀರಾ?” ಎಂದು ಸಾರ್ವಜನಿಕರು ಪೇದೆಯನ್ನು ಸುತ್ತುವರಿದು ತರಾಟೆಗೆ ತೆಗೆದುಕೊಂಡಿದ್ದಾರೆ. ಜನರ ನೇರ ಪ್ರಶ್ನೆಗಳಿಗೆ ಸಮರ್ಪಕವಾಗಿ ಉತ್ತರಿಸಲಾಗದೆ ಪೇದೆ ತಡಕಾಡಿದ ದೃಶ್ಯಗಳು ಕಂಡುಬಂದಿದ್ದು, ಸ್ಥಳದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.
ಕಾನೂನು ರಕ್ಷಣೆ ಮಾಡಬೇಕಾದ ಪೊಲೀಸರೇ ಸಮವಸ್ತ್ರದಲ್ಲಿ, ಅದೂ ಕರ್ತವ್ಯದ ವೇಳೆ ಮದ್ಯಪಾನ ಮಾಡಿದ್ದಾರೆಯೇ ಎಂಬ ಗಂಭೀರ ಪ್ರಶ್ನೆ ಇದೀಗ ಚಿಕ್ಕೋಡಿ ಪಟ್ಟಣದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಸಾರ್ವಜನಿಕ ವಲಯದಲ್ಲಿ ಪೊಲೀಸ್ ಇಲಾಖೆಯ ಘನತೆಗೆ ಧಕ್ಕೆ ತರುವ ಇಂತಹ ವರ್ತನೆಗಳ ವಿರುದ್ಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಹಿರಿಯ ಅಧಿಕಾರಿಗಳು ತಕ್ಷಣವೇ ತನಿಖೆ ನಡೆಸಿ, ತಪ್ಪಿತಸ್ಥ ಪೇದೆಯ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
